ನೇಪಿಯರ್: ಮಳೆ ಪೀಡಿತ ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಟೈ ಗೊಂಡಿದೆ. ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತ ಈಗಾಗಲೇ 1-0 ಅಂತರದ ಮುನ್ನಡೆ ಸಾಧಿಸಿದ ಕಾರಣ ಹಾರ್ದಿಕ್ ಪಡೆ ಸರಣಿ ವಶಪಡಿಸಿಕೊಂಡಿದೆ. ಮೊದಲ ಪಂದ್ಯವೂ ಮಳೆಯಿಂದ ರದ್ದುಗೊಂಡಿತ್ತು.
ನೇಪಿಯರ್ನ ಮೆಕ್‌ಲೀನ್ ಪಾರ್ಕ್ ಸ್ಟೇಡಿಯಮ್‌ನಲ್ಲಿ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತಂಡ 19.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ 9 ಓವರ್ಗೆ 4 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿ ಸೋಲಿನತ್ತ ಮುಖ ಮಾಡಿತ್ತು. ಇದೇ ವೇಳೆ ಮಳೆ ಸುರಿದು ಪಂದ್ಯ ಅರ್ಧಕ್ಕೆ ನಿಂತಿತು. ಬಳಿಕ ಅಂಪೈರ್ಗಳು ಪಂದ್ಯವನ್ನು ಡಕ್ ವರ್ತ್ ಲೂಯಿಸ್ ನಿಯಮದನ್ವಯ ಪಂದ್ಯವನ್ನು ಟೈ ಎಂದು ಘೋಷಣೆ ಮಾಡಿದರು.
ಸೋಲಿನಿಂದ ಪಾರಾದ ಭಾರತ
ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯದ ಫಲಿತಾಂಶ ನಿರ್ಧರಿಸುವ ಮೊತ್ತ 75 ಆಗಿತ್ತು. ಮಳೆ ಬಂದು ಪಂದ್ಯ ನಿಂತಾಗ ಭಾರತದ ಮೊತ್ತವೂ 75 ರನ್ ಆಗಿತ್ತು. ಆದ್ದರಿಂದ ಪಂದ್ಯವನ್ನು ಅಂಪೈರ್ಗಳು ಟೈ ಮಾಡಲು ನಿರ್ಧರಿಸಿದರು. ಮಿಚೆಲ್ ಸ್ಯಾಂಟ್ನರ್ ಮಿಸ್ ಫೀಲ್ಡ್ ಮಾಡಿದ್ದು ಭಾರತದ ಪಾಲಿಗೆ ವರದಾನವಾಯಿತು. ಒಂದೊಮ್ಮೆ ಸ್ಯಾಂಟ್ನರ್ ಮಿಸ್ ಫೀಲ್ಡ್ ಮಾಡದೇ ಇದ್ದರೆ ಅಥವಾ ಪಾಂಡ್ಯ ಮತ್ತು ದೀಪಕ್ ಹೂಡಾ ಈ ರನ್ ಗಳಿಸದೇ ಇದ್ದರೆ ಭಾರತದ ರನ್ 74 ಆಗಿರುತ್ತಿತ್ತು. ನ್ಯೂಜಿಲ್ಯಾಂಡ್ ಪಂದ್ಯ ಜಯಿಸುತ್ತಿತ್ತು. ಆದರೆ ಅರಿಯದೇ ಆದ ತಪ್ಪಿಗೆ ಕಿವೀಸ್ ಅವಕಾಶ ಕಳೆದುಕೊಂಡಿತು. ಅತ್ತ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಭಾರತ ಸೋಲಿನಿಂದ ಪಾರಾಯಿತು.
ಭಾರತಕ್ಕೆ ಆರಂಭಿಕ ಆಘಾತ
ಸಾದಾರಣ ಮೊತ್ತ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ರಿಷಭ್ ಪಂತ್ (11), ಇಶಾನ್ ಕಿಶನ್ (10) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ (0) ಮತ್ತು ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ 13 ರನ್ಗೆ ಆಟ ಮುಗಿಸಿದರು. 21 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡವನ್ನು ನಾಯಕ ಪಾಂಡ್ಯ ಆಧರಿಸಿದರು. 18 ಎಸೆತಗಳಿಂದ ಪಾಂಡ್ಯ ಅಜೇಯ 30 ರನ್ ಗಳಿಸಿದರು. ಹೂಡಾ ಅಜೇಯ 9 ರನ್ ಕಾಣಿಕೆ ನೀಡಿದರು. ಈ ವೇಳೆ ಮಳೆ ಬಂದು ಪಂದ್ಯ ಅರ್ಧಕ್ಕೆ ನಿಂತಿತು. ಭಾರತ ಪರ ಬೌಲರ್ಗಳಾದ ಮೊಹಮ್ಮದ್ ಸಿರಾಜ್ ಮತ್ತು ಅರ್ಶ್ದೀಪ್ ಸಿಂಗ್ ತಲಾ ನಾಲ್ಕು ವಿಕೆಟ್ ಕಿತ್ತು ಮಿಂಚಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡವೂ ಆರಂಭಿಕ ಆಘಾತ ಕಂಡಿತು. ಬಳಿಕ ಡೆವೋನ್ ಕಾನ್ವೆ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಗ್ಲೇನ್ ಫಿಲಿಪ್ಸ್ ತಂಡಕ್ಕೆ ಆಸರೆಯಾದರು. ಆರಂಭದಲ್ಲಿ ರಕ್ಷಣಾತ್ಮ ಆಟಕ್ಕೆ ಮುಂದಾದ ಉಭಯ ಆಟಗಾರರು ಬಳಿಕ ಭಾರತದ ಬೌಲರ್ಗಳ ಮೇಲೆರಗಿ ರನ್ ಗಳಿಕೆಗೆ ವೇಗ ನೀಡುವ ಜತೆಗೆ ಅರ್ಧಶತಕವನ್ನು ಪೂರೈಸಿದರು. ಆದರೆ 54 ರನ್ ಗಳಿಸದ ವೇಳೆ ಸಿರಾಜ್ ಅವರ ಎಸೆತವನ್ನು ಸಿಕ್ಸರ್ಗೆ ಬಡಿದಟ್ಟುವ ಯತ್ನದಲ್ಲಿ ಭುವನೇಶ್ವರ್ ಕುಮಾರ್ಗೆ ಕ್ಯಾಚಿತ್ತು ವಿಕೆಟ್ ಒಪ್ಟಿಸಿದರು. ಈ ಜೋಡಿ 3ನೇ ವಿಕೆಟ್ಗೆ 86ರನ್ ಜತೆಯಾಟ ನಡೆಸಿತು. ಫಿಲಿಪ್ಸ್ ತನ್ನ ಅರ್ಧಶತಕದ ಆಟದಲ್ಲಿ 3 ಸಿಕ್ಸರ್ ಮತ್ತು 5 ಫೋರ್ ಬಾರಿಸಿದರು. ಡೆವೋನ್ ಕಾನ್ವೆ 49 ಎಸೆತಗಳಿಂದ 59 ರನ್ ಸಿಡಿಸಿದರು.
ಸ್ಕೋರ್
ನ್ಯೂಜಿಲ್ಯಾಂಡ್: 19.4 ಓವರ್ಗಳಲ್ಲಿ 160ಕ್ಕೆ ಆಲೌಟ್ (ಡೆವೋನ್ ಕಾನ್ವೆ 59, ಗ್ಲೆನ್ ಫಿಲಿಪ್ಸ್ 54, ಮೊಹಮ್ಮದ್ ಸಿರಾಜ್ 17ಕ್ಕೆ 4)
ಭಾರತ: 9 ಓವರ್ಳಲ್ಲಿ 4 ವಿಕೆಟ್ಗೆ 75(ಡಕ್ವರ್ತ್ ನಿಯಮದ ಪ್ರಕಾರ ಪಂದ್ಯ ಟೈ) ಹಾರ್ದಿಕ್ ಪಾಂಡ್ಯ ಅಜೇಯ 30, ದೀಪಕ್ ಹೂಡಾ ಅಜೇಯ 9, ಟಿಮ್ ಸೌಥಿ 27ಕ್ಕೆ 2.
ಪಂದ್ಯಶ್ರೇಷ್ಠ: ಮೊಹಮ್ಮದ್ ಸಿರಾಜ್. ಸರಣಿಶ್ರೇಷ್ಠ: ಸೂರ್ಯಕುಮಾರ್ ಯಾದವ್
ಇದನ್ನೂ ಓದಿ | IND VS NZ | ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆಯ್ಕೆ