ರಾಜ್ಕೋಟ್: ಭಾರತ(IND vs ENG) ವಿರುದ್ಧ ಇಲ್ಲಿ ನಡೆದ ಮೂರನೇ ಟೆಸ್ಟ್(India vs England 3rd Test) ಪಂದ್ಯದಲ್ಲಿ ಇಂಗ್ಲೆಂಡ್ ತಂಡ 434 ರನ್ಗಳ ಹೀನಾಯ ಸೋಲು ಕಂಡಿದೆ. ರೋಹಿತ್ ಪಡೆ ಈ ಗೆಲುವಿನೊಂದಿಗೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿಯೂ ಭಾರತ ಸಾಧಿಸಿದ ಅಮೋಘ ಗೆಲುವು ಇದಾಗಿದೆ.
ಪಂದ್ಯದ ನಾಲ್ಕನೇ ದಿನವಾದ ಭಾನುವಾರ 2 ವಿಕೆಟ್ ನಷ್ಟಕ್ಕೆ 196 ಗಳಿಸಿದ್ದಲ್ಲಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(214*) ಅವರ ಎರಡನೇ ದ್ವಿಶತಕ ಹಾಗೂ ಶುಭಮನ್ ಗಿಲ್(91) ಮತ್ತು ಸರ್ಫರಾಜ್ ಖಾನ್ (68*) ಅವರ ಅರ್ಧಶತಕದ ನೆರವಿನಿಂದ ದ್ವಿತೀಯ ಇನಿಂಗ್ಸ್‌ನಲ್ಲಿ 4 ವಿಕೆಟ್ಗೆ 430 ರನ್ ಬಾರಿಸಿ ಡಿಕ್ಲೇರ್ ಮಾಡಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ನಾಟಕೀಯ ಕುಸಿತ ಕಂಡು 122 ರನ್ಗೆ ಸರ್ವಪತನ ಕಂಡಿತು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಅತಿ ದೊಡ್ಡ ಗೆಲುವು ಕೂಡ ಆಗಿದೆ. ನ್ಯೂಜಿಲ್ಯಾಂಡ್ ವಿರುದ್ಧ 2021ರಲ್ಲಿ ಮುಂಬೈಯಲ್ಲಿ ನಡೆದಿದ್ದ ಪಂದ್ಯದಲ್ಲಿ 372 ರನ್ ಗೆಲುವು ಕಂಡಿದ್ದು ಇದುವರೆಗಿನ ದೊಡ್ಡ ಮೊತ್ತದ ಗೆಲುವಾಗಿತ್ತು. ಸರಣಿಯ ನಾಲ್ಕನೇ ಪಂದ್ಯ ಫೆ.23ರಿಂದ ರಾಂಚಿಯಲ್ಲಿ ಆರಂಭಗೊಳ್ಳಲಿದೆ.
ಜೈಸ್ವಾಲ್ ದ್ವಿಶತಕ
ಮೂರನೇ ದಿನದ ಆಟದ ವೇಳೆ ಬೆನ್ನು ನೋವಿಗೆಚ ಸಿಲುಕಿ ನಿವೃತ್ತಿ ಪಡೆದಿದ್ದ ಜೈಸ್ವಾಲ್, ಇಂದು ಮತ್ತೆ ಕ್ರೀಸ್‌ಗೆ ಆಗಮಿಸಿ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಿಕೊಂಡರು. 236 ಎಸೆತಗಳಲ್ಲಿ 214 ರನ್ ಗಳಿಸಿ ಅಜೇಯರಾಗು ಉಳಿದರು. ಅವರ ಈ ವಿಸ್ಫೋಟಕ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ ಬರೋಬ್ಬರಿ 12 ಸಿಕ್ಸರ್ ಹಾಗೂ 14 ಬೌಂಡರಿಗಳು ದಾಖಲಾಯಿತು. ಇದು ಜೈಸ್ವಾಲ್ ಅವರ ಸತತ ಎರಡನೇ ಟೆಸ್ಟ್ ದ್ವಿಶತಕವಾಗಿದೆ. ವಿಶಾಖಪಟ್ಟಣದಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ನಲ್ಲಿಯೂ ಜೈಸ್ವಾಲ್ ದ್ವಿಶತಕ ಬಾರಿಸಿದ್ದರು.
It's @imjadeja with the final breakthrough 😎 #TeamIndia win the 3rd Test by 434 runs! 👏👏
— BCCI (@BCCI) February 18, 2024
Scorecard ▶️ https://t.co/FM0hVG5X8M#TeamIndia | #INDvENG | @IDFCFIRSTBank pic.twitter.com/A4juPRkWX8
ಜೈಸ್ವಾಲ್ಗೆ ಮತ್ತೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್ ಸಾಥ್ ನೀಡಿದ ಶುಭಮನ್ ಗಿಲ್ ಅವರು 91 ರನ್ ಗಳಿಸಿದ್ದ ವೇಳೆ ಕುಲ್ದೀಪ್ ಯಾದವ್ ಅವರ ಗಡಿಬಿಡಿಯ ಕರೆಯಿಂದ ರನೌಟ್ ಆದರು. ಇದರಿಂದ ಕೇವಲ 9 ರನ್ ಅಂತರದಲ್ಲಿ ಶತಕ ತಪ್ಪಿಸಿಕೊಂಡರು. ಆ ಬಳಿಕ ಬಂದ ಸರ್ಫರಾಜ್ ಖಾನ್, ಮೊದಲ ಇನಿಂಗ್ಸ್‌ನಲ್ಲಿ ತೋರಿದ ಬ್ಯಾಟಿಂಗ್ ಪ್ರದರ್ಶನವನ್ನು ದ್ವಿತೀಯ ಇನಿಂಗ್ಸ್ನಲ್ಲಿಯೂ ತೋರ್ಪಡಿಸಿದರು. ಬಿರುಸಿನ ಬ್ಯಾಟಿಂಗ್ ಮೂಲಕ ಅಜೇಯ 68 ರನ್ ಗಳಿಸಿ ಎರಡೂ ಇನಿಂಗ್ಸ್ನಲ್ಲಿಯೂ ಅರ್ಧಶತಕ ಬಾರಿಸಿದ ಸಾಧನೆ ಮಾಡಿದರು.
ಇದನ್ನೂ ಓದಿ Yashasvi Jaiswal: ಜೈಸ್ವಾಲ್ ಬ್ಯಾಟಿಂಗ್ ಆರ್ಭಟಕ್ಕೆ ಹಲವು ದಾಖಲೆ ಪುಡಿಪುಡಿ
ತಾಯಿಯ ಅನಾರೋಗ್ಯದಿಂದ ದಿಢೀರನೇ ಚೆನ್ನೈಗೆ ಮರಳಿದ್ದ ಆರ್. ಅಶ್ವಿನ್(R Ashwin) ನಾಲ್ಕನೇ ದಿನದಾಟದ ಭಾರತದ ಬೌಲಿಂಗ್ ಇನಿಂಗ್ಸ್ ವೇಳೆ ಕಣಕ್ಕಿಳಿದರು. 6 ಓವರ್ ಬೌಲಿಂಗ್ ನಡೆಸಿ ಒಂದು ವಿಕೆಟ್ ಕೂಡ ಕೆಡವಿದರು. ಕೌಟುಂಬಿಕ ತುರ್ತು ಕಾರಣ ನೀಡಿ ಚೆನ್ನೈಗೆ ತೆರಳಿದ್ದ ಅಶ್ವಿನ್ ಮೂರನೇ ದಿನದಾಟವನ್ನು ತಪ್ಪಿಸಿಕೊಂಡಿದ್ದರು. ಮೂರನೇ ದಿನದಾಟದಲ್ಲಿ ಅಶ್ವಿನ್ ಬದಲು ದೇವದತ್ತ ಪಡಿಕ್ಕಲ್ ಬದಲಿ ಫೀಲ್ಡರ್ ಆಗಿ ಆಡಿದ್ದರು.
ಜಡೇಜಾ ಸ್ಪಿನ್ ಜಾದೂ
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ಗೆ ಕಡಿವಾಣ ಹಾಕಿದ್ದು ಸ್ಪಿನ್ನರ್ ರವೀಂದ್ರ ಜಡೇಜಾ. ತಮ್ಮ ಸ್ಪಿನ್ನ ಮೋಡಿಯ ಮೂಲಕ 5 ವಿಕೆಟ್ ಕಿತ್ತು ಮರೆದಾಡಿದರು. ಈ ಮೂಲಕ ತವರಿನಲ್ಲಿ ತಾನೆಷ್ಟು ಬಲಿಷ್ಠ ಎನ್ನುವುದನ್ನು ಸಾಬೀತುಪಡಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಕೂಡ ಬಾರಿಸಿದ್ದರು. ಇಂಗ್ಲೆಂಡ್ ಪರ ಅತ್ಯಧಿಕ ರನ್ ಗಳಿಸಿದ್ದು ಬೌಲರ್ ಮಾರ್ಕ್ ವುಡ್ ಮಾತ್ರ ಕೊನೆಯ ಕ್ರಮಾಂಕದಲ್ಲಿ ಆಡಲಿಳಿದ ಅವರು 6 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿ 33 ರನ್ ಬಾರಿಸಿದರು. ಅವರ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ ಬ್ಯಾಟಿಂಗ್ ಇನಿಂಗ್ಸ್ ಕೂಡ ಮುಕ್ತಾಯಕಂಡಿತು.