ಟರೂಬ/ಪ್ರೊವಿಡೆನ್ಸ್: ಚುಟುಕು ಕ್ರಿಕೆಟ್‌ನಲ್ಲಿ ತನ್ನದೇ ಹೆಗ್ಗುರುತು ಸ್ಥಾಪಿಸಿರುವ ಟೀಮ್ ಇಂಡಿಯಾ ನಾಳೆ (ಗುರುವಾರ) ನಡೆಯುವ ಟಿ20 ವಿಶ್ವಕಪ್(T20 World Cup 2024) ಟೂರ್ನಿಯ ಸೆಮಿಫೈನಲ್(IND vs ENG Semi Final) ಪಂದ್ಯದಲ್ಲಿ ಇಂಗ್ಲೆಂಡ್(IND vs ENG) ವಿರುದ್ಧ ಅದೃಷ್ಠ ಪರೀಕ್ಷೆಗೆ ಇಳಿಯಲಿದೆ. ಸೀಮಿತ ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ಕಳೆದ ಕೆಲವು ವರ್ಷಗಳಿಂದ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ. ಅತ್ತ ಹಾಲಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ಸಹ ಇತ್ತೀಚೆಗೆ ಟಿ20ಗಳಲ್ಲಿ ಬಲಾಡ್ಯ ತಂಡವಾಗಿ ಹೊರಹೊಮ್ಮಿದೆ. ಹೀಗಾಗಿ ಇತ್ತಂಡಗಳ ನಡುವಿನ ಕ್ರಿಕೆಟ್ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.
ಭಾರತಕ್ಕೆ ಕೊಹ್ಲಿಯದ್ದೇ ಚಿಂತೆ
ಪ್ರತಿ ಐಸಿಸಿ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿಯ ಬ್ಯಾಟ್ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸದ್ದು ಮಾಡುತ್ತಿಲ್ಲ. ಇದು ಭಾರತ ತಂಡಕ್ಕೆ ದೊಡ್ಡ ಚಿಂತೆ ಉಂಟು ಮಾಡಿದೆ. ಆಡಿದ 7 ಪಂದ್ಯಗಳಲ್ಲಿ 2 ಶೂನ್ಯ ಸುತ್ತಿದ್ದಾರೆ. ಒಂದು ಪಂದ್ಯದಲ್ಲಿ ಮಾತ್ರ ಎರಡಂಕಿ ದಾಟಿದ್ದಾರೆ. ಹೀಗಾಗಿ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಸಿಡಿದು ನಿಲ್ಲಬೇಕಾದುದ ಅನಿವಾರ್ಯತೆ ಇದೆ. ಕೊಹ್ಲಿ ಜತೆಗೆ ಶಿವಂ ದುಬೆ ಕೂಡ ಸಿಡಿದು ನಿಲ್ಲಬೇಕಿದೆ. ಐಪಿಎಲ್ನಲ್ಲಿ ತೋರಿದ ಬ್ಯಾಟಿಂಗ್ ಆರ್ಭಟವನ್ನು ದುಬೆ ಈ ಟೂರ್ನಿಯಲ್ಲಿ ಇದುವರೆಗೆ ತೋರಿಸಿಲ್ಲ. ಎಲ್ಲ ಪಂದ್ಯಗಳಲ್ಲಿಯೂ ಆಮೆ ಗತಿಯ ಬ್ಯಾಟಿಂಗ್ ನಡೆಸಿ ತಂಡದ ಬೃಹತ್ ಮೊತ್ತಕ್ಕೆ ಹಿನ್ನಡೆ ಉಂಟುಮಾಡುತ್ತಿದ್ದಾರೆ.
ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಈ ಬಾರಿಯ ಐಪಿಎಲ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಘೋರ ವೈಫಲ್ಯ ಕಂಡಿದ್ದರು. ಅವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಿದಾಗ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಆದರೆ, ಪಾಂಡ್ಯ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ನೆರವಾಗುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಂದು ಪಾಂಡ್ಯ ಬೇಡ ಎಂದವರು ಇಂದು ಪಾಂಡ್ಯ ಇಲ್ಲದೇ ಇದ್ದರೆ ಗೆಲುವು ಕಷ್ಟ ಎನ್ನುತ್ತಿದ್ದಾರೆ. ಕಳೆದ ಆಸೀಸ್ ವಿರುದ್ಧ ಪ್ರಚಂಡ ಬ್ಯಾಟಿಂಗ್ ನಡೆಸಿದ ನಾಯಕ ರೋಹಿತ್ ಶರ್ಮ ಅವರ ಬ್ಯಾಟಿಂಗ್ ಮೇಲೆ ಈ ಪಂದ್ಯದಲ್ಲಿಯೂ ತಂಡ ನಂಬಿಕೆ ಇರಿಸಿದೆ.
ಇದನ್ನೂ ಓದಿ IND vs ENG: ಇಂಗ್ಲೆಂಡ್ ಎದುರು ಭಾರತಕ್ಕೆ ಸೇಡಿನ ಪಂದ್ಯ; ನಾಳೆ ದ್ವಿತೀಯ ಸೆಮಿಫೈನಲ್
ಇಂಗ್ಲೆಂಡ್ ಕೂಡ ಬಲಿಷ್ಠ
ಇಂಗ್ಲೆಂಡ್ ನಾಯಕ ಜಾಸ್ ಬಟ್ಲರ್, ಫಿಲ್ ಸಾಲ್ಟ್, ಜಾನಿ ಬೇರ್‌ಸ್ಟೊ, ಲಿವಿಂಗ್ಸ್ಟೋನ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಮೊಯಿನ್ ಅಲಿ ಅವರನ್ನೊಳಗೊಂಡ ಬ್ಯಾಟಿಂಗ್ ಸರದಿ ಟಿ20ಗೆ ಹೇಳಿ ಮಾಡಿಸಿದಂತಿದೆ. ಇವರನ್ನು ನಿಯಂತ್ರಿಸುವುದರಲ್ಲಿ ಭಾರತದ ಯಶಸ್ಸು ಅಡಗಿದೆ. ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದ ಘಾತಕ ವೇಗಿ ಜೋಫ್ರಾ ಆರ್ಚರ್ ಕೂಡ ತಂಡಕ್ಕೆ ಮರಳಿದ್ದು ಇಂಗ್ಲೆಂಡ್ ಬೌಲಿಂಗ್ ಬಲವನ್ನು ಹೆಚ್ಚಿಸಿದೆ.
ಸೇಡಿನ ಪಂದ್ಯ
2022ರಲ್ಲಿ ಅಡಿಲೇಡ್ನಲ್ಲಿ ನಡೆದ ಟಿ20 ವಿಶ್ವಕಪ್ ಸೆಮೀಸ್ನಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ 10 ವಿಕೆಟ್ಗಳ ಹೀನಾಯ ಸೋಲುಣಿಸಿ ಫೈನಲ್ ಪ್ರವೇಶಿಸಿತ್ತು. ಇದೀಗ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ. ಇದರಲ್ಲಿ ರೋಹಿತ್ ಬಳಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೊಂದು ಕುತೂಹಲ.