ಗಯಾನಾ: ಭಾರತ ಮತ್ತು ಇಂಗ್ಲೆಂಡ್ ನಡುವಣ ಸೆಮಿಫೈನಲ್(IND vs ENG Semi Final) ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು(ಗುರುವಾರ) ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಇತ್ತಂಡಗಳ ಈ ಮುಖಾಮುಖಿ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡಚಣೆ ತರುವ ಭೀತಿ ಎದುರಾಗಿದ್ದು ಪಂದ್ಯ ನಡೆಯುವದೇ ಅನುಮಾನ ಎನ್ನಲಾಗಿದೆ. ಮಳೆ ಬಂದರೂ ಕೂಡ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಹೀಗಾಗಿ ಐಸಿಸಿ ನೂತನ ನಿಯಮವೊಂದನ್ನು ಈ ಪಂದ್ಯಕ್ಕೆ ಜಾರಿಗೊಳಿಸಿದೆ.
ಈಗಾಗಲೇ ಹವಾಮಾನ ವರದಿಗಳ ಪ್ರಕಾರ ಪಂದ್ಯದ ವೇಳೆ ಶೇ. 88ರಷ್ಟು ಮಳೆಯಾಗಲಿದ್ದು ಪಂದ್ಯ ರದ್ದಾದರೂ ಅಚ್ಚರಿ ಇಲ್ಲ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಮೀಸಲು ದಿನ ಇರದ ಕಾರಣ ಮಳೆಯಿಂದ ಪಂದ್ಯ ರದ್ದಾದರೆ ವಿಜೇತರನ್ನು ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಸಹಜವಾಗಿಯೇ ಮೂಡಿದೆ. ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡ ನೇರವಾಗಿ ಫೈನಲ್ಗೇರಲಿದೆ. ಸೂಪರ್-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದ್ದು ಇಂಗ್ಲೆಂಡ್ ಸೂಪರ್-8 ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿತ್ತು. ಹೀಗಾಗಿ ಈ ಲಾಭ ಭಾರತಕ್ಕೆ ಲಭಿಸಲಿದೆ.
ಪಂದ್ಯಕ್ಕೆ ಮೀಸಲು ದಿನ ಇರದಿದ್ದರೂ ಕೂಡ ಪಂದ್ಯ ಮುಗಿಸಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಐಸಿಸಿ ನೀಡಿದೆ. ಜತೆಗೆ ಸೆಮಿಫೈನಲ್ನಲ್ಲಿ ಸ್ಪಷ್ಟ ಫಲಿತಾಂಶ ಬರಬೇಕಾದರೆ ಉಭಯ ತಂಡಗಳು ಕನಿಷ್ಠ 10 ಓವರ್ಗಳ ಪಂದ್ಯ ಆಡಬೇಕಾಗಿದೆ. ಲೀಗ್, ಸೂಪರ್-8ನಲ್ಲಿ ಫಲಿತಾಂಶಕ್ಕೆ ಕನಿಷ್ಠ 5 ಓವರ್ಗಳ ಪಂದ್ಯ ಸಾಕಾಗಿತ್ತು.
ಇದನ್ನೂ ಓದಿ Inzamam Ul Haq: ಭಾರತ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ ಪಾಕ್ ಮಾಜಿ ನಾಯಕ
ಭಾರತಕ್ಕೆ ಕೊಹ್ಲಿಯದ್ದೇ ಚಿಂತೆ
ಪ್ರತಿ ಐಸಿಸಿ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿಯ ಬ್ಯಾಟ್ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸದ್ದು ಮಾಡುತ್ತಿಲ್ಲ. ಇದು ಭಾರತ ತಂಡಕ್ಕೆ ದೊಡ್ಡ ಚಿಂತೆ ಉಂಟು ಮಾಡಿದೆ. ಆಡಿದ 7 ಪಂದ್ಯಗಳಲ್ಲಿ 2 ಶೂನ್ಯ ಸುತ್ತಿದ್ದಾರೆ. ಒಂದು ಪಂದ್ಯದಲ್ಲಿ ಮಾತ್ರ ಎರಡಂಕಿ ದಾಟಿದ್ದಾರೆ. ಹೀಗಾಗಿ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಸಿಡಿದು ನಿಲ್ಲಬೇಕಾದುದ ಅನಿವಾರ್ಯತೆ ಇದೆ. ಕೊಹ್ಲಿ ಜತೆಗೆ ಶಿವಂ ದುಬೆ ಕೂಡ ಸಿಡಿದು ನಿಲ್ಲಬೇಕಿದೆ. ಐಪಿಎಲ್ನಲ್ಲಿ ತೋರಿದ ಬ್ಯಾಟಿಂಗ್ ಆರ್ಭಟವನ್ನು ದುಬೆ ಈ ಟೂರ್ನಿಯಲ್ಲಿ ಇದುವರೆಗೆ ತೋರಿಸಿಲ್ಲ. ಎಲ್ಲ ಪಂದ್ಯಗಳಲ್ಲಿಯೂ ಆಮೆ ಗತಿಯ ಬ್ಯಾಟಿಂಗ್ ನಡೆಸಿ ತಂಡದ ಬೃಹತ್ ಮೊತ್ತಕ್ಕೆ ಹಿನ್ನಡೆ ಉಂಟುಮಾಡುತ್ತಿದ್ದಾರೆ.
ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಈ ಬಾರಿಯ ಐಪಿಎಲ್ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಘೋರ ವೈಫಲ್ಯ ಕಂಡಿದ್ದರು. ಅವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಿದಾಗ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಆದರೆ, ಪಾಂಡ್ಯ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ನೆರವಾಗುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಂದು ಪಾಂಡ್ಯ ಬೇಡ ಎಂದವರು ಇಂದು ಪಾಂಡ್ಯ ಇಲ್ಲದೇ ಇದ್ದರೆ ಗೆಲುವು ಕಷ್ಟ ಎನ್ನುತ್ತಿದ್ದಾರೆ. ಕಳೆದ ಆಸೀಸ್ ವಿರುದ್ಧ ಪ್ರಚಂಡ ಬ್ಯಾಟಿಂಗ್ ನಡೆಸಿದ ನಾಯಕ ರೋಹಿತ್ ಶರ್ಮ ಅವರ ಬ್ಯಾಟಿಂಗ್ ಮೇಲೆ ಈ ಪಂದ್ಯದಲ್ಲಿಯೂ ತಂಡ ನಂಬಿಕೆ ಇರಿಸಿದೆ.