ಲಕ್ನೋ: ಕಳೆದ 20 ವರ್ಷಗಳಿಂದ ಇಂಗ್ಲೆಂಡ್(IND vs ENG) ವಿರುದ್ಧ ಏಕದಿನ ವಿಶ್ವಕಪ್ ಗೆಲುವಿನ ಹುಡುಕಾಟ ನಡೆಸುತ್ತಿದ್ದ ಭಾರತ, ಕೊನೆಗೂ ಇದರಲ್ಲಿ ಯಶಸ್ಸು ಕಂಡಿದೆ. ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ 100 ರನ್ಗಳ ಗೆಲುವು ದಾಖಲಿಸುವ ಮೂಲಕ 20 ವರ್ಷಗಳ ಬಳಿಕ ವಿಶ್ವಕಪ್ ಗೆಲುವಿನ ಕೊರಗನ್ನು ನೀಗಿಸಿದೆ. ಅಲ್ಲದೆ ಈ ಗೆಲುವಿನೊಂದಿಗೆ ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಸತತ 6 ಗೆಲುವು ದಾಖಲಿಸಿ 12 ಅಂಕದೊಂದಿಗೆ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿದೆ. ಸೋಲು ಕಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ. ಇದು ಇಂಗ್ಲೆಂಡ್ಗೆ ಎದುರಾದ 5ನೇ ಸೋಲು.
ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ರೋಹಿತ್ ಮತ್ತು ಸೂರ್ಯಕುಮಾರ್ ಅವರ ಬ್ಯಾಟಿಂಗ್ ಸಾಹಸದಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 229 ರನ್ ಗಳಿಸಿತು. ಸಣ್ಣ ಮೊತ್ತಕ್ಕೆ ಭಾರತವನ್ನು ಕಟ್ಟಿಹಾಕಿದ ಜೋಶ್ನಲ್ಲಿ ಗುರಿ ಬೆನ್ನಟ್ಟಲಾರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು 34.5 ಓವರ್ಗಳಲ್ಲಿ 129 ರನ್ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಘಾತಕ ಬೌಲಿಂಗ್ ದಾಳಿ ನಡೆಸಿ 22 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತ ಮೊಹಮ್ಮದ್ ಶಮಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರು.
ಶಮಿ-ಬುಮ್ರಾ ಜುಗಲ್ ಬಂದಿ
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. 4 ಓವರ್ಗೆ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಈ ವೇಳೆ ಭಾರತದ ತಂಡದ ಮೊತ್ತ ಆಂಗ್ಲರಿಗೇ ಯಾವ ಲೆಕ್ಕವೂ ಅಲ್ಲ ಎಂಬ ವಾತಾವರಣ ಸೃಷ್ಟಿಯಾಯಿತು. ಈ ಪಂದ್ಯದಲ್ಲಿ ಭಾರತಕ್ಕೆ ಸೋಲು ಖಚಿತ ಎಂದು ಅದಾಗಲೇ ಅಭಿಮಾನಿಗಳು ತೀರ್ಮಾಣ ಮಾಡಿದ್ದರು. ಆದರೆ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಸೇರಿಕೊಂಡು ಜಿದ್ದಿಗೆ ಬಿದ್ದವರಂತೆ ಘಾತಕ ಸ್ಫೆಲ್ ನಡೆಸಿ ಬ್ಯಾಕ್ಡು ಬ್ಯಾಕ್ ವಿಕೆಟ್ ಕಿತ್ತು ಮಿಂಚಿದರು. ಇಲ್ಲಿ ಏನಾಗುತ್ತಿದೆ ಎಂದು ಯೋಚಿಸುದರಲ್ಲಿ 52 ರನ್ಗೆ ಇಂಗ್ಲೆಂಡ್ನ 5 ವಿಕೆಟ್ಗಳು ಹಾರಿ ಹೋಗಿತ್ತು. ಭಾರತ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತು.
ಬಲಿಷ್ಠ ಆಟಗಾರರಾದ ಜೋ ರೂಟ್, ಬೆನ್ ಸ್ಟೋಕ್ಸ್ ಅವರು ಶೂನ್ಯಕ್ಕೆ ಔಟಾಗಿ ಬಂದ ವೇಗದಲ್ಲೇ ಪೆವಿಲಿಯನ್ ಸೇರಿದರು. ಜಸ್ಪ್ರೀತ್ ಬುಮ್ರಾ ಅವರು ಒಂದೇ ಓವರ್ನಲ್ಲಿ ಸತತವಾಗಿ ಡೇವಿಡ್ ಮಲಾನ್(16) ಮತ್ತು ಜೋ ರೂಟ್(0) ವಿಕೆಟ್ ಕಡೆವಿದರು. ಇದರ ಬೆನ್ನಲ್ಲೇ ಶಮಿ ಅವರು ಆರಂಭಕಾರ ಜಾನಿ ಬೇರ್ಸ್ಟೋ(14) ಮತ್ತು ಬೆನ್ ಸ್ಟೋಕ್ಸ್(0) ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಆಂಗ್ಲರನ್ನು ಸದೆ ಬಡಿದರು.
20 ವರ್ಷಗಳ ಬಳಿಕ ಒಲಿದ ಗೆಲುವು
ಭಾರತ ತಂಡ ಇಂಗ್ಲೆಂಡ್ ವಿರುದ್ಧ ವಿಶ್ವಕಪ್ನಲ್ಲಿ ಗೆಲುವು ಕಾಣದೆ 20 ವರ್ಷಗಳೇ ಕಳೆದಿತ್ತು. ಕೊನೆಯ ಬಾರಿ ಭಾರತ ತಂಡ ಗೆಲುವು ಸಾಧಿಸಿದ್ದು 2003ರಲ್ಲಿ. ಗಂಗೂಲಿ ಸಾರಥ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಆ ಬಳಿಕ ಎರಡು ಉಭಯ ತಂಡಗಳು ಆಡಿದ್ದರೂ ಭಾರತ ಗೆಲುವು ಸಾಧಿಸುವಲ್ಲಿ ವಿಫಲವಾಗಿತ್ತು. 2011ರ ವಿಶ್ವಕಪ್ ಪಂದ್ಯ ಟೈನಲ್ಲಿ ಅಂತ್ಯಕಂಡಿತ್ತು. 2015 ಆವೃತ್ತಿಯಲ್ಲಿ ಉಭಯ ತಂಡಗಳಿಗೆ ಮುಖಾಮುಖಿಯಾಗುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಭಾರತ 20 ವರ್ಷಗಳ ಬಳಿಕ ಆಂಗ್ಲರ ವಿರುದ್ಧ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.
ಮತ್ತೆ ವೈಫಲ್ಯ ಕಂಡ ಬಟ್ಲರ್
ವಿಶ್ವಕಪ್ಗೂ ಮುನ್ನ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿದ್ದ ನಾಯಕ ಜಾಸ್ ಬಟ್ಲರ್ ಅವರ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. ಭಾರತ ವಿರುದ್ಧವಾದರೂ ಬ್ಯಾಟಿಂಗ್ ಜೋಶ್ ತೋರಬಹುದೆಂದು ನಿರೀಕ್ಷೆ ಮಾಡಿದವರ ನಿರೀಕ್ಷೆ ಹುಸಿಯಾಗಿತು. ಬಟ್ಲರ್ ಕೇವಲ 10 ರನ್ಗೆ ಆಟ ಮುಸಿದರು. ಈ ಮೊತ್ತವನ್ನು ಬಾರಿಸಲು 23 ಎಸೆತ ಎದುರಿಸಬೇಕಾಯಿತು. ಬಾರಿಸಿದ್ದು ಒಂದು ಬೌಂಡರಿ. ಅಷ್ಟರ ಮಟ್ಟಿಗೆ ಅವರ ಬ್ಯಾಟಿಂಗ್ ವೈಫಲ್ಯ ಕಂಡುಬಂತು. ಅಂತಿಮ ಹಂತದಲ್ಲಿ ಲಿವಿಂಗ್ಸ್ಟೋನ್ ಸಣ್ಣ ಮಟ್ಟದ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಅವರಿಂದ ಸಾಧ್ಯವಾಗಲಿಲ್ಲ. ಅವರು 27 ರನ್ ಬಾರಿಸಿ ಕುಲ್ದೀಪ್ ಎಸೆತದಲ್ಲಿ ಎಲ್ಬಿಡಬ್ಲ್ಯು ಆದರು. ಬುಮ್ರಾಗೆ ಸಿಕ್ಸರ್ ಬಾರಿಸಿದ್ದ ಆದೀಲ್ ರಶೀದ್ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಅವರ ಗಳಿಕೆ 13 ರನ್. ಇಲ್ಲಿಗ
ಇದನ್ನೂ ಓದಿ Rohit Sharma: ಅರ್ಧಶತಕ ಬಾರಿಸಿ 2 ದಾಖಲೆ ಬರೆದ ರೋಹಿತ್ ಶರ್ಮ
ಆರಂಭಿಕ ಆಘಾತ ಎದುರಿಸಿದ ಭಾರತ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತ ಆರಂಭದಲ್ಲೇ ಆಘಾತ ಎದುರಿಸಿತು. ಶುಭಮನ್ ಗಿಲ್ 9 ರನ್ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ವಿರಾಟ್ ಕೊಹ್ಲಿ ಅವರು 9 ಎಸೆತ ಎದುರಿಸಿ ಶೂನ್ಯಕ್ಕೆ ವಿಕೆಟ್ ಕೈ ಚೆಲ್ಲಿದರು. ಇದು ವಿರಾಟ್ ಕೊಹ್ಲಿ ಅವರ ವಿಶ್ವಕಪ್ ಮೊದಲ ಡಕ್ ಔಟ್ ಆಗಿದೆ. ಕೊಹ್ಲಿ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಕೂಡ 4 ರನ್ಗೆ ಆಟ ಮುಗಿಸಿದರು. 40 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ರೋಹಿತ್ ಆಸರೆ
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನಾಯಕ ರೋಹಿತ್ ಶರ್ಮ ಅವರು ಎದೆಗುಂದದೆ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ದಿಟ್ಟ ರೀತಿಯಲ್ಲಿ ಎದುರಿಸಿ ನಿಂತರು. ಆರಂಭದಿಂದಲೇ ಆಂಗ್ಲರಿಗೆ ಸಿಕ್ಸರ್, ಬೌಂಡರಿಗಳ ರುಚಿ ತೋರಿಸುತ್ತಾ ತಮ್ಮ ಎಂದಿನ ಶೈಲಿಯಲ್ಲೇ ಬ್ಯಾಟ್ ಬೀಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಇವರಿಗೆ ಕೆಲ ಕಾಲ ರಾಹುಲ್ ಉತ್ತಮ ಬೆಂಬಲ ನೀಡಿದರು.
ಜೀವದಾನ ಪಡೆದು ಅರ್ಧಶತಕ ಬಾರಿಸಿದ ರೋಹಿತ್
ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ರೋಹಿತ್ ಅವರು 33 ರನ್ ಗಳಿಸಿದ ವೇಳೆ ಎಲ್ಬಿಡಬ್ಲ್ಯುನಿಂದ ಜೀವದಾನ ಪಡೆದರು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಅವರು ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಇದೇ ವೇಳೆ ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಇದು ಕ್ಯಾಲೆಂಡರ್ ವರ್ಷದಲ್ಲಿ ರೋಹಿತ್ 1000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಐದನೇ ನಿದರ್ಶನ. 2013, 2017, 2018 ಮತ್ತು 2019 ರಲ್ಲಿ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ Virat Kohli: ಶೂನ್ಯಕ್ಕೆ ಔಟಾದ ಸಿಟ್ಟಿನಲ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿ ಆ್ಯಂಗ್ರಿ ಮ್ಯಾನ್ ಆದ ಕೊಹ್ಲಿ
13 ರನ್ ಅಂತರದಲ್ಲಿ ಕೈ ತಪ್ಪಿದ ಶತಕ
ಶತಕ ಬಾರಿಸುವತ್ತ ಮುನ್ನಗುತ್ತಿದ್ದ ರೋಹಿತ್ ಅವರ ಆಟಕ್ಕೆ ಕೊನೆಗೂ ಆದೀಲ್ ರಶೀದ್ ಬ್ರೇಕ್ ಹಾಕುವಲ್ಲಿ ಯಶಸ್ಸು ಕಂಡರು. ಸಿಕ್ಸರ್ಗೆ ಬಾರಿಸಿದ ಚೆಂಡು ಲಿವಿಂಗ್ಸ್ಟೋನ್ ಕೈ ಸೇರಿತು. 87 ರನ್ಗೆ ಆಟ ಮುಗಿಸಿದರು. ಕೇವಲ 13 ರನ್ ಅಂತರದಲ್ಲಿ ಶತಕ ವಂಚಿತರಾದರು. ಅವರ ಅರ್ಧಶತಕದ ಇನಿಂಗ್ಸ್ನಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಯಿತು. ಇವರಿಗೆ ಸಾಥ್ ನೀಡಿದ ರಾಹುಲ್ 58 ಎಸೆತ ಎದುರಿಸಿ ಮೂರು ಬೌಂಡರಿ ನೆರವಿನಿಂದ 39 ರನ್ ಗಳಿಸಿದರು.
ಅಬ್ಬರಿಸಿದ ಸೂರ್ಯಕುಮಾರ್
ರೋಹಿತ್ ಮತ್ತು ರಾಹುಲ್ ವಿಕೆಟ್ ಪತನದ ಬಳಿಕ ಭಾರತ ಮತ್ತೆ ಕುಸಿತ ಕಂಡಿತು. ರವೀಂದ್ರ ಜಡೇಜಾ(8) ಮತ್ತು ಮೊಹಮ್ಮದ್ ಶಮಿ(1) ರನ್ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಸಿಡಿದು ನಿಂತ ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್ ಅವರು ತಮ್ಮ ನಟರಾಜ ಭಂಗಿಯ ಶೈಲಿಯಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ತಂಡದ ಮೊತ್ತವನ್ನು ಶಕ್ತಿ ಮೀರಿ ಹಿಗ್ಗಿಸ ತೊಡಗಿದರು. ಆದರೆ ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲೇ ಇಲ್ಲ. ಆದರೂ ಕೆಚ್ಚೆದೆಯಿಂದ ಬ್ಯಾಟಿಂಗ್ ನಡೆಸಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು. ಅವರ ಈ ಅಂತಿಮ ಹಂತದ ಪ್ರದರ್ಶನದಿಂದ ತಂಡ 200ರ ಗಡಿ ದಾಟುವಂತೆ ಮಾಡಿತು.
ಅಂತಿಮ ಹಂತದಲ್ಲಿ ಜಸ್ಪ್ರೀತ್ ಬುಮ್ರಾ 16 ರನ್ ಬಾರಿಸಿ ಉಪಯುಕ್ತ ಕೊಡುಗೆ ನೀಡಿದರು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 45 ರನ್ ವೆಚ್ಚದಲ್ಲಿ 3 ವಿಕೆಟ್ ಕಿತ್ತರು. ಉಳಿದಂತೆ ಆದೀಲ್ ರಶೀದ್ 35ಕ್ಕೆ 2, ಕ್ರಿಕ್ಸ್ ವೋಕ್ಸ್ ಕೂಡ 2 ವಿಕೆಟ್ ಪಡೆದರು. ಮಾರ್ಕ್ ವುಡ್ ಒಂದು ವಿಕೆಟ್ಗೆ ಸೀಮಿತಾರಾದರು.
ನಾಯಕನಾಗಿ ನೂರನೇ ಪಂದ್ಯ
ರೋಹಿತ್ ಶರ್ಮ(Rohit Sharma) ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶೇಷ ಮೈಲಿಗಲ್ಲೊಂದನ್ನು ನಿರ್ಮಿಸಿದರು. ನಾಯಕನಾಗಿ 100ನೇ ಪಂದ್ಯವನ್ನು ಮುನ್ನಡೆಸಿದ ದಾಖಲೆ ಬರೆದರು. ಈ ಮೂಲಕ 100ನೇ ಪಂದ್ಯವನ್ನು ಮುನ್ನಡೆಸಿದ 7ನೇ ಭಾರತೀಯ ನಾಯಕ ಎನಿಸಿಕೊಂಡರು. ಅಲ್ಲದೆ ಈ ಸ್ಮರಣೀಯ ಪಂದ್ಯವನ್ನು ಗೆಲ್ಲುವ ಮೂಲಕ ಡಬಲ್ ಸಂಭ್ರಮ ಆಚರಿಸಿದರು. ಅತಿ ಹೆಚ್ಚು ಪಂದ್ಯಗಳಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ ದಾಖಲೆ ವಿಶ್ವಕಪ್ ವಿಜೇತ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದೆ. ಧೋನಿ ಅವರು 332 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆ ಬಳಿಕದ ಸ್ಥಾನ ಮೊಹಮ್ಮದ್ ಅಜರುದ್ದೀನ್ (221), ವಿರಾಟ್ ಕೊಹ್ಲಿ (213), ಸೌರವ್ ಗಂಗೂಲಿ (196), ಕಪಿಲ್ ದೇವ್ (108) ಮತ್ತು ರಾಹುಲ್ ದ್ರಾವಿಡ್ (104) ಹೆಸರಿನಲ್ಲಿದೆ. ಒಟ್ಟಾರೆಯಾಗಿ, ಪುರುಷರ ಕ್ರಿಕೆಟ್‌ನಲ್ಲಿ 49 ಕ್ರಿಕೆಟಿಗರು ತಮ್ಮ ರಾಷ್ಟ್ರೀಯ ತಂಡಗಳನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.
18 ಸಾವಿರ ರನ್ ಎಲೈಟ್ ಪಟ್ಟಿಗೆ ಸೇರಿದ ರೋಹಿತ್
ರೋಹಿತ್ ಅವರು 48 ರನ್ ಗಳಿಸಿದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18 ಸಾವಿರ ರನ್ ಪೂರ್ತಿಗೊಳಿಸಿದರು. ಈ ಸಾಧನೆ ಮಾಡಿದ 5ನೇ ಭಾರತೀಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಈ ಮೈಲಿಗಲ್ಲು ತಲುಪಲು ರೋಹಿತ್ 477 ಇನ್ನಿಂಗ್ಸ್ ಆಡಿದ್ದಾರೆ. ರೋಹಿತ್‌ಗಿಂತ ಮೊದಲು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.