ಪ್ರೊವಿಡೆನ್ಸ್: ಅಕ್ಷರ್ ಪಟೇಲ್(23ಕ್ಕೆ 3), ಕುಲ್ದೀಪ್ ಯಾದವ್(19ಕ್ಕೆ 3) ಜೋಡಿಯ ಸ್ಪಿನ್ ದಾಳಿ ಹಾಗೂ ರೋಹಿತ್ ಶರ್ಮ(57) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ(IND vs ENG Semi Final) ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 68 ರನ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ 10 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಜತೆಗೆ 2022ರ ಸೆಮಿಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿದೆ. ಶನಿವಾರ ಬಾರ್ಬಡೋಸ್ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ರೋಹಿತ್ ಪಡೆ ದಕ್ಷಿಣ ಆಫ್ರಿಕಾದ ಸವಾಲು ಎದುರಿಸಲಿದೆ. ಕೂಟದ ಅಜೇಯ ತಂಡಗಳ ನಡುವಣ ಈ ಪ್ರಶಸ್ತಿ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.
ಇಲ್ಲಿನ ಪ್ರೊವಿಡೆನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ, ರೋಹಿತ್ ಶರ್ಮ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 171 ರನ್ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ಇಂಗ್ಲೆಂಡ್ ನಾಟಕೀಯ ಕುಸಿತ ಕಂಡು 16.4 ಓವರ್ಗಳಲ್ಲಿ 103 ರನ್ಗೆ ಸರ್ವಪತನ ಕಂಡಿತು. ಈ ಸೋಲಿನಿಂದಿಗೆ ಹಾಲಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ಈಗ ಮಾಜಿ ಆಯಿತು.
ಅಕ್ಷರ್-ಕುಲ್ದೀಪ್ ಸ್ಪಿನ್ ಮೋಡಿ
ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ಗೆ ನಾಯಕ ಜಾಸ್ ಬಟ್ಲರ್ ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಒದಗಿಸಿದರು. ಒಂದು ಹಂತದಲ್ಲಿ ಅವರ ಬ್ಯಾಟಿಂಗ್ ನೋಡುವಾಗ 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯವೊಮ್ಮೆ ಕಣ್ಣ ಮುಂದೆ ಬಂದಿತು. ಅಬ್ಬರದ ಬ್ಯಾಟಿಂಗ್ ಮೂಲಕ ಮುನ್ನುಗ್ಗುತ್ತಿದ್ದ ಇವರನ್ನು ಕೊನೆಗೂ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಕಟ್ಟಿಹಾಕಿದರು. ತಾನೆಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಎಗರಿಸಿ ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ರಿವರ್ಸ್ ಸ್ವೀಪ್ ಮಾಡುವ ಯತ್ನದಲ್ಲಿ ಕೀಪರ್ ರಿಷಭ್ ಪಂತ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಬಟ್ಲರ್ 4 ಬೌಂಡರಿ ನೆರವಿನಿಂದ 23 ರನ್ ಬಾರಿಸಿದರು.
2ನೇ ಓವರ್ನಲ್ಲಿ ಅಕ್ಷರ್ ಮತ್ತೊಂದು ದೊಡ್ಡ ವಿಕೆಟ್ ಬೇಟೆಯಾಡಿದರು. ಅಪಾಯಕಾರಿ ಬ್ಯಾಟರ್ ಜಾನಿ ಬೇರ್ಸ್ಟೋ ಅವರನ್ನು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ಗೆ ಅಟ್ಟಿದರು. ಈ ವಿಕೆಟ್ ಪತನಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ತಮ್ಮ ಯಾರ್ಕರ್ ದಾಳಿಯಿಂದ ಫಿಲ್ ಸಾಲ್ಟ್ ಅವರನ್ನು ಕ್ಲೀನ್ ಬೌಲ್ಟ್ ಮಾಡಿದ್ದರು.
35 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್ಗೆ ಆ ಬಳಿಕ ಬಂದ ಬ್ಯಾಟರ್ಗಳು ಕೂಡ ಆಸರೆಯಾಗುವಲ್ಲಿ ವಿಫಲರಾದರು. ಮೊಯಿನ್ ಅಲಿ(8) ಕ್ರೀಸ್ ಬಿಟ್ಟು ಸಿಕ್ಸರ್ ಬಾರಿಸುವ ಯತ್ನದಲ್ಲಿ ರಿಷಭ್ ಪಂತ್ ಅವರ ಮಿಂಚಿನ ವೇಗದ ಸ್ಟಂಪ್ ಬಲೆಗೆ ಬಿದ್ದರು. ಈ ವಿಕೆಟ್ ಕೂಡ ಅಕ್ಷರ್ ಪಾಲಾಯಿತು. ಆ ಬಳಿಕ ಆಡಲಿಳಿದ ಆಲ್ರೌಂಡರ್ ಸ್ಯಾಮ್ ಕರನ್(2) ಅವರನ್ನು ಕುಲ್ದೀಪ್ ಯಾದವ್ ತಮ್ಮ ಮೊದಲ ಓವರ್ನಲ್ಲಿಯೇ ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. 5ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಹ್ಯಾರಿ ಬ್ರೂಕ್ ಸಣ್ಣ ಮಟ್ಟದ ಬ್ಯಾಟಿಂಗ್ ಹೋರಾಟವನ್ನು ಸಂಘಟಿಸಿದರೂ ಕೂಡ 25 ರನ್ಗೆ ಇವರ ವಿಕೆಟ್ ಕೂಡ ಪತನಗೊಂಡಿತು. ಇಲ್ಲಿಗೆ ಇಂಗ್ಲೆಂಡ್ ಸೋಲು ಕೂಡ ಖಚಿತಗೊಂಡಿತು. ಅಂತಿಮ ಹಂತದಲ್ಲಿ ವೇಗಿ ಜೋಫ್ರಾ ಆರ್ಚರ್ 1 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 21 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 100 ಗಡಿ ದಾಟಿಸಿದರು. ಭಾರತ ಪರ ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಮೂರು ವಿಕೆಟ್ ಕಿತ್ತರೆ, ಜಸ್ಪ್ರೀತ್ ಬುಮ್ರಾ 2 ವಿಕೆಟ್ ಉರುಳಿಸಿದರು.
ಸೇಡು ತೀರಿಸಿಕೊಂಡ ಭಾರತ
ಈ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಸೇಡನ್ನು ತೀರಿಸಿಕೊಂಡಿತು. ಅಂದು ಅಡಿಲೇಡ್ ಓವಲ್‌ನಲ್ಲಿ ನಡೆದಿದ್ದ ಸೆಮಿ ಪಂದ್ಯದಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳಿಂದ ಭರ್ಜರಿಯಾಗಿ ರೋಹಿತ್ ಪಡೆಯನ್ನು ಮಗುಚಿ ಫೈನಲ್ ಪ್ರವೇಶಿಸಿತ್ತು. ಈ ಬಾರಿ ಭಾರತ ತಂಡ ಇಂಗ್ಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿತು. ಅಲ್ಲಿಗೆ ಲೆಕ್ಕ ಚುಕ್ತಾ ಗೊಂಡಿತು.
ಇದನ್ನೂ ಓದಿ Rohit Sharma: ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿಶ್ವ ದಾಖಲೆ ಬರೆದ ಹಿಟ್ಮ್ಯಾನ್ ರೋಹಿತ್
ಮಳೆಯಿಂದ ಟಾಸ್ ಪ್ರಕ್ರಿಯೆ ಕೂಡ ವಿಳಂಬಗೊಂಡಿತು. ಪಂದ್ಯ ಆರಂಭವಾಗಿ ಭಾರತ 8 ಓವರ್ಗೆ 2 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದ್ದ ವೇಳೆ ಮತ್ತೆ ಮಳೆ ಸುರಿದು ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತು. ಆದರೆ, ಈ ಪಂದ್ಯಕ್ಕೆ ಮೀಸಲು ದಿನ ಇರದ ಕಾರಣ ಹೆಚ್ಚುವರಿ 250 ನಿಮಿಷ ನೀಡಲಾಗಿತ್ತು. ಹೀಗಾಗಿ ಮಳೆ ನಿಂತ ಬಳಿಕ ಓವರ್ ಕಡಿತವಿಲ್ಲದೇ ಪಂದ್ಯವನ್ನು ಮುಂದುವರಿಸಲಾಯಿತು.
ರೋಹಿತ್-ಸೂರ್ಯ ಉತ್ತಮ ಜತೆಯಾಟ
ಮಳೆ ನಿಂತ ಬಳಿಕ ರೋಹಿತ್ ಶರ್ಮ ಜತೆ ಸೂರ್ಯಕುಮಾರ್ ಕೂಡ ಬಿರುಸಿನ ಬ್ಯಾಟಿಂಗ್ಗೆ ಒತ್ತುಕೊಟ್ಟರು. ಉಭಯ ಆಟಗಾರರು ಸೇರಿಕೊಂಡು ಮೂರನೇ ವಿಕೆಟ್ 73 ಜತೆಯಾಟ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. 5 ರನ್ ಗಳಿಸಿದ್ದ ವೇಳೆ ಫಿಲ್ ಸಾಲ್ಟ್ ಅವರಿಂದ ಕ್ಯಾಚ್ ಕೈಚೆಲ್ಲಿ ಜೀವದಾನ ಪಡೆದ ರೋಹಿತ್, ಇದರ ಸಂಪೂರ್ಣ ಲಾಭವೆತ್ತಿದರು. 33 ಎಸೆತಗಳಿಂದ ಅರ್ಧಶತಕ ಬಾರಿಸಿ ಮಿಂಚಿದರು. ಇದು ರೋಹಿತ್ ಅವರ 32ನೇ ಅಂತಾರಾಷ್ಟ್ರೀಯ ಟಿ20 ಅರ್ಧಶತಕ. ಅಂತಿಮವಾಗಿ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಆದೀಲ್ ರಶೀದ್ ಓವರ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ವಿಕೆಟ್ ಪತನಗೊಂಡು 11 ರನ್ ಅಂತರದಲ್ಲಿ ಸೂರ್ಯಕುಮಾರ್ ವಿಕೆಟ್ ಕೂಡ ಬಿತ್ತು. ಸೂರ್ಯಕುಮಾರ್ 47(4 ಬೌಂಡರಿ, 2ಸಿಕ್ಸರ್) ರನ್ ಬಾರಿಸಿದರು.
ಉತ್ತಮ ಸ್ಥಿತಿಯಲ್ಲಿದ್ದ ಭಾರತ, ಸೂರ್ಯಕುಮಾರ್ ಮತ್ತು ರೋಹಿತ್ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಶಿವಂ ದುಬೆ(0) ಗೋಲ್ಡನ್ ಡಕ್ ಸಂಕಷ್ಟಕ್ಕೆ ಸಿಲುಕಿದರೆ, ಅಕ್ಷರ್ ಪಟೇಲ್ 10 ರನ್ಗೆ ಆಟ ಮುಗಿಸಿದರು. ಅಂತಿಮವಾಗಿ ಜಡೇಜಾ ಅಜೇಯ 17(9 ಎಸೆತ, 2 ಬೌಂಡರಿ) ಮತ್ತು ಹಾರ್ದಿಕ್ ಪಾಂಡ್ಯ 23(13 ಎಸೆತ, 2 ಸಿಕ್ಸರ್, 1 ಬೌಂಡರಿ) ರನ್ ಬಾರಿಸಿದ ಪರಿಣಾಮ ತಂಡ 150ರ ಗಡಿ ದಾಟಿತು. ಇಂಗ್ಲೆಂಡ್ ಪರ ಕ್ರಿಸ್ ಜೋರ್ಡನ್ 37 ರನ್ ಬಿಟ್ಟುಕೊಟ್ಟು 3 ವಿಕೆಟ್ ಉರುಳಿಸಿದರು.
ದಾಖಲೆ ಬರೆದ ರೋಹಿತ್
ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರು ಈ ಪಂದ್ಯದಲ್ಲಿ 4 ಬೌಂಡರಿ ಬಾರಿಸುತ್ತಿದ್ದಂತೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ(111 ಬೌಂಡರಿ) ಹೆಸರಿನಲ್ಲಿತ್ತು. 37 ರನ್ ಪೂರ್ತಿಗೊಳಿಸುತ್ತಿದ್ದಂತೆ ಭಾರತ ತಂಡದ ನಾಯಕನಾಗಿ ಎಲ್ಲ ಮಾದರಿಯ ಕ್ರಿಕೆಟ್ ಸೇರಿ 5 ಸಾವಿರ ರನ್ ಪೂರೈಸಿದರು. ಈ ಸಾಧನೆ ಮಾಡಿದ ಭಾರತದ 5ನೇ ನಾಯಕ ಎನಿಸಿಕೊಂಡರು. ವಿರಾಟ್ ಕೊಹ್ಲಿ(12883) ಮೊದಲ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್(11207) ದ್ವಿತೀಯ ಸ್ಥಾನಿಯಾಗಿದ್ದಾರೆ.
ಕೊಹ್ಲಿ ಮತ್ತೆ ವಿಫಲ
ವಿರಾಟ್ ಕೊಹ್ಲಿ(Virat Kohli) ಅವರ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. 9 ಎಸೆತಕ್ಕೆ 9 ರನ್ಗಳಿಸಿ ರೀಸ್ ಟೋಪ್ಲಿ ಎಸೆತಕ್ಕೆ ಕ್ಲೀನ್ ಬೌಲ್ಟ್ ಆದರು. ಈ ಮೂಲಕ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಒಂದಂಕಿಗೆ ಸೀಮಿತರಾದರು. ಇದಕ್ಕೂ ಮುನ್ನ ಕೊಹ್ಲಿ ಆಡಿದ ಎಲ್ಲ ಸೆಮಿಫೈನಲ್ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿದ್ದರು. ರಿಷಭ್ ಪಂತ್ ಕೂಡ ಅವಸರದ ಆಟವಾಡಲು ಮುಂದಾಗಿ ಕೇವಲ 4 ರನ್ಗೆ ವಿಕೆಟ್ ಕೈಚೆಲ್ಲಿದರು.