ತಿರುವನಂತಪುರ : ನೆದರ್ಲ್ಯಾಂಡ್ಸ್ ವಿರುದ್ಧದ ಭಾರತ ತಂಡದ ವಿಶ್ವ ಕಪ್ (ICC World Cup 2023) ಅಭ್ಯಾಸ ಪಂದ್ಯವೂ ರದ್ದಾಗಿದೆ. ಗುವಾಹಟಿಯಲ್ಲಿ ನಿಗದಿಯಾಗಿದ್ದ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯವೂ ಮಳೆಯ ಕಾರಣಕ್ಕೆ ರದ್ದಾಗಿತ್ತು. ಆ ಪಂದ್ಯ ಗುವಾಹಟಿಯಲ್ಲಿ ಆಯೋಜನೆಗೊಂಡಿತ್ತು. ಹೀಗಾಗಿ ಯಾವುದೇ ಅಭ್ಯಾಸ ಪಂದ್ಯಗಳು ಇಲ್ಲದೆ ಭಾರತ ತಂಡ ನೇರವಾಗಿ ವಿಶ್ವ ಕಪ್ ಆಡಲಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ತನ್ನ ವಿಶ್ವ ಕಪ್ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 8ರಂದು ಚೆನ್ನೈನ ಚೆಪಾಕ್ ಸ್ಟೇಡಿಯಮ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಆಯೋಜನೆಗೊಂಡಿದೆ.
ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿರುವ ವಿಶ್ವಕಪ್ 2023 ಕ್ಕೆ ಮುಂಚಿತವಾಗಿ ಭಾರತ ಮತ್ತು ನೆದರ್ಲ್ಯಾಂಡ್ಸ್ ಇಂದು ತಮ್ಮ ಅಂತಿಮ ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿಯಾಗಬೇಕಾಗಿತ್ತು.. ಇಂಗ್ಲೆಂಡ್ ವಿರುದ್ಧದ ಭಾರತದ ಹಿಂದಿನ ಅಭ್ಯಾಸ ಪಂದ್ಯಗಳು ಒಂದು ಎಸೆತವೂ ನಡೆಯದೇ ರದ್ದಾಗಿದ್ದವು. ಮತ್ತೊಂದೆಡೆ, ಆಸ್ಟ್ರೇಲಿಯಾ ವಿರುದ್ಧದ ನೆದರ್ಲ್ಯಾಂಡ್ಸ್ ಪಂದ್ಯವು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿತ್ತು. ಆ ಪಂದ್ಯದಲ್ಲಿ ನೆದರ್ಲ್ಯಾಂಡ್ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ತಂಡವನ್ನು 23 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ಗಳಿಗೆ ನಿಯಂತ್ರಿಸಿತ್ತು,
UPDATE: The warm-up match between India & Netherlands is abandoned due to persistent rain. #TeamIndia | #CWC23 https://t.co/rbLo0WHrVJ pic.twitter.com/0y4Ey1Dvye
— BCCI (@BCCI) October 3, 2023
ಇದೀಗ ನೆದಲ್ಯಾಂಡ್ಸ್ ತಂಡದ ಮತ್ತೊಂದು ಪಂದ್ಯವೂ ಫಲಿತಾಂಶವೇ ಇಲ್ಲದೆ ರದ್ದಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕನಿಷ್ಠ ಬೌಲಿಂಗ್ ಮಾಡುವ ಅವಕಾಶವಾದರೂ ಆ ತಂಡಕ್ಕೆ ಸಿಕ್ಕಿತ್ತು. ಆದರೆ, ಭಾರತ ವಿರುದ್ಧ ಒಂದೇ ಒಂದು ಎಸೆತ ಮಾಡಲು ಅವಕಾಶ ಸಿಗಲಿಲ್ಲ.
ಪ್ರಯಾಣದ ಸುಸ್ತು
ಸ್ಥಳೀಯ ಅನುಕೂಲಗಳನ್ನು ಬಳಸಿಕೊಂಡು ಭಾರತ ತಂಡ ವಿಶ್ವ ಕಪ್ ಗೆಲ್ಲುತ್ತದೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಅದಕ್ಕೆ ಪೂರವಕಾಗಿ ಭಾರತ ತಂಡವೂ ಅತ್ಯಂತ ಉಮೇದಿನಲ್ಲಿದೆ. ಹೀಗಾಗಿ ವಿಶ್ವ ಕಪ್ಗೆ ಮೊದಲು ಅಭ್ಯಾಸ ಪಂದ್ಯದಲ್ಲಿ ಆಡುವುದು ಈ ತಂಡಕ್ಕೆ ಅನಿವಾರ್ಯವಾಗಿತ್ತು. ಆದರೆ, ತಂಡಕ್ಕೆ ಎರಡೂ ಅಭ್ಯಾಸ ಪಂದ್ಯಗಳು ದೊರಕಿಲ್ಲ.
ಭಾರತ ತಂಡದ ಪಂದ್ಯಗಳು ಭಾರತದ 10 ಪ್ರದೇಶಗಳಲ್ಲಿ ನಡೆಯಲಿದೆ. ಹೀಗಾಗಿ ತಂಡವು ಒಂದೂವರೆ ತಿಂಗಳ ಅವಧಿಯಲ್ಲಿ ಸುಮಾರು ಸಾವಿರಾರು ಕಿಲೋ ಮೀಟರ್ ಪ್ರಯಾಣ ಮಾಡಬೇಕಾಗಿದೆ. ಹೀಗಾಗಿ ಅಭ್ಯಾಸ ಪಂದ್ಯದ ಪ್ರಯಾಣ ತಂಡಕ್ಕೆ ಹೊರೆಯೆನಿಸಬಹುದು. ಮೂರು ದಿನಗಳ ಹಿಂದೆ 15 ಆಟಗಾರರು ನೇರವಾಗಿ ಗುವಾಹಟಿಗೆ ಹೋಗಿತ್ತು. ಆದರೆ ಆ ಪ್ರಯಾಣದಿಂದ ತಂಡಕ್ಕೆ ಏನೂ ಲಾಭವಾಗಿರಲಿಲ್ಲ. ಮಳೆಯಿಂದಾಗಿ ಆಟ ರದ್ದಾಗಿತ್ತು. ಅಲ್ಲಿಂದ 2604 ಕಿಲೋ ಮೀಟರ್ ಪ್ರಯಾಣಿಸಿ ತಿರುವನಂತಪುರಕ್ಕೆ ಬಂದಿದ್ದ ಭಾರತ ತಂಡ ಇಲ್ಲಿಯೂ ನೆಟ್ ಪ್ರಾಕ್ಟೀಸ್ ಮಾಡಿದ್ದಷ್ಟೇ ಬಂತು. ಪಂದ್ಯ ನಡೆಯದ ಕಾರಣ ಹೆಚ್ಚಿನ ಪ್ರಯೋಜನ ದೊರಕಿಲ್ಲ.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್ (ವಿಕೆ), ಸೂರ್ಯಕುಮಾರ್ ಯಾದವ್.
ನೆದರ್ಲ್ಯಾಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ಸಿ & ವಿಕೆ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡ್, ವಿಕ್ರಮ್ಜಿತ್ ಸಿಂಗ್, ತೇಜಾ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಆಕರ್ಮ್ಯಾನ್, ರೋಲೊಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಿಯಾನ್ ಕ್ಲೈನ್, ವೆಸ್ಲಿ ಬಾರೆಸಿ, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಸಿಬ್ರಾಂಡ್ ಎಂಗೆಲ್ಬ್ರೆಕ್ಟ್.