Site icon Vistara News

IND vs ENG: ಹೈವೋಲ್ಟೇಜ್ ಸೆಮಿ ಕಾದಾಟಕ್ಕೆ ಕ್ಷಣಗಣನೆ; ಸೇಡು ತೀರಿಸಲು ರೋಹಿತ್​ ಪಡೆ ಸಜ್ಜು

IND vs ENG

IND vs ENG: India eye revenge against defending champions England

ಪ್ರೊವಿಡೆನ್ಸ್‌: ಹಾಲಿ ಆವೃತ್ತಿಯ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯ ಗೆದ್ದು ಅಜೇಯ ಎನಿಸಿಕೊಂಡಿರುವ ಭಾರತ(IND vs ENG) ತಂಡ ಸೆಮಿಫೈನಲ್ ಆಡಲು ಸಜ್ಜಾಗಿ ನಿಂತಿದೆ. ಇಂದು ನಡೆಯುವ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧ ಸೆಣಸಾಡಲಿದೆ. ಇದು ಭಾರತಕ್ಕೆ ಸೇಡಿನ ಪಂದ್ಯವೂ ಹೌದು. ಹೀಗಾಗಿ ಇತ್ತಂಡಗಳ ನಡುವಿನ ಕ್ರಿಕೆಟ್‌ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

​2022ರಲ್ಲಿ ಅಡಿಲೇಡ್​ನಲ್ಲಿ ನಡೆದ ಟಿ20 ವಿಶ್ವಕಪ್​ ಸೆಮೀಸ್​ನಲ್ಲಿ ಇಂಗ್ಲೆಂಡ್​ ತಂಡ ಭಾರತಕ್ಕೆ 10 ವಿಕೆಟ್​ಗಳ ಹೀನಾಯ ಸೋಲುಣಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ. ಇದರಲ್ಲಿ ರೋಹಿತ್​ ಬಳಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೊಂದು ಕುತೂಹಲ.

ಅಡಿಲೇಡ್​ನಲ್ಲಿ ನಡೆದಿದ್ದ ಕಳೆದ ಟಿ20 ವಿಶ್ವಕಪ್​ ಸೆಮೀ ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 6 ವಿಕೆಟ್​ಗೆ 168 ರನ್​ಗಳ ಸಾಧಾರಣ ಮೊತ್ತ​ ಪೇರಿಸಿ ಸವಾಲೊಡ್ಡಿತು. ಈ ಮೊತ್ತವನ್ನು ಇಂಗ್ಲೆಂಡ್​ 16 ಓವರ್​ಗಳಲ್ಲೇ ವಿಕೆಟ್​ ನಷ್ಟವಿಲ್ಲದೆ 170 ರನ್​ ಗಳಿಸಿ ಗೆದ್ದಿತ್ತು. ಜಾಸ್​ ಬಟ್ಲರ್​(80*) ಮತ್ತು ಅಲೆಕ್ಸ್​ ಹೇಲ್ಸ್​(86*) ಅಜೇಯ ಬ್ಯಾಟಿಂಗ್​ ಆರ್ಭಟದ ಮುಂದೆ ಭಾರತೀಯ ಬೌಲರ್​ಗಳು ಸಂಪೂರ್ಣ ಮಂಕಾದರು. ಭಾರತ ಪರ ವಿರಾಟ್​ ಕೊಹ್ಲಿ ಮತ್ತು ಹಾರ್ದಿಕ್​ ಪಾಂಡ್ಯ ಅರ್ಧಶತಕ ಬಾರಿಸಿದ್ದರು. ಆದರೆ ಈ ಬಾರಿ ಕೊಹ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾಗಿದ್ದಾರೆ. 2 ಶೂನ್ಯ ಕೂಡ ಸುತ್ತಿದ್ದಾರೆ. ಎರಡಂಕಿ ಮೊತ್ತ ಪೇರಿಸಿದ್ದು ಒಮ್ಮೆ ಮಾತ್ರ.

ಇದನ್ನೂ ಓದಿ IND vs ENG Semi Final: ಮೀಸಲು ದಿನ ಇರದ ಭಾರತ-ಇಂಗ್ಲೆಂಡ್​ ಸೆಮಿ ಪಂದ್ಯದ ಮಳೆ ನಿಯಮ ಹೇಗಿದೆ?

ಮಳೆ ಬಂದರೆ ಭಾರತಕ್ಕೆ ಲಾಭ


ಪ್ರಾವಿಡೆನ್ಸ್​ ಸ್ಟೇಡಿಯಂನಲ್ಲಿ ನಡೆಯಲಿರುವ ಇತ್ತಂಡಗಳ ನಡುವಣ ಈ ಪಂದ್ಯಕ್ಕೆ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಪಂದ್ಯದ ಸಮಯದಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ. 88ರಷ್ಟಿದೆ ಎಂದು ಎಚ್ಚರಿಕೆ ನೀಡಿದೆ. ಪಂದ್ಯ ರದ್ದಾದರೂ ಅಚ್ಚರಿ ಇಲ್ಲ ಎಂದು ಹೇಳಿದೆ. ಈ ಪಂದ್ಯಕ್ಕೆ ಮೀಸಲು ದಿನವಿಲ್ಲ. ಆದರೆ, ಪಂದ್ಯ ಮುಗಿಸಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಐಸಿಸಿ ನೀಡಿದೆ. ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡ ಫೈನಲ್​ಗೇರಲಿದೆ. ಏಕೆಂದರೆ ಸೂಪರ್​-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದೆ. ಇಂಗ್ಲೆಂಡ್​ ಸೂಪರ್​-8 ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿತ್ತು. ಹೀಗಾಗಿ ಈ ಲಾಭ ಭಾರತಕ್ಕೆ ಲಭಿಸಲಿದೆ.

ಸಂಭಾವ್ಯ ತಂಡಗಳು


ಭಾರತ:
 ರೋಹಿತ್​ ಶರ್ಮ(ನಾಯಕ), ವಿರಾಟ್ ಕೊಹ್ಲಿ, ರಿಷಭ್​ ಪಂತ್​(ವಿಕೀ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್​ಪ್ರೀತ್​ ಬುಮ್ರಾ.

ಇಂಗ್ಲೆಂಡ್​: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ.

Exit mobile version