ಮುಂಬೈ: ರವಿಚಂದ್ರನ್ ಅಶ್ವಿನ್ (Ravichandran Ashwin) ಕುಟುಂಬದಲ್ಲಿ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧ ಇಂಗ್ಲೆಂಡ್ (IND vs ENG) ವಿರುದ್ಧದ 3 ನೇ ಟೆಸ್ಟ್‌ನಿಂದ ಹೊರ ಬಿದ್ದಿದ್ದಾರೆ ಎಂಬ ಮಾಹಿತಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶುಕ್ರವಾರ ರಾತ್ರಿ ಹಂಚಿಕೊಂಡಿದೆ.
ವಿಶೇಷ ಎಂದರೆ, ಅಶ್ವಿನ್ ಅವರು ರಾಜ್‌ಕೋಟ್‌ನಲ್ಲಿ ತಮ್ಮ 500 ನೇ ಟೆಸ್ಟ್ ವಿಕೆಟ್ ಪಡೆದ ಕೆಲವೇ ಗಂಟೆಗಳ ನಂತರ ಭಾರತ ತಂಡದಿಂದ ಅವರನ್ನು ಕೈ ಬಿಡಬೇಕಾಯಿತು. ಅವರು ತಕ್ಷಣದಿಂದ ಜಾರಿಗೆ ಬರುವಂತೆ ತಂಡದಿಂದ ಹೊರಗುಳಿದಿದ್ದಾರೆ ಎಂದು ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ. ಬಿಸಿಸಿಐ ಆಟಗಾರನಿಗೆ ತನ್ನ ಸಂಪೂರ್ಣ ಬೆಂಬಲವನ್ನು ನೀಡಿದರೆ, ಅಶ್ವಿನ್ ಮತ್ತು ಅವರ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಮಾಧ್ಯಮಗಳು ಮತ್ತು ಅಭಿಮಾನಿಗಳನ್ನು ವಿನಂತಿಸಿದೆ.
ರವಿಚಂದ್ರನ್ ಅಶ್ವಿನ್ ಟೆಸ್ಟ್ ತಂಡದಿಂದ ಹಿಂದೆ ಸರಿದಿದ್ದಾರೆ, ಕೌಟುಂಬಿಕ ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ತಂಡವು ಅಶ್ವಿನ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
R Ashwin withdraws from the 3rd India-England Test due to family emergency.
— BCCI (@BCCI) February 16, 2024
In these challenging times, the Board of Control for Cricket in India (BCCI) and the team fully supports Ashwin.https://t.co/U2E19OfkGR
ಚಾಲ್ತಿಯಲ್ಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸುತ್ತಿರುವ ಭಾರತ ಕ್ರಿಕೆಟ್ ತಂಡಕ್ಕೆ ಈ ಸುದ್ದಿ ದೊಡ್ಡ ಆಘಾತ ನೀಡಿದೆ. ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಬೌಲಿಂಗ್ ದಾಳಿಯು ಇದುವರೆಗೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. 2 ನೇ ದಿನದ ಆಟದ ಅಂತ್ಯದ ವೇಳೆಗೆ ಕೇವಲ 35 ಓವರ್‌ಗಳಲ್ಲಿ ಇಂಗ್ಲೆಂಡ್ ತಂಡವು 2 ವಿಕೆಟ್‌ಗೆ 207 ರನ್ ಗಳಿಸಿದೆ. ಎರಡು ವಿಕೆಟ್ ಪೈಕಿ ಒಂದು ವಿಕೆಟ್ ಅನ್ನು ಅಶ್ವಿನ್ ಅವರು ಪಡೆದುಕೊಂಡಿದ್ದಾರೆ.
500 ವಿಕೆಟ್ಗಳ ಸರದಾರನಾದ ಆರ್. ಅಶ್ವಿನ್
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್(India vs England 3rd Test) ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಹಾಗೂ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್(Ravichandran Ashwin) ಅವರು ಜಾಕ್ ಕ್ರಾಲಿ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ದಾಖಲೆ ಬರೆದರು. ಜತೆಗೆ ಈ ಸಾಧನೆ ಮಾಡಿದ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್. ಅನಿಲ್ ಕುಂಬ್ಳೆ ಟೆಸ್ಟ್ನಲ್ಲಿ 619 ವಿಕೆಟ್ ಪಡೆದಿದ್ದಾರೆ.
37 ವರ್ಷದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(R Ashwin) ಅವರಿಗೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿಯೇ 500 ವಿಕೆಟ್ ಸಾಧನೆ ಮಾಡಬಹುದಿತ್ತು. ಆದರೆ ಅವರು ಮೊದಲ ಇನಿಂಗ್ಸ್ನಲ್ಲಿ ವಿಕೆಟ್ ಕೀಳುವಲ್ಲಿ ವಿಫಲರಾಗಿದ್ದರು. ಇದೀಗ ಮೂರನೇ ಪಂದ್ಯದಲ್ಲಿ ಈ ಮೈಲುಗಲ್ಲು ನಿರ್ಮಿಸಿದರು. ಅಶ್ವಿನ್ ಇದುವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ 98 ಟೆಸ್ಟ್ ಪಂದ್ಯಗಳನ್ನು ಆಡಿ 500* ವಿಕೆಟ್ಗಳನ್ನು ಉರುಳಿಸಿದ್ದಾರೆ. 34 ಬಾರಿ ಇನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. 8 ಬಾರಿ 10 ವಿಕೆಟ್ ಗೊಂಚಲು ಪಡೆದಿದ್ದಾರೆ.
ಪ್ರಸಕ್ತ ಕ್ರಿಕೆಟ್ ಆಡುತ್ತಿರುವ ಬೌಲರ್ಗಳ ಪೈಕಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಕಿತ್ತ ಸಾಧಕರ ಪಟ್ಟಿಯಲ್ಲಿ ಅಶ್ವಿನ್ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್(696) ಮತ್ತು ಆಸ್ಟ್ರೇಲಿಯಾದ ನಥಾನ್ ಲಿಯೋನ್(512) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ.
ಈ ಸುದ್ದಿಯನ್ನೂ ಓದಿ: ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ @36