ಹೈದರಾಬಾದ್: ಇಂಗ್ಲೆಂಡ್ ಸ್ನಿನ್ ದಾಳಿಗೆ ನಲುಗಿದ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ 28 ರನ್ಗಳ ಸೋಲು ಕಂಡಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ. ಇದು ಭಾರತ ತಂಡಕ್ಕೆ ಹೈದರಾಬಾದ್ನಲ್ಲಿ ಎದುರಾದ ಮೊದಲ ಟೆಸ್ಟ್ ಸೋಲು. ಟಾಮ್ ಹಾರ್ಟ್ಲಿ 7 ವಿಕೆಟ್ ಕಿತ್ತು ಟೀಮ್ ಇಂಡಿಯಾದ ಹಾರ್ಟ್ ಬ್ರೇಕ್ ಮಾಡಿದರು.
ಹೈದರಾಬಾದ್ನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿದ್ದಲ್ಲಿಂದ 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ 102.1 ಓವರ್ ಬ್ಯಾಟಿಂಗ್ ನಡೆಸಿ 420 ರನ್ಗೆ ಆಲೌಟ್ ಆಯಿತು. ಭಾರತಕ್ಕೆ 231 ರನ್ಗಳ ಗೆಲುವಿನ ಗುರಿ ನೀಡಿತು.
ಊಟದ ವಿರಾಮದ ಬಳಿಕ 231 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಈ ಮೊತ್ತವನ್ನು ಇಂದೇ ಹೊಡೆದು ಗೆಲುವು ಸಾಧಿಸಬಹುದೆಂದು ನಿರೀಕ್ಷೆ ಮಾಡಲಾಯಿತು. ಆದರೆ, ಆಂಗ್ಲರು ಸ್ಪಿನ್ ಅಸ್ತ್ರದ ಮೂಲಕ ಭಾರತದ ಬ್ಯಾಟರ್ಗಳನ್ನು ಕಟ್ಟಿ ಹಾಕಿ ಪಂದ್ಯವನ್ನು ಗೆದ್ದು ಬೀಗಿದರು. ಭಾರತ 202 ರನ್ಗೆ ಸರ್ವಪತನ ಕಂಡಿತು. ರಾಜೀವ್ಗಾಂಧಿ ಸ್ಟೇಡಿಯಂನಲ್ಲಿ ಇಲ್ಲಿಯ ವರೆಗೆ ಅಜೇಯ ಗೆಲುವಿನ ದಾಖಲೆ ಹೊಂದಿದ್ದ ಭಾರತ ಸೋಲು ಕಂಡು ಈ ದಾಖಲೆಯನ್ನು ಬ್ರೇಕ್ ಮಾಡಿತು.
A special spell from Tom Hartley leads England to an extraordinary win in the opening Test against India 👏#WTC25 | 📝 #INDvENG: https://t.co/E53vcqjfHE pic.twitter.com/qoJl3biFfu
— ICC (@ICC) January 28, 2024
ಟಾಮ್ ಹಾರ್ಟ್ಲಿ ಅವರು ನಾಯಕ ರೋಹಿತ್ ಶರ್ಮ(39), ಯಶಸ್ವಿ ಜೈಸ್ವಾಲ್(15), ಶುಭಮನ್ ಗಿಲ್(0) ವಿಕೆಟ್ ಕಿತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದರು. ಶುಭಮನ್ ಗಿಲ್ ಆಡಿದ ಎರಡೂ ಇನಿಂಗ್ಸ್ನಲ್ಲಿಯೂ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದರು.
ಇದನ್ನೂ ಓದಿ Ravindra Jadeja : ಜಡೇಜಾ ಔಟ್ ಅಥವಾ ನಾಟೌಟ್? ಮಾಜಿ ಕೋಚ್ ರವಿ ಶಾಸ್ತ್ರಿ ಏನು ಹೇಳುತ್ತಾರೆ?
ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಕೆ.ಎಲ್ ರಾಹುಲ್ ಅವರು ಸಣ್ಣ ಹೋರಾಟವೊಂದನ್ನು ನಡೆಸಿ 22 ರನ್ ಬಾರಿಸಿದರು. ಈ ವಿಕೆಟ್ ರೂಟ್ ಪಾಲಾಯಿತು. ಶ್ರೇಯಸ್ ಅಯ್ಯರ್ 13 ರನ್ಗೆ ಆಟ ಮುಗಿಸಿದರು. ಮೊದಲ ಇನಿಂಗ್ಸ್ನಲ್ಲಿ 87 ರನ್ ಬಾರಿಸಿದ ರವೀಂದ್ರ ಜಡೇಜಾ ಅವರು ಬೆನ್ ಸ್ಟೋಕ್ಸ್ ಅವರ ಸೂಪರ್ ಮ್ಯಾನ್ ಡೈವಿಂಗ್ ಫೀಲ್ಡಿಂಗ್ನಿಂದ ರನೌಟ್ ಆದರು. ಅವರ ಗಳಿಕೆ 2 ರನ್. ಇನ್ನೇನು ಸೋಲು ಕಂಡಿತು ಎನ್ನುವಷ್ಟರಲ್ಲಿ ಶ್ರೀಕರ್ ಭರತ್ ಮತ್ತು ಆರ್. ಅಶ್ವಿನ್ ಸೇರಿಕೊಂಡು 8ನೇ ವಿಕೆಟ್ಗೆ ಉತ್ತಮ ಜತೆಯಾಟ ನಿಭಾಯಿಸಿ ಭಾರತಕ್ಕೆ ಗೆಲುವಿನ ಸಣ್ಣ ಆಸೆಯೊಂದನ್ನು ಚಿಗುರೊಡೆಯುವಂತೆ ಮಾಡಿದರು. ಆದರೆ, 4ನೇ ದಿನದಾಟ ಮುಗಿಯಲು ಮೂರು ಓವರ್ ಇರುವಾಗ ಉಭಯ ಆಟಗಾರರ ವಿಕೆಟ್ ಕೂಡ ಪತನಗೊಂಡಿತು. ಉಭಯ ಆಟಗಾರರು ಕೂಡ ತಲಾ 28 ರನ್ ಗಳಿಸಿ ಟಾಮ್ ಹಾರ್ಟ್ಲಿಗೆ ವಿಕೆಟ್ ಒಪ್ಪಿಸಿದರು.
ಸ್ಪಿನ್ ಮೋಡಿ ಮಾಡಿದ ಟಾಮ್ ಹಾರ್ಟ್ಲಿ
ಉತ್ಕೃಷ್ಟ ಮಟ್ಟದ ಸ್ಪಿನ್ ದಾಳಿ ನಡೆಸಿದ ಟಾಮ್ ಹಾರ್ಟ್ಲಿ 26.2 ಓವರ್ ಎಸೆದು ಕೇವಲ 62 ರನ್ ಬಿಟ್ಟುಕೊಟ್ಟು ಭಾರತದ ಕುಸಿತಕ್ಕೆ ಕಾರಣರಾದರು. ಒಟ್ಟು 7 ವಿಕೆಟ್ ಕಿತ್ತು ಮಿಂಚಿದರು. ಇವರ ಸ್ನಿನ್ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾದ ಭಾರತೀಯ ಬ್ಯಾಟರ್ಗಳು ತರಗೆಲೆಯಂತೆ ಉದುರಿ ಹೋದರು.
ದ್ವಿಶತಕ ವಂಚಿತರಾದ ಪೋಪ್
148 ರನ್ಗಳಿಂದ ಬ್ಯಾಟಿಂಗ್ ಮುಂದುವರಿಸಿದ್ದ ಪೋಪ್ 48 ರನ್ ಒಟ್ಟುಗೂಡಿಸಿ 196 ರನ್ಗೆ ಔಟಾದರು. ಕೇವಲ 4 ರನ್ ಹಿನ್ನಡೆಯಿಂದ ದ್ವಿಶತಕ ಬಾರಿಸುವ ಅವಕಾಶವನ್ನು ಕಳೆದುಕೊಂಡರು. ಜಸ್ಪ್ರೀತ್ ಬುಮ್ರಾ ಅವರ ಎಸೆತವನ್ನು ರಿವರ್ಸ್ ಸ್ವೀಪ್ ಮಾಡುವ ಪ್ರಯತ್ನದಲ್ಲಿ ಎಡವಿ ಕ್ಲೀನ್ ಬೌಲ್ಡ್ ಆದರು.