ಪ್ರೊವಿಡೆನ್ಸ್: ಇಂಗ್ಲೆಂಡ್(IND vs ENG) ವಿರುದ್ಧ ಇಂದು ನಡೆಯುವ ಟಿ20 ವಿಶ್ವಕಪ್(T20 World Cup 2024) ಸೆಮಿಫೈನಲ್ (IND vs ENG Semi Final)ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ ಒಂದು ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಕೆಲ ಮೂಲಗಳು ವರದಿ ಮಾಡಿದೆ. ಸತತವಾಗಿ ಬ್ಯಾಟಿಂಗ್ ವೈಫಲ್ಯ ಕಾಣುತ್ತಿರುವ ಎಡಗೈ ಬ್ಯಾಟರ್ ಶಿವಂ ದುಬೆ ಅವರನ್ನು ಈ ಪಂದ್ಯದಿಂದ ಕೈಬಿಡಲಾಗುವುದು ಎನ್ನಲಾಗಿದೆ.
ಈ ಬಾರಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಇಂಪ್ಯಾಕ್ಟ್ ಆಟಗಾರನಾಗಿ ಪ್ರಚಂಡ ಬ್ಯಾಟಿಂಗ್ ನಡೆಸುತ್ತಿದ್ದ ದುಬೆ ವಿಶ್ವಕಪ್ ಟೂರ್ನಿಯಲ್ಲಿ ರನ್ ಗಳಿಸಲು ಪರದಾಡುತ್ತಿದ್ದಾರೆ. ಬೌಲಿಂಗ್ ಆಲ್ರೌಂಡರ್ ಆಗಿದ್ದರೂ ಕೂಡ ಇದುವರೆಗೆ ಒಂದು ಪಂದ್ಯದಲ್ಲಿ ಮಾತ್ರ ಒಂದು ಓವರ್ ಬೌಲಿಂಗ್ ನಡೆಸಿದ್ದಾರೆ. ಫೀಲ್ಡಿಂಗ್ ಕೂಡ ಕಳಪೆ ಮಟ್ಟದಿಂದ ಕೂಡಿದೆ. ಸತತವಾಗಿ ವಿಫಲರಾಗುತ್ತಿದ್ದರೂ ಕೂಡ ಪದೇಪದೆ ಅವರಿಗೆ ಅವಕಾಶ ನೀಡುತ್ತಿರುವುದಕ್ಕೆ ಹಲವರಿಂದ ವಿರೋಧ ಕೂಡ ವ್ಯಕ್ತವಾಗಿದೆ. ಇದೀಗ ಮಹತ್ವದ ಸೆಮಿ ಪಂದ್ಯದಿಂದ ಇವರನ್ನು ಕೈ ಬಿಟ್ಟು ಸಂಜು ಸ್ಯಾಮ್ಸನ್ ಅವರನ್ನು ಆಡಿಸುವ ಯೋಜನೆಯೊಂದನ್ನು ರೂಪಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಂಜು ಸ್ಯಾಮ್ಸನ್ ಹೊಡಿಬಡಿ ಆಟಕ್ಕೆ ಹೇಳಿ ಮಾಡಿಸಿದ ಆಟಗಾರ. ಐಪಿಎಲ್ನಲ್ಲಿ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ. ಒಮ್ಮೆ ಸಿಡಿದು ನಿಂತರೆ ದೊಡ್ಡ ಮೊತ್ತ ಪೇರಿಸುವುದು ಖಚಿತ. ಯಾವುದೇ ಕ್ರಮಾಂಕದಲ್ಲಿಯೂ ಬ್ಯಾಟ್ ಬೀಸುವ ಚಾಕಚಕ್ಯತೆ ಇವರಲ್ಲಿದೆ. ಕೆಳ ಕ್ರಮಾಂಕದಲ್ಲಿ ಆಡಿಸಿದರೆ ಅವರ ಬಿರುಸಿನ ಬ್ಯಾಟಿಂಗ್ ಸಹಾಯದಿಂದ ತಂಡ ಬೃಹತ್ ಮೊತ್ತ ಕೂಡ ದಾಖಲಿಸಲು ನೆರವಾಗುತ್ತದೆ. ಹೀಗಾಗಿ ಅವರಿಗೆ ಇಂದಿನ ಪಂದ್ಯದಲ್ಲಿ ಆಡುವ ಅವಕಾಶ ಸಿಗಬಹುದು. ಬ್ಯಾಟಿಂಗ್ ಮಾತ್ರವಲ್ಲದೆ ಪಾದರಸದಂತೆ ಚುರುಕಿನ ಫೀಲ್ಡಿಂಗ್ ಕೂಡ ಮಾಡಬಲ್ಲರು. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸುವ ಸಾಧ್ಯತೆ ಕಡಿಮೆ.
ಇದನ್ನೂ ಓದಿ IND vs ENG: ಹೈವೋಲ್ಟೇಜ್ ಸೆಮಿ ಕಾದಾಟಕ್ಕೆ ಕ್ಷಣಗಣನೆ; ಸೇಡು ತೀರಿಸಲು ರೋಹಿತ್ ಪಡೆ ಸಜ್ಜು
ಮುಖಾಮುಖಿ
ಭಾರತ ಮತ್ತು ಇಂಗ್ಲೆಂಡ್ ಇದುವರೆಗೆ ಟಿ20 ಕ್ರಿಕೆಟ್ನಲ್ಲಿ 23 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 12 ಪಂದ್ಯ ಗೆದ್ದಿದ್ದರೆ, ಇಂಗ್ಲೆಂಡ್ 11 ಪಂದ್ಯಗಳನ್ನು ಗೆದ್ದಿದೆ. ಕಳೆದ 2 ವರ್ಷಗಳಿಂದ ಇಂಗ್ಲೆಂಡ್ ವಿರುದ್ಧ ಭಾರತ ಗೆಲುವು ಕಂಡಿಲ್ಲ. 2022ರ ಟಿ20 ವಿಶ್ವಕಪ್(T20 World Cup 2024) ಸೆಮಿಫೈನಲ್ ಪಂದ್ಯದ ಬಳಿಕ ಉಭಯ ತಂಡಗಳು ಇದುವರೆಗೂ ಟಿ20ಯಲ್ಲಿ ಮುಖಾಮುಖಿಯಾಗಿಲ್ಲ. ಆ ಪಂದ್ಯದಲ್ಲಿ ಭಾರತ 10 ವಿಕೆಟ್ ಸೋಲು ಕಂಡಿತ್ತು. ಅಂದಿನ ಸೋಲಿಗೆ ಈ ಬಾರಿಯ ಸೆಮಿ ಕಾದಾಟದಲ್ಲಿ ಭಾರತ ಸೇಡು ತೀರಿಸಿಕೊಂಡೀತೇ ಎಂದು ಕಾದು ನೋಡಬೇಕಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇತ್ತಂಡಗಳು 4 ಪಂದ್ಯಗಳನ್ನು ಆಡಿ ತಲಾ 2 ಪಂದ್ಯಗಳಲ್ಲಿ ಗೆಲುವು ಮತ್ತು ಸೋಲು ಕಂಡಿವೆ. ಭಾರತ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಟಿ20 ಗೆಲುವು ಕಂಡಿದ್ದು 2012ರಲ್ಲಿ. ಆ ಪಂದ್ಯದಲ್ಲಿ ಧೋನಿ ಪಡೆ 90 ರನ್ ಗೆಲುವು ಸಾಧಿಸಿತ್ತು.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ(ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೀ), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.
ಇಂಗ್ಲೆಂಡ್: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ.