ರಾಜ್ಕೋಟ್: ಇಂಗ್ಲೆಂಡ್(IND vs ENG) ವಿರುದ್ಧದ ಮೂರನೇ(India vs England 3rd Test) ಪಂದ್ಯದಲ್ಲಿ 434 ರನ್‌ಗಳಿಂದ ಗೆಲುವು ಸಾಧಿಸಿದ ಭಾರತ ದಾಖಲೆಯೊಂದನ್ನು ಬರೆದಿದೆ. ಇದೇ ಮೊದಲ ಬಾರಿಗೆ ಟೆಸ್ಟ್ನಲ್ಲಿ ಅತಿ ದೊಡ್ಡ ರನ್ ಅಂತರದಿಂದ ಗೆದ್ದ ಸಾಧನೆ ಮಾಡಿದೆ. ಇದಕ್ಕೂ ಮುನ್ನ 2021ರಲ್ಲಿ ಮುಂಬೈಯಲ್ಲಿ ನಡೆದಿದ್ದ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 372 ರನ್ಗಳ ಗೆಲುವು ಸಾಧಿಸಿತ್ತು. ಇದೀಗ ಈ ದಾಖಲೆಯನ್ನು ತಿದ್ದಿ ಬರೆದಿದೆ.
ವಿಂಡೀಸ್ ದಾಖಲೆ ಪತನ
ಇದುವರೆಗಿನ ಟೆಸ್ಟ್ ಕ್ರಿಕೆಟ್ ಇತಿಹಾಸ ನೋಡುವುದಾದದರೆ, ಅತಿ ದೊಡ್ಡ ಗೆಲುವನ್ನು ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ಇದೀಗ ಭಾರತ ತಂಡ ಎಂಟನೇ ಸ್ಥಾನಕ್ಕೇರಿದೆ. ಈ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಿದೆ. 1976ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 425 ರನ್‌ಗಳಿಂದ ಗೆದ್ದಿತ್ತು. ಇದೀಗ ಭಾರತ 434 ರನ್‌ಗಳಿಂದ ಗೆದ್ದು ವೆಸ್ಟ್ ಇಂಡೀಸ್ನ 48 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ಗೆ ಅತಿ ದೊಡ್ಡ ರನ್ ಅಂತರದಲ್ಲಿ ಸೋಲುಣಿಸಿದ ತಂಡಗಳ ಪೈಕಿ ಭಾರತ ದ್ವಿತೀಯ ಸ್ಥಾನಕ್ಕೇರಿದೆ. ಮೊದಲ ಸ್ಥಾನ ಆಸ್ಟ್ರೇಲಿಯಾ ತಂಡದ್ದು. 1934 ರಲ್ಲಿ ಓವಲ್ನಲ್ಲಿ ನಡೆದಿದ್ದ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ಗೆ 562 ರನ್‌ಗಳಿಂದ ಸೋಲುಣಿಸಿತ್ತು. ರನ್ ಅಂತರದಲ್ಲಿ ಅತಿ ದೊಡ್ಡ ಗೆಲುವನ್ನು ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. 1928ರಲ್ಲಿ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 675 ರನ್‌ಗಳಿಂದ ಗೆಲುವು ಸಾಧಿಸಿತ್ತು. ಸದ್ಯ ಇದು ದಾಖಲೆಯಾಗಿಯೇ ಉಳಿದಿದೆ.
ಇದನ್ನೂ ಓದಿ R Ashwin : ಅಶ್ವಿನ್ಗೆ ಖಾಸಗಿ ವಿಮಾನ ವ್ಯವಸ್ಥೆ ಮಾಡಿದ್ದು ಜಯ್ ಶಾ; ರವಿ ಶಾಸ್ತ್ರಿ
ಜೈಸ್ವಾಲ್ ಅಮೋಘ ಆಟ
ಪಂದ್ಯದ ನಾಲ್ಕನೇ ದಿನವಾದ ಭಾನುವಾರ 2 ವಿಕೆಟ್ ನಷ್ಟಕ್ಕೆ 196 ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(214*) ಅವರ ಎರಡನೇ ದ್ವಿಶತಕ ಹಾಗೂ ಶುಭಮನ್ ಗಿಲ್(91) ಮತ್ತು ಸರ್ಫರಾಜ್ ಖಾನ್ (68*) ಅವರ ಅರ್ಧಶತಕದ ನೆರವಿನಿಂದ ದ್ವಿತೀಯ ಇನಿಂಗ್ಸ್‌ನಲ್ಲಿ 4 ವಿಕೆಟ್ಗೆ 430 ರನ್ ಬಾರಿಸಿ ಡಿಕ್ಲೇರ್ ಮಾಡಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ನಾಟಕೀಯ ಕುಸಿತ ಕಂಡು 122 ರನ್ಗೆ ಸರ್ವಪತನ ಕಂಡಿತು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಅತಿ ದೊಡ್ಡ ಗೆಲುವು ಕೂಡ ಆಗಿದೆ. ಸರಣಿಯ ನಾಲ್ಕನೇ ಪಂದ್ಯ ಫೆ.23ರಿಂದ ರಾಂಚಿಯಲ್ಲಿ ಆರಂಭಗೊಳ್ಳಲಿದೆ.
ಮೂರನೇ ದಿನದ ಆಟದ ವೇಳೆ ಬೆನ್ನು ನೋವಿಗೆಚ ಸಿಲುಕಿ ನಿವೃತ್ತಿ ಪಡೆದಿದ್ದ ಜೈಸ್ವಾಲ್, ಭಾನುವಾರ ಮತ್ತೆ ಕ್ರೀಸ್‌ಗೆ ಆಗಮಿಸಿ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಿಕೊಂಡರು. 236 ಎಸೆತಗಳಲ್ಲಿ 214 ರನ್ ಗಳಿಸಿ ಅಜೇಯರಾಗು ಉಳಿದರು. ಅವರ ಈ ವಿಸ್ಫೋಟಕ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ ಬರೋಬ್ಬರಿ 12 ಸಿಕ್ಸರ್ ಹಾಗೂ 14 ಬೌಂಡರಿಗಳು ದಾಖಲಾಯಿತು. ಇದು ಜೈಸ್ವಾಲ್ ಅವರ ಸತತ ಎರಡನೇ ಟೆಸ್ಟ್ ದ್ವಿಶತಕವಾಗಿದೆ. ವಿಶಾಖಪಟ್ಟಣದಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ನಲ್ಲಿಯೂ ಜೈಸ್ವಾಲ್ ದ್ವಿಶತಕ ಬಾರಿಸಿದ್ದರು.