Site icon Vistara News

IND vs ENG Semi Final: ಗಯಾನದಲ್ಲಿ ಭಾರೀ ಗಾಳಿ-ಮಳೆ ಶುರು; ರದ್ದಾಗುತ್ತಾ ಸೆಮಿಫೈನಲ್​ ಪಂದ್ಯ?

IND vs ENG Semi Final

IND vs ENG Semi Final: Washout Threat Looms, Rain Likely To Knock Out

ಪ್ರೊವಿಡೆನ್ಸ್‌: ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಯಂತೆ ಗಯಾನದಲ್ಲಿ ಭಾರೀ ಮಳೆ ಸುರಿಯಲು ಆರಂಭಗೊಂಡಿದೆ. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್​(IND vs ENG Semi Final) ನಡುವಣ ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯ ನಡೆಯುವುದು ಅನುಮಾನ ಎನ್ನಲಡ್ಡಿಯಿಲ್ಲ. ಗಾಳಿ ಮಳೆಯ ವಿಡಿಯೊವನ್ನು ಎಎನ್​ಐ ಸುದ್ದಿ ಸಂಸ್ಥೆ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ದಿನೇಶ್​ ಕಾರ್ತಿಕ್​ ಅವರು ಮೈದಾನವನ್ನು ಕವರ್​ನಿಂದ ಮುಚ್ಚಿದ ಫೋಟೊ ಮತ್ತು ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಪಂದ್ಯಕ್ಕೂ 2 ದಿನ ಮುನ್ನವೇ ಹವಾಮಾನ ಇಲಾಖೆ ಪಂದ್ಯಕ್ಕೆ ಶೇ.88ರಷ್ಟು ಮಳೆ ಎಚ್ಚರಿಕೆ ನೀಡಿತ್ತು. ಜತೆಗೆ ಪಂದ್ಯ ನಡೆಯುವುದು ಕೂಡ ಅನುಮಾನ ಎಂದು ತನ್ನ ವರದಿಯಲ್ಲಿ ತಿಳಿಸಿತ್ತು. ಇದೀಗ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಜೋರು ಮಳೆ ಸುರಿಯಲು ಆರಂಭವಾಗಿದೆ. ಸದ್ಯ ಬೀಸುತ್ತಿರುವ ಗಾಳಿ ಮಳೆಯನ್ನು ಗಮನಿಸುವಾಗ ಇದು ನಿಲ್ಲುವಂತೆ ಕಾಣುತ್ತಿಲ್ಲ.

ಇತ್ತಂಡಗಳ ಈ ಪಂದ್ಯಕ್ಕೆ ಭಾರೀ ಮಳೆ ಭೀತಿ ಇದ್ದರೂ ಕೂಡ ಮೀಸಲು ದಿನದ ಸೌಲಭ್ಯವೂ ಇಲ್ಲ. ಹೆಚ್ಚುವರಿ 250 ನಿಮಿಷವನ್ನು ನೀಡಲಾಗಿದ್ದರೂ, ಫಲಿತಾಂಶ ನಿರ್ಧರಿಸಲು ಉಭಯ ತಂಡಗಳು ಕನಿಷ್ಠ 10 ಓವರ್​ ಆಡುವುದು ಅಗತ್ಯವಾಗಿದೆ. ಒಂದೊಮ್ಮೆ ಪಂದ್ಯ ನಡೆಯದೇ ಇದ್ದರೆ ಸೂಪರ್​-8 ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಭಾರತ ನೇರವಾಗಿ ಫೈನಲ್​ ಪ್ರವೇಶಿಸಲಿದೆ.

​2022ರಲ್ಲಿ ಅಡಿಲೇಡ್​ನಲ್ಲಿ ನಡೆದ ಟಿ20 ವಿಶ್ವಕಪ್​ ಸೆಮೀಸ್​ನಲ್ಲಿ ಇಂಗ್ಲೆಂಡ್​ ತಂಡ ಭಾರತಕ್ಕೆ 10 ವಿಕೆಟ್​ಗಳ ಹೀನಾಯ ಸೋಲುಣಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ. ಇದರಲ್ಲಿ ರೋಹಿತ್​ ಬಳಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೊಂದು ಕುತೂಹಲ.

ಇದನ್ನೂ ಓದಿ IND vs ENG: ಸೆಮಿ ಪಂದ್ಯಕ್ಕೂ ಮುನ್ನ ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ನಾಯಕ

ಬಲಾಬಲ

ಭಾರತ ಮತ್ತು ಇಂಗ್ಲೆಂಡ್​ ಇದುವರೆಗೆ ಟಿ20 ಕ್ರಿಕೆಟ್​ನಲ್ಲಿ 23 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 12 ಪಂದ್ಯ ಗೆದ್ದಿದ್ದರೆ, ಇಂಗ್ಲೆಂಡ್​ 11 ಪಂದ್ಯಗಳನ್ನು ಗೆದ್ದಿದೆ. ಕಳೆದ 2 ವರ್ಷಗಳಿಂದ ಇಂಗ್ಲೆಂಡ್​ ವಿರುದ್ಧ ಭಾರತ ಗೆಲುವು ಕಂಡಿಲ್ಲ. 2022ರ ಟಿ20 ವಿಶ್ವಕಪ್(T20 World Cup 2024)​ ಸೆಮಿಫೈನಲ್​ ಪಂದ್ಯದ ಬಳಿಕ ಉಭಯ ತಂಡಗಳು ಇದುವರೆಗೂ ಟಿ20ಯಲ್ಲಿ ಮುಖಾಮುಖಿಯಾಗಿಲ್ಲ. ಆ ಪಂದ್ಯದಲ್ಲಿ ಭಾರತ 10 ವಿಕೆಟ್​ ಸೋಲು ಕಂಡಿತ್ತು. ಅಂದಿನ ಸೋಲಿಗೆ ಈ ಬಾರಿಯ ಸೆಮಿ ಕಾದಾಟದಲ್ಲಿ ಭಾರತ ಸೇಡು ತೀರಿಸಿಕೊಂಡೀತೇ ಎಂದು ಕಾದು ನೋಡಬೇಕಿದೆ.

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇತ್ತಂಡಗಳು 4 ಪಂದ್ಯಗಳನ್ನು ಆಡಿ ತಲಾ 2 ಪಂದ್ಯಗಳಲ್ಲಿ ಗೆಲುವು ಮತ್ತು ಸೋಲು ಕಂಡಿವೆ. ಭಾರತ ಕೊನೆಯ ಬಾರಿಗೆ ಇಂಗ್ಲೆಂಡ್​ ವಿರುದ್ಧ ಟಿ20 ಗೆಲುವು ಕಂಡಿದ್ದು 2012ರಲ್ಲಿ. ಆ ಪಂದ್ಯದಲ್ಲಿ ಧೋನಿ ಪಡೆ 90 ರನ್​ ಗೆಲುವು ಸಾಧಿಸಿತ್ತು.

ಸಂಭಾವ್ಯ ತಂಡಗಳು


ಭಾರತ:
 ರೋಹಿತ್​ ಶರ್ಮ(ನಾಯಕ), ವಿರಾಟ್ ಕೊಹ್ಲಿ, ರಿಷಭ್​ ಪಂತ್​(ವಿಕೀ), ಸೂರ್ಯಕುಮಾರ್ ಯಾದವ್, ಶಿವಂ ದುಬೆ/ ಸಂಜು ಸ್ಯಾಮ್ಸನ್​, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್​ಪ್ರೀತ್​ ಬುಮ್ರಾ.

ಇಂಗ್ಲೆಂಡ್​: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ.

Exit mobile version