ಲಕ್ನೋ: ಹಾಲಿ ಚಾಂಪಿಯನ್ ಇಂಗ್ಲೆಂಡ್(IND vs ENG) ಮತ್ತು ಅಜೇಯ ಭಾರತ ಭಾನುವಾರ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇಂಗ್ಲೆಂಡ್ ಪರಿಸ್ಥಿತಿಯನ್ನು ನೋಡುವಾಗ ಈ ಪಂದ್ಯದಲ್ಲಿಯೂ ಗೆಲ್ಲುವ ಲಕ್ಷಣ ಕಾಣುತ್ತಿಲ್ಲ. ಏಕೆಂದರೆ ಯಾವ ಆಟಗಾರನಲ್ಲೂ ಗೆಲ್ಲುವ ಹುಮ್ಮಸ್ಸು ಕಾಣುತ್ತಿಲ್ಲ. ಇದಕ್ಕೆ ಕಳೆದ ಲಂಕಾ ವಿರುದ್ಧದ ಪಂದ್ಯವೇ ಉತ್ತಮ ಸಾಕ್ಷಿ. ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಣ ವಿಶ್ವಕಪ್ ದಾಖಲೆಗಳು ಹೇಗಿದೆ ಎಂಬ ವರದಿ ಇಲ್ಲಿದೆ.
ವಿಶ್ವಕಪ್ ಮುಖಾಮುಖಿ
ಕ್ರಿಕೆಟ್ ಜನಕರಾದ ಇಂಗ್ಲೆಂಡ್ ಮತ್ತು ಭಾರತ 48 ವರ್ಷಗಳ ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಒಟ್ಟು 8 ಬಾರಿ ಮುಖಾಮುಖಿಯಾಗಿವೆ. ಭಾರತ 3 ಪಂದ್ಯ ಗೆದ್ದರೆ, ಇಂಗ್ಲೆಂಡ್ 4 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯ ಕಂಡಿದೆ. ಉಭಯ ತಂಡಗಳು ವಿಶ್ವಕಪ್ನಲ್ಲಿ ಮೊದಲ ಬಾರಿ ಎದುರಾದದ್ದು 1975ರಲ್ಲಿ. ಈ ಪಂದ್ಯವನ್ನು ಭಾರತ 202 ರನ್ಗಳಿಂದ ಸೋತಿತ್ತು. ಇದೇ ಪಂದ್ಯದಲ್ಲಿ ಸುನೀಲ್ ಗವಾಸ್ಕರ್ ಅವರು ಆರಂಭಿನಾಗಿ ಕಣಕ್ಕಿಳಿದು 174 ಎಸೆತ ಎದುರಿಸಿ ಅಜೇಯ 36 ರನ್ ಬಾರಿಸಿದ್ದರು. ಇದು ಈ ವರೆಗಿನ ವಿಶ್ವಕಪ್ನಲ್ಲಿ ಆಟಗಾರನೊಬ್ಬ ಅತಿ ಹೆಚ್ಚು ಎಸೆತ ಎದುರಿಸಿ ಬಾರಿಸಿದ ಕಡಿಮೆ ರನ್ ಆಗಿದೆ.
ಇದನ್ನೂ ಓದಿ AUS vs NZ: ಚೊಚ್ಚಲ ವಿಶ್ವಕಪ್ ಶತಕ ಬಾರಿಸಿ ಹಲವು ದಾಖಲೆ ಬರೆದ ಟ್ರಾವಿಸ್ ಹೆಡ್
1983ರಲ್ಲಿ ಮೊದಲ ಗೆಲುವು
ಇಂಗ್ಲೆಂಡ್ ವಿರುದ್ಧ ಭಾರತ ತಂಡ ವಿಶ್ವಕಪ್ನಲ್ಲಿ ಮೊದಲ ಗೆಲುವು ಕಂಡದ್ದು 1983ರ ವಿಶ್ವಕಪ್ನಲ್ಲಿ. ಸೆಮಿಫೈನಲ್ ಪಂದ್ಯದಲ್ಲಿ ಕಪಿಲ್ ಡೆವಿಲ್ಸ್ ಪಡೆ ಆಂಗ್ಲರನ್ನು 6 ವಿಕೆಟ್ನಿಂದ ಮಣಿಸಿ ಫೈನಲ್ ಪ್ರವೇಶಿಸಿತ್ತು. ಫೈನಲ್ನಲ್ಲಿ 2 ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ಭಾರತ ಚೊಚ್ಚಲ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.
ಒಂದು ಪಂದ ಟೈ
2011ರ ವಿಶ್ವಕಪ್ನಲ್ಲಿ ಉಭಯ ತಂಡಗಳ ನಡುವಿನ ಪಂದ್ಯ ಟೈ ನಲ್ಲಿ ಅಂತ್ಯ ಕಂಡಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 49.5 ಓವರ್ಗಳಲ್ಲಿ 338ರನ್ಗೆ ಆಲೌಟ್ ಆಗಿತ್ತು. ಚೇಸಿಂಗ್ ನಡೆಸಿದ ಇಂಗ್ಲೆಂಡ್ ಕೂಡ 50 ಓವರ್ ಬ್ಯಾಟಿಂಗ್ ನಡೆಸಿ 8 ವಿಕೆಟ್ಗೆ 338ರನ್ ಬಾರಿಸಿತು. ಪಂದ್ಯ ಟೈಗೊಂಡಿತು.
20 ವರ್ಷಗಳಿಂದ ಗೆದ್ದಿಲ್ಲ ಭಾರತ
ಭಾರತ ತಂಡ ಇಂಗ್ಲೆಂಡ್ ವಿರುದ್ಧ ಗೆಲುವು ಕಾಣದೆ 20 ವರ್ಷಗಳು ಕಳೆದಿವೆ. ಭಾರತ ತಂಡ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಗೆಲುವು ಸಾಧಿಸಿದ್ದು 2003ರಲ್ಲಿ. ಈ ಪಂದ್ಯವನ್ನು ಸೌರವ್ ಗಂಗೂಲಿ ಪಡೆ 82 ರನ್ಗಳಿಂದ ಗೆದ್ದು ಬೀಗಿತ್ತು. ಇದಾದ ಬಳಿಕ ಗೆಲುವು ಕಂಡಿಲ್ಲ. 2015ರ ವಿಶ್ವಕಪ್ನಲ್ಲಿ ಉಭಯ ತಂಡಗಳಿಗೆ ಆಡುವ ಅವಕಾಶವೇ ಸಿಗಲಿಲ್ಲ. 2019 ವಿಶ್ವಕಪ್ನಲ್ಲಿ ಇಂಗ್ಲೆಂಡ್ 31 ರನ್ಗಳಿಂದ ಭಾರತಕ್ಕೆ ಸೋಲುಣಿಸಿತ್ತು. ಭಾನುವಾರದ ಮುಖಾಮುಖಿಯಲ್ಲಿ ಭಾರತ ಗೆದ್ದು 20 ವರ್ಷಗಳ ಬಳಿಕ ಸೋಲಿನ ಕೊಂಡಿ ಕಳೆದುಕೊಳ್ಳಲಿದೆಯೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ ICC World Cup 2023: ಪಾಕ್ ಸೋಲಿನ ಗಾಯಕ್ಕೆ ‘ಟ್ರೋಲ್’ ಬರೆ ಎಳೆದ ಭಾರತೀಯರು; ನೋಡಿ
ಏಕದಿನ ಮುಖಾಮುಖಿ
ಇತ್ತಂಡಗಳು ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 106 ಪಂದ್ಯಗಳನ್ನು ಆಡಿವೆ. ಇದರಲ್ಲಿ ಭಾರತ 57 ಪಂದ್ಯ ಗೆದ್ದರೆ, ಇಂಗ್ಲೆಂಡ್ 44 ಪಂದ್ಯಗಳನ್ನು ಗೆದ್ದಿವೆ. ಮೂರು ಪಂದ್ಯಗಳು ರದ್ದುಗೊಂಡರೆ, 2 ಪಂದ್ಯ ಟೈಗೊಂಡಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠ ಎನ್ನಲಡ್ಡಿಯಿಲ್ಲ.