Site icon Vistara News

IND vs ENG: ಇಂಗ್ಲೆಂಡ್​ಗೆ ಹೋಪ್​ ನೀಡಿದ ಓಲಿ ಪೋಪ್

Ollie Pope celebrates his hundred

ಹೈದರಾಬಾದ್: ಪ್ರವಾಸಿ ಇಂಗ್ಲೆಂಡ್(IND vs ENG) ಮತ್ತು ಭಾರತ ನಡುವಣ ಮೊದಲ ಟೆಸ್ಟ್ ಪಂದ್ಯ(India vs England 1st Test)​ ರೋಚಕ ಹಂತ ತಲುಪಿದೆ. ಓಲಿ ಪೋಪ್(ಅಜೇಯ 148) ನಡೆಸಿದ​ ದಿಟ್ಟ ಬ್ಯಾಟಿಂಗ್​ ಹೋರಾಟದಿಂದ ಇಂಗ್ಲೆಂಡ್​ ತಂಡ ದ್ವಿತೀಯ ಇನಿಂಗ್ಸ್​ನಲ್ಲಿ ಚೇತರಿಕೆಯ ಹಾದಿ ಹಿಡಿದಿದೆ. ಆದರೆ, ಗೆಲುವಿನ ಅವಕಾಶ ಭಾರತದ ಪರವಾಗಿದೆ.

ಹೈದರಾಬಾದ್​ನ ರಾಜೀವಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನವಾದ ಶನಿವಾರ 421 ರನ್​ಗಳಿಂದ ಬ್ಯಾಟಿಂಗ್​ ಮುಂದುವರಿಸಿದ ಭಾರತ ಕೇವಲ 15 ರನ್​ಗಳಿಸಿ ಆಲೌಟ್​ ಆಯಿತು. ಒಟ್ಟು 436 ರನ್​ ಗಳಿಸಿ 190ರನ್​ಗಳ ಮುನ್ನಡೆ ಸಾಧಿಸಿತು. 190 ರನ್​ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ ನಾಟಕೀಯ ಕುಸಿತ ಕಂಡರೂ, ಆ ಬಳಿಕ ಚೇತರಿಕೆ ಕಂಡು 6 ವಿಕೆಟ್​ಗೆ 316 ರನ್​ ಗಳಿಸಿ 126 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ. ಇನ್ನು 2 ದಿನಗಳ ಆಟ ಬಾಕಿ ಇದೆ.

ಪೋಪ್ ದಿಟ್ಟ ಹೋರಾಟ


ಭಾರಿ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ಗೆ ಆರ್​.ಅಶ್ವಿನ್​ ಆರಂಭದಲ್ಲೇ ಆಘಾತವಿಕ್ಕಿದರು. 31 ರನ್​ ಗಳಿಸಿದ್ದ ಜಾಕ್​ ಕ್ರಾಲಿ ವಿಕೆಟ್​ ಕಿತ್ತು​ ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಈ ವಿಕೆಟ್​ ಪತನದ ಬಳಿಕ ಕ್ರೀಸ್​ಗಿಳಿದ ಓಲಿ ಪೋಪ್​ ಅವರು ಬೆನ್​ ಡಕೆಟ್​ ಜತೆ ಸೇರಿ ಉತ್ತಮ ಜತೆಯಾಟವೊಂದನ್ನು ನಿರ್ವಹಿಸಿದರು. ಆದರೆ ಈ ಜೋಡಿಯನ್ನು ಬುಮ್ರಾ ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಲು ಬಿಡಲಿಲ್ಲ. ಫಾತಕ ಯಾರ್ಕರ್​ ಎಸೆದು ಡಕೆಟ್ ಅವರನ್ನು ಕ್ಲೀನ್​ ಬೌಲ್ಡ್​ ಮಾಡಿದರು. ಡಕೆಟ್ 47 ರನ್​ಗಳಿಸಿದರು. ಪೋಪ್ ಮತ್ತು ಡಕೆಟ್ ದ್ವಿತೀಯ ವಿಕೆಟ್​ಗೆ 68 ರನ್​ ಒಟ್ಟುಗೂಡಿಸಿದರು.

ಬೆನ್​ ಡಕೆಟ್ ವಿಕೆಟ್​ ಪತನದ ಬಳಿಕ ಬಂದ ಜೋ ರೂಟ್​(2), ನಾಯಕ ಬೆನ್​ ಸ್ಟೋಕ್ಸ್​(6) ಮತ್ತು ಜಾನಿ ಬೇರ್​ ಸ್ಟೋ(10) ರನ್​ ಗಳಿಸಿ ಬೇಗನೆ ವಿಕೆಟ್​ ಕೈಚೆಲ್ಲಿದರು. 163ಕ್ಕೆ 5 ವಿಕೆಟ್​ ಕಳೆದುಕೊಂಡು ನಾಟಕೀಯ ಕುಸಿತ ಕಂಡ ಇಂಗ್ಲೆಂಡ್​ ಇನ್ನೇನು ಕೆಲವೇ ಹೊತ್ತಲ್ಲಿ ಆಲೌಟ್​ ಆಗಿ ಭಾರತ ಇನ್ನಿಂಗ್ಸ್​ ಗೆಲುವು ಸಾಧಿಸುತ್ತದೆ ಎಂದು ಕ್ರಿಕೆಟ್​ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಛಲ ಬಿಡದೆ, ಯಾವುದೇ ಆತಂಕಕ್ಕೆ ಒಳಗಾಗದೆ ಟೊಂಕ ಕಟ್ಟಿ ನಿಂತ ಪೋಪ್ ಏಕಾಂಗಿಯಾಗಿ ಬ್ಯಾಟಿಂಗ್​ ಹೋರಾಟ ನಡೆಸಿದರು. ಭಾರತದ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ಅಜೇಯ ಶತಕ ಬಾರಿಸಿ ತಂಡಕ್ಕೆ ನೆರವಾದರು. ಇದು ಪೋಪ್​ ಅವರ ಭಾರತ ವಿರುದ್ಧದ ಮೊದಲ ಶತಕವಾಗಿದೆ. ಒಟ್ಟಾರೆ ಮೂರನೇ ಟೆಸ್ಟ್​ ಶತಕ.

ಇದನ್ನೂ ಓದಿ Ravindra Jadeja : ವಿಕೆಟ್​ಗಳ ದಾಖಲೆಯಲ್ಲಿ ಜಾವಗಲ್ ಶ್ರೀನಾಥ್ ಹಿಂದಿಕ್ಕಿದ ಜಡೇಜಾ

7ನೇ ಕ್ರಮಾಂಕದಲ್ಲಿ ಆಡಲಿಳಿದ ಕೀಪರ್​ ಬೆನ್​ ಫೋಕ್ಸ್​ ಅವರು ಸಣ್ಣ ಬ್ಯಾಟಿಂಗ್​ ಹೋರಾಟವೊಂದನ್ನು ನಡೆಸಿ ಪೋಪ್​ಗೆ ಉತ್ತಮ ಸಾಥ್​ ನೀಡಿದರು. 34 ರನ್​ಗಳಿಸಿ ಅಕ್ಷರ್​ ಪಟೇಲ್​ಗೆ ವಿಕೆಟ್​ ಒಪ್ಪಿಸಿದರು. ಈ ಜೋಡಿ 6ನೇ ವಿಕೆಟ್​ಗೆ 112 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿತು. ಈ ಪರಿಣಾಮ ಇಂಗ್ಲೆಂಡ್​ ಮುನ್ನಡೆ ಸಾಧಿಸುವಂತಾಯಿತು.

​ಪೋಪ್​ 208 ಎಸೆತ ಎದುರಿಸಿ ಅಜೇಯ 148* ರನ್​ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ರೆಹಾನ್ ಅಹ್ಮದ್(16*) ರನ್​ ಗಳಿಸಿದ್ದಾರೆ. ಭಾರತ ಪರ ದ್ವಿತೀಯ ಇನಿಂಗ್ಸ್​ನಲ್ಲಿ ಜಸ್​ಪ್ರೀತ್​ ಬುಮ್ರಾ ಮತ್ತು ಆರ್​.ಅಶ್ವಿನ್​ ತಲಾ 2 ವಿಕೆಟ್​ ಉರುಳಿಸಿದರು. ಇನ್ನೂ 2 ದಿನಗಳ ಆಟ ಬಾಕಿ ಇರುವ ಕಾರಣ ಭಾರತಕ್ಕೆ ಗೆಲ್ಲುವ ಅವಕಾಶ ಹೆಚ್ಚು ಎನ್ನಲಡ್ಡಿಯಿಲ್ಲ.

ಸಂಕ್ಷಿಪ್ತ ಸ್ಕೋರು

ಇಂಗ್ಲೆಂಡ್ ಮೊದಲ ಇನಿಂಗ್ಸ್: 64.3 ಓವರ್‌ಗಳಲ್ಲಿ 246.

ಭಾರತ ಮೊದಲ ಇನಿಂಗ್ಸ್: 121 ಓವರ್‌ಗಳಲ್ಲಿ 436

ಇಂಗ್ಲೆಂಡ್​ ದ್ವಿತೀಯ ಇನಿಂಗ್ಸ್​: 316-6 (77) ಬ್ಯಾಟಿಂಗ್​ ಕಾಯ್ದುಕೊಂಡಿದೆ.

Exit mobile version