Site icon Vistara News

IND vs ENG: ಯಶಸ್ವಿ ಜೈಸ್ವಾಲ್​ ಅಜೇಯ ಶತಕ; ಬೃಹತ್​ ಮೊತ್ತದತ್ತ ಭಾರತ

Yashasvi Jaiswal was fluent with his drives

ವಿಶಾಖಪಟ್ಟಣಂ: ಆರಂಭಿಕ ಯುವ ಆಟಗಾರ ಯಶಸ್ವಿ ಜೈಸ್ವಾಲ್​(179*) ಅವರ ಅಜೇಯ ಶತಕದಾಟದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್(IND vs ENG)​ ವಿರುದ್ಧದ ದ್ವಿತೀಯ ಟೆಸ್ಟ್​ನ(India vs England 2nd Test) ಮೊದಲ ದಿನವೇ ಬೃಹತ್​ ಮೊತ್ತ ದಾಖಲಿಸಿದೆ. 6 ವಿಕೆಟ್​ಗೆ 336 ರನ್​ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ.

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ಇಂದು(ಶುಕ್ರವಾರ) ಆರಂಭಗೊಂಡ ದ್ವಿತೀಯ ಟೆಸ್ಟ್​ನಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಆತಿಥೇಯ ಭಾರತಕ್ಕೆ, ಜೈಸ್ವಾಲ್(Yashasvi Jaiswal)​ ಉತ್ತಮ ಆಟವಾಡುವ ಮೂಲಕ ಸೊಗಸಾದ ಇನಿಂಗ್ಸ್​ವೊಂದನ್ನು ಕಟ್ಟಿದ್ದಾರೆ. ನಾಯಕ ರೋಹಿತ್​ ಶರ್ಮ(14) ವಿಕೆಟ್​ಬೇಗನೆ ಉದುರಿದರೂ ಧೃತಿಗೆಡದೆ ಬ್ಯಾಟಿಂಗ್​ ನಡೆಸಿದ ಜೈಸ್ವಾಲ್​ 179*​ ಬಾರಿಸಿ ತಂಡಕ್ಕೆ ನೆರವಾಗಿದ್ದಾರೆ.​

ಮೊದಲ ಟೆಸ್ಟ್ ಪಂದ್ಯದಲ್ಲಿ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಶುಭಮನ್​ ಗಿಲ್​ ಅವರು ಈ ಪಂದ್ಯದಲ್ಲಿ 34 ರನ್​ ಬಾರಿಸಿದರು. ಶ್ರೇಯಸ್​ ಅಯ್ಯರ್​ 27 ರನ್​ಗೆ ಆಟ ಮುಗಿಸಿ ಮತ್ತೆ ತಮ್ಮ ಆಯ್ಕೆಗೆ ನ್ಯಾಯ ಒದಗಿಸುವಲ್ಲಿ ವಿಫಲರಾದರು. ಪದಾರ್ಪಣ ಪಂದ್ಯವಾಡಿದ ರಜತ್​ ಪಾಟಿದಾರ್​ ಕೆಲ ಕಾಲ ಜೈಸ್ವಾಲ್​ಗೆ ಉತ್ತಮ ಸಾಥ್​ ನೀಡಿ 32 ರನ್​ಗೆ ವಿಕೆಟ್​ ಕೈಚೆಲ್ಲಿದರು. 6ನೇ ವಿಕೆಟ್​ಗೆ ಆಡಲಿಳಿದ ಅಕ್ಷರ್​ ಪಟೇಲ್ ಬಡಬಡನೆ 4 ಬೌಂಡರಿ ಬಾರಿಸಿ 27 ರನ್​ ಗಳಿಸಿದರು. ಈ ವಿಕೆಟ್​ ವೀಸಾ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್ ಆಡಲು ಸಾಧ್ಯವಾಗದ ಪಾಕ್​ ಮೂಲಕ ಬೌಲರ್​ ಶೋಯೆಬ್ ಬಶೀರ್ ಪಾಲಾಯಿತು. ಇದು ಶೋಯೆಬ್ ಬಶೀರ್ ಅವರ ಪದಾರ್ಪಣೆ ಪಂದ್ಯವಾಗಿದೆ.

ಸಿಕ್ಸರ್​ ಮೂಲಕ ಶತಕ ದಾಖಲಿಸಿದ ಜೈಸ್ವಾಲ್​


ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಯಶಸ್ವಿ ಜೈಸ್ವಾಲ್​ ಬಳಿಕ ಬಿರುಸಿನ ಬ್ಯಾಟಿಂಗ್​ಗೆ ಒತ್ತ ನೀಡಿದರು. ಕ್ರೀಸ್​ಗೆ ಅಂಟಿಕೊಂಡ ತಕ್ಷಣ ಆಂಗ್ಲರ ಬೌಲಿಂಗ್​ ದಾಳಿಯನ್ನು ಪುಡಿಗಟ್ಟಲು ಆರಂಭಿಸಿದ ಅವರು ಸಿಕ್ಸರ್​ ಮೂಲಕವೇ ತಮ್ಮ ಶತಕವನ್ನು ಪೂರ್ತಿಗೊಳಿಸಿದರು. ಈ ಶತಕ ಬಾರಿಸುವ ಮೂಲಕ 23 ವರ್ಷ ತುಂಬುವ ಮೊದಲು ತವರು ಮತ್ತು ವಿದೇಶದ ಟೆಸ್ಟ್​ನಲ್ಲಿ ಶತಕ ಬಾರಿಸಿದ 4ನೇ ಭಾರತೀಯ ಆಟಗಾರ ಎನಿಸಿಕೊಂಡರು. ರವಿ ಶಾಸ್ತ್ರಿ(Ravi Shastri), ಸಚಿನ್ ತೆಂಡೂಲ್ಕರ್(Shastri,Sachin Tendulkar), ವಿನೋದ್ ಕಾಂಬ್ಳಿ(Vinod Kambli) ಈ ಸಾಧನೆ ಮಾಡಿದ ಉಳಿದ ಮೂವರು ಆಟಗಾರರಾಗಿದ್ದಾರೆ. ಅಚ್ಚರಿ ಎಂದರೆ ಈ ಸಾಧನೆ ಮಾಡಿದ ನಾಲ್ಕು ಮಂದಿ ಆಟಗಾರರು ಕೂಡ ಮುಂಬೈ ಪರ ರಣಜಿ ಆಡಿದ ಆಟಗಾರರು ಎನ್ನುವುದು ಸಾರಸ್ಯಕರ ಸಂಗತಿಯಾಗಿದೆ.

2023ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿದ್ದ ಯಶಸ್ವಿ ಜೈಸ್ವಾಲ್​ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದರು. ಆ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಅವರು 171 ರನ್​ ಬಾರಿಸಿ ಅನೇಕ ದಾಖಲೆ ಬರೆದಿದ್ದರು. ಇದೀಗ ತವರಿನ ಪಂದ್ಯದಲ್ಲಿ ಶತಕ ಬಾರಿಸಿ ಗಮನಸೆಳೆದಿದ್ದಾರೆ. ಸದ್ಯ ಅವರು ಅಜೇಯ ಶತಕದಾಟ ಮುಂದುವರಿಸಿದ್ದಾರೆ. ದ್ವಿಶತಕ ಬಾರಿಸಲು ಇನ್ನು ಅವರಿಗೆ ಕೇವಲ 21 ರನ್​ ಅಗತ್ಯವಿದೆ. ಅವರ ಬ್ಯಾಟಿಂಗ್​ ಲಯ ನೋಡುವಾದ ಇದು ಅಸಾಧ್ಯ ಎನ್ನುವಂತೆ ಕಾಣುತ್ತಿಲ್ಲ. ದ್ವಿತೀಯ ದಿನಾಟದಲ್ಲಿ ಅವರು ಈ ಮೊತ್ತ ಬಾರಿಸಿ ಮಿಂಚುವ ವಿಶ್ವಾಸದಲ್ಲಿದ್ದಾರೆ. ಇನ್ನೇನು ಮೊದಲ ದಿನಾದಾಟ ಮುಕ್ತಾಯಗೊಳ್ಳುವ ಹಂತದಲ್ಲಿ ವಿಕೆಟ್​ ಕೀಪರ್​ ಕೆ.ಎಸ್​ ಭರತ್​ ವಿಕೆಟ್​ ಕೈಚೆಲ್ಲಿದರು. ಅವರ ಗಳಿಕೆ 17. ಅಶ್ವಿನ್​ 5* ರನ್​ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

Exit mobile version