Site icon Vistara News

IND vs ENG: ಕೆಲವೇ ಕ್ಷಣದಲ್ಲಿ ಆರಂಭಗೊಳ್ಳಲಿದೆ ಭಾರತ-ಇಂಗ್ಲೆಂಡ್​ ಮೊದಲ ಟೆಸ್ಟ್​

Rahul Dravid speaks at a training session

ಹೈದರಾಬಾದ್​: ಬಹುನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್(IND vs ENG)​ ನಡುವಣ 5 ಪಂದ್ಯಗಳ ಸುದೀರ್ಘ‌ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಇನ್ನೇನು ಕೆಲವೇ ಹೊತ್ತಿನಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ಅಣಿಯಾಗಿರುವುದು ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​​ ಸ್ಟೇಡಿಯಂ. ಪಂದ್ಯ ಬೆಳಗ್ಗೆ 9.30ಕ್ಕೆ ಆರಂಭಗೊಳ್ಳಲಿದೆ.

ಈ ಪಂದ್ಯಕ್ಕೆ ಯಾವುದೇ ಮಳೆಯ ಹಾಗೂ ಹವಾಮಾನ ವೈಪರೀತ್ಯದ ಸಮಸ್ಯೆ ಇಲ್ಲ. 5 ದಿನಗಳು ಕೂಡ ಪಂದ್ಯಕ್ಕೆ ಸೂಕ್ತವಾದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಆದರೆ, ಬಿಸಿಲಿನ ತಾಪ ಕೊಂಚ ಅಧಿಕವಾಗಿರುವ ಸಾಧ್ಯತೆ ಇದೆ.

ಭಾರತ ತಂಡ ಇಲ್ಲಿ ಒಮ್ಮೆಯೂ ಸೋತಿಲ್ಲ. ಕಳೆದ ಐದು ವರ್ಷಗಳ ಬಳಿಕ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಈ ಹಿಂದೆ ಸ್ಪಿನ್​ ಪಿಚ್ ಆಗಿದ್ದರೂ ಕೂಡ ಪಂದ್ಯ ನಡೆಯದೆ ಹಲವು ವರ್ಷ ಆದ ಕಾರಣದಿಂದ ಈಗ ಪಿಚ್​ ಹೇಗೆ ವರ್ತಿಸುತ್ತದೆ ಎನ್ನುವುದು ಕೂಡ ಮುಖ್ಯವಾಗಿದೆ. ಆದರೂ ಕೂಡ ಉಭಯ ತಂಡಗಳು ಸ್ಪಿನ್​ಗೆ ಹೆಚ್ಚಿನ ಮಹತ್ವ ನೀಡಿದೆ. 

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಪಿಚ್ ಸ್ಪಿನ್‌ಗೆ ಒಲವು ತೋರುವ ನಿರೀಕ್ಷೆಯಿದೆ. ಭಾರತದ ಇಬ್ಬರು ಅಗ್ರ ದರ್ಜೆಯ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆ ಅಧಿಕ. ಸ್ಪಿನ್ ಸ್ನೇಹಿ ಪರಿಸ್ಥಿತಿಗಳನ್ನು ಪರಿಗಣಿಸಿ, ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡಲು ಒಲವು ತೋರಬಹುದು. ಏಕೆಂದರೆ ಇತ್ತೀಚೆಗೆ ಇಲ್ಲಿ ನಡೆದ ಟೆಸ್ಟ್​ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡವೇ ಗೆದ್ದು ಬೀಗಿದೆ.

ಇದನ್ನೂ ಓದಿ IND vs ENG: ಧ್ರುವ್ ಜುರೆಲ್ ಟೆಸ್ಟ್‌ಗೆ ಪದಾರ್ಪಣೆ ಸಾಧ್ಯತೆ

ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​​ ಸ್ಟೇಡಿಯಂನಲ್ಲಿ ಇದುವರೆಗೆ ಐದು ಟೆಸ್ಟ್​ ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟಿಂಗ್​ ಮತ್ತು ಬೌಲಿಂಗ್​ ನಡೆಸಿದ ತಂಡಗಳು ತಲಾ 2 ಬಾರಿ ಗೆದ್ದಿವೆ. 404 ರನ್​ ಮೊದಲ ಇನಿಂಗ್ಸ್​ನ ಸರಾಸರಿ ಮೊತ್ತವಾಗಿದೆ. ದ್ವಿತೀಯ ಇನಿಂಗ್ಸ್​ನ ಸರಾಸರಿ ಮೊತ್ತ 377 ರನ್​. ಇಲ್ಲಿ ದಾಖಲಾದ ಗರಿಷ್ಠ ಮೊತ್ತ 687/6. ಇದು ಭಾರತ ಮತ್ತು ಬಾಂಗ್ಲಾ ನಡುವಣ ಪಂದ್ಯದಲ್ಲಿ ದಾಖಲಾಗಿತ್ತು.

ತಂಡಗಳು


ಭಾರತ: ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌, ಕೆ.ಎಸ್‌. ಭರತ್‌, ರವೀಂದ್ರ ಜಡೇಜ, ಆರ್‌. ಅಶ್ವಿ‌ನ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌, ಜಸ್‌ಪ್ರೀತ್‌ ಬುಮ್ರಾ.

ಇಂಗ್ಲೆಂಡ್‌: ಜಾಕ್‌ ಕ್ರಾಲಿ, ಬೆನ್‌ ಡಕೆಟ್‌, ಓಲೀ ಪೋಪ್‌, ಜೋ ರೂಟ್‌, ಜಾನಿ ಬೇರ್‌ಸ್ಟೊ, ಬೆನ್‌ ಸ್ಟೋಕ್ಸ್‌ (ನಾಯಕ), ಬೆನ್‌ ಫೋಕ್ಸ್‌, ರೇಹಾನ್‌ ಅಹ್ಮದ್‌, ಮಾರ್ಕ್‌ ವುಡ್‌, ಟಾಮ್‌ ಹಾರ್ಟ್ಲಿ, ಜಾಕ್‌ ಲೀಚ್‌.

Exit mobile version