ಪ್ರೊವಿಡೆನ್ಸ್: .ಮಳೆಯಿಂದ ವಿಳಂಬವಾದ ಟಿ20 ವಿಶ್ವಕಪ್ನ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜಾಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಭಾರತ ಬ್ಯಾಟಿಂಗ್ ಆಹ್ವಾನ ಪಡೆದಿದೆ. ಭಾರತ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಆಸೀಸ್ ವಿರುದ್ಧ ಕಣಕ್ಕಿಳಿಸಿದ ತಂಡವನ್ನೇ ಈ ಪಂದ್ಯದಲ್ಲಿಯೂ ಮುಂದುವರಿಸಿದೆ.
ಈ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಪಡಿಸಿದರೆ ಹೆಚ್ಚುವರಿ 250 ನಿಮಿಷವನ್ನು ನೀಡಲಾಗಿದೆ. ಆದರೆ ಮೀಸಲು ದಿನ ಇಲ್ಲ. ಹೆಚ್ಚುವರಿ ಸಮಯದಲ್ಲಿಯೂ ಪಂದ್ಯ ನಡೆಯದೇ ಹೋದರೆ, ಸೂಪರ್-8 ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಭಾರತ ನೇರವಾಗಿ ಫೈನಲ್ ಪ್ರವೇಶಿಸಲಿದೆ.
ಭಾರತ ಮತ್ತು ಇಂಗ್ಲೆಂಡ್ ಇದುವರೆಗೆ ಟಿ20 ಕ್ರಿಕೆಟ್ನಲ್ಲಿ 23 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 12 ಪಂದ್ಯ ಗೆದ್ದಿದ್ದರೆ, ಇಂಗ್ಲೆಂಡ್ 11 ಪಂದ್ಯಗಳನ್ನು ಗೆದ್ದಿದೆ. ಕಳೆದ 2 ವರ್ಷಗಳಿಂದ ಇಂಗ್ಲೆಂಡ್ ವಿರುದ್ಧ ಭಾರತ ಗೆಲುವು ಕಂಡಿಲ್ಲ. 2022ರ ಟಿ20 ವಿಶ್ವಕಪ್(T20 World Cup 2024) ಸೆಮಿಫೈನಲ್ ಪಂದ್ಯದ ಬಳಿಕ ಉಭಯ ತಂಡಗಳು ಇದುವರೆಗೂ ಟಿ20ಯಲ್ಲಿ ಮುಖಾಮುಖಿಯಾಗಿಲ್ಲ. ಆ ಪಂದ್ಯದಲ್ಲಿ ಭಾರತ 10 ವಿಕೆಟ್ ಸೋಲು ಕಂಡಿತ್ತು. ಅಂದಿನ ಸೋಲಿಗೆ ಈ ಬಾರಿಯ ಸೆಮಿ ಕಾದಾಟದಲ್ಲಿ ಭಾರತ ಸೇಡು ತೀರಿಸಿಕೊಂಡೀತೇ ಎಂದು ಕಾದು ನೋಡಬೇಕಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇತ್ತಂಡಗಳು 4 ಪಂದ್ಯಗಳನ್ನು ಆಡಿ ತಲಾ 2 ಪಂದ್ಯಗಳಲ್ಲಿ ಗೆಲುವು ಮತ್ತು ಸೋಲು ಕಂಡಿವೆ. ಭಾರತ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಟಿ20 ಗೆಲುವು ಕಂಡಿದ್ದು 2012ರಲ್ಲಿ. ಆ ಪಂದ್ಯದಲ್ಲಿ ಧೋನಿ ಪಡೆ 90 ರನ್ ಗೆಲುವು ಸಾಧಿಸಿತ್ತು.
ಇದನ್ನೂ ಓದಿ IND vs ENG: ಸೆಮಿ ಪಂದ್ಯಕ್ಕೂ ಮುನ್ನ ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ನಾಯಕ
ಪಿಚ್ ರಿಪೋರ್ಟ್
ಪ್ರಾವಿಡೆನ್ಸ್ ಸ್ಟೇಡಿಯಂನ ಪಿಚ್ ಬೌಲಿಂಗ್ಗೆ ಹೆಚ್ಚಿನ ನೆರವು ನೀಡುತ್ತದೆ. ಪಂದ್ಯ ಸಾಗಿದಂತೆ ಇಲ್ಲಿ ಹೆಚ್ಚಾಗಿ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸಲಿದ್ದಾರೆ. ದೊಡ್ಡ ಮೊತ್ತ ಬಾರಿಸುವುದು ಇಲ್ಲಿ ಅಷ್ಟು ಸುಲಭವಲ್ಲ. 2010ರಲ್ಲಿ 191 ರನ್ ದಾಖಲಾದದ್ದೆ ಇಲ್ಲಿನ ಗರಿಷ್ಠ ಸ್ಕೋರ್.
ಸೇಡಿನ ಪಂದ್ಯ
2022ರಲ್ಲಿ ಅಡಿಲೇಡ್ನಲ್ಲಿ ನಡೆದ ಟಿ20 ವಿಶ್ವಕಪ್ ಸೆಮೀಸ್ನಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ 10 ವಿಕೆಟ್ಗಳ ಹೀನಾಯ ಸೋಲುಣಿಸಿ ಫೈನಲ್ ಪ್ರವೇಶಿಸಿತ್ತು. ಇದೀಗ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ. ಇದರಲ್ಲಿ ರೋಹಿತ್ ಬಳಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೊಂದು ಕುತೂಹಲ.
ಭಾರತ: ರೋಹಿತ್ ಶರ್ಮ(ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೀ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.
ಇಂಗ್ಲೆಂಡ್: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ.