ಅಹಮದಾಬಾದ್: ಆರಂಭದಲ್ಲಿ(IND VS NZ) ಶುಭಮನ್ ಗಿಲ್ ಅವರ ಅಜೇಯ ಶತಕ, ಬಳಿಕ ಬೌಲರ್ಗಳ ಸಂಘಟಿತ ಪ್ರದರ್ಶನದಿಂದ ಟೀಮ್ ಇಂಡಿಯಾ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭರ್ಜರಿ 168 ರನ್ಗಳ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಹಾರ್ದಿಕ್ ಪಾಂಡ್ಯ ಪಡೆ ಸರಣಿ ಗೆದ್ದಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಶುಭಮನ್ ಗಿಲ್(126*) ಅವರ ಅಜೇಯ ಶತಕದ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ಗೆ 234 ರನ್ ಗಳಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಆರಂಭದಲ್ಲೇ ಕುಸಿತ ಕಂಡು 12.1 ಓವರ್ಗಳಲ್ಲಿ 66 ರನ್ಗಳಿಗೆ ಸರ್ವಪತನ ಕಂಡಿತು.
ಭಾರತ ಪರ ಹಾರ್ದಿಕ್ ಪಾಂಡ್ಯ(4), ಶಿವಂ ಮಾವಿ(2), ಅರ್ಶ್ದಿಪ್ ಸಿಂಗ್(2), ಉಮ್ರಾನ್ ಮಲಿಕ್(2) ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರು. ಇದಕ್ಕೂ ಮುನ್ನ ಬ್ಯಾಟಿಂಗ್ನಲ್ಲಿ ಶುಭಮನ್ ಗಿಲ್, ರಾಹುಲ್ ತ್ರಿಪಾಠಿ(44) ಮತ್ತು ನಾಯಕ ಹಾರ್ದಿಕ್ ಪಾಂಡ್ಯ(30) ಉತ್ತಮ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರು.
ಮಂಕಾದ ಕಿವೀಸ್
ಭಾರತದ ಬೃಹತ್ ಮೊತ್ತವನ್ನು ಕಂಡು ಕಿವೀಸ್ ಆರಂಭದಲ್ಲೇ ಮಂಕಾಯಿತು. ಕೇವಲ 7 ರನ್ ಆಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ಇನ್ನೇನು 25 ರನ್ಗೆ ಗಂಟುಮೂಟೆ ಕಟ್ಟುವ ಸೋಚನೆ ನೀಡಿತ್ತು. ಆದರೆ ಡ್ಯಾರಿಲ್ ಮಿಚೆಲ್ ಏಕಾಂಗಿಯಾಗಿ ಹೋರಾಟ ನಡೆಸಿ ತಂಡದ ಮೊತ್ತವನ್ನು 50ರ ಗಡಿ ದಾಟಿಸುವಲ್ಲಿ ಯಶಸ್ಸು ಕಂಡರು. ಆದರೆ ಇವರಿಗೆ ಉಳಿದ ಆಟಗಾರರಿಂದ ಉತ್ತಮ ಸಾಥ್ ಸಿಗಲಿಲ್ಲ. ಅಂತಿಮವಾಗಿ ಮಿಚೆಲ್ 35 ರನ್ ಬಾರಿಸಿ ಔಟಾದರು.
ಹಾರ್ದಿಕ್ ಪಾಂಡ್ಯ 4 ಓವರ್ ನಡೆಸಿ ಕೇವಲ 16 ರನ್ ವೆಚ್ಚದಲ್ಲಿ ಪ್ರಮುಖ ನಾಲ್ಕು ವಿಕೆಟ್ ಉಡಾಯಿಸಿದರು. ಕಿವೀಸ್ ಪರ ಡ್ಯಾರಿಲ್ ಮಿಚೆಲ್ ಮತ್ತು ಸ್ಯಾಂಟ್ನರ್ ಮಾತ್ರ ಎರಡಂಕ್ಕಿ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಂಡರು. ಉಳಿದ ಎಲ್ಲ ಆಟಗಾರರು ಭಾರತೀಯ ಬೌಲರ್ಗಳ ಘಾತಕ ಬೌಲಿಂಗ್ ಸ್ಪೆಲ್‌ಗೆ ಹೆದರಿ ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸಿದರು.
ಗಿಲ್ ಬೊಂಬಾಟ್ ಶತಕ
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಪರ ಶುಭಮನ್ ಗಿಲ್ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿ ಮಿಂಚಿದ್ದ ಗಿಲ್ ತಮ್ಮ ಬ್ಯಾಟಿಂಗ್ ಪ್ರತಾಪವನ್ನು ಟಿ20 ಕ್ರಿಕೆಟ್ನಲ್ಲಿಯೂ ಮುಂದುವರಿಸಿದರು. ಕಿವೀಸ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಅವರು ಅಂತಿಮ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು. ಇದು ಅವರ ಚೊಚ್ಚಲ ಟಿ20 ಶತಕವಾಗಿದೆ. ಆರಂಭದಿಂದಲೇ ಕಿವೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಗಿಲ್ 63 ಎಸೆತದಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ ಬಾರಿಸಿಸುವ ಮೂಲಕ ಅಜೇಯ 126 ರನ್ ಪೇರಿಸಿದರು. ಉಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ 30 ರನ್ ಬಾರಿಸಿದರು.
ಮತ್ತೆ ವೈಫಲ್ಯ ಕಂಡ ಕಿಶನ್
ಬಾಂಗ್ಲಾದೇಶ ವಿರುದ್ಧ ದ್ವಿಶತಕ ಬಾರಿಸಿದ ಬಳಿಕ ಇಶಾನ್ ಕಿಶನ್ ಸಂಪೂರ್ಣ ಮಂಕಾಗಿದ್ದಾರೆ. ಆ ಬಳಿಕ ಆಡಿದ ಒಂದೂ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಕಿವೀಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಆಡಬಹುದು ಎಂದು ನಿರೀಕ್ಷೆ ಇರಿಸಲಾಗಿತ್ತು. ಆದರೆ ಕೇವಲ 1 ರನ್ಗೆ ಔಟಾಗುವ ಮೂಲಕ ನಿರೀಕ್ಷೆಯನ್ನು ಹುಸಿಯಾಗಿಸಿದ್ದಾರೆ.
ಗಿಲ್-ತ್ರಿಪಾಠಿ ಉತ್ತಮ ಜತೆಯಾಟ
ಆರಂಭಿಕ ವಿಕೆಟ್ ಪತನದ ಬಳಿಕ ಜತೆಯಾದ ರಾಹುಲ್ ತ್ರಿಪಾಠಿ ಮತ್ತು ಶುಭಮನ್ ಗಿಲ್ ಕಿವೀಸ್ ಬೌಲರ್ಗಳ ಮೇಲೆ ಸವಾರಿ ನಡೆಸಿ ಉತ್ತಮ ರನ್ ಕಲೆಹಾಕಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಉಭಯ ಆಟಗಾರರು ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆ ಸುರಿಸಿದರು. ಆದರೆ ಅರ್ಧಶತಕದ ಅಂಚಿನಲ್ಲಿ ಎಡವಿದ ತ್ರಿಪಾಠಿ ಅವರು ಸೋಧಿಗೆ ವಿಕೆಟ್ ಒಪ್ಪಿಸಿದರು. 22 ಎಸೆತ ಎದುರಿಸಿ 44 ರನ್ ಬಾರಿಸಿದರು. ಈ ಇನಿಂಗ್ಸ್ ವೇಳೆ 3 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಯಿತು. ಗಿಲ್ ಮತ್ತು ತ್ರಿಪಾಠಿ ದ್ವಿತೀಯ ವಿಕೆಟ್ಗೆ 80 ರನ್ ಜತೆಯಾಟ ನಡೆಸಿತು. ಸೂರ್ಯಕುಮಾರ್ ಯಾದವ್ 24 ರನ್ಗೆ ಆಟ ಮುಗಿಸಿದರು.
ಇದನ್ನೂ ಓದಿ IND VS AUS: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಶ್ರೇಯಸ್ ಅಯ್ಯರ್ ಅಲಭ್ಯ
ಭಾರತ: 20 ಓವರ್ಗಳಲ್ಲಿ 4 ವಿಕೆಟ್ಗೆ 234 (ಶುಭಮನ್ ಗಿಲ್ , ರಾಹುಲ್ ತ್ರಿಪಾಠಿ 44, ಸೂರ್ಯಕುಮಾರ್ ಯಾದವ್ 24, ಹಾರ್ದಿಕ್ ಪಾಂಡ್ಯ 30)
ನ್ಯೂಜಿಲ್ಯಾಂಡ್: 12.1 ಓವರ್ಗಳಲ್ಲಿ 66ಕ್ಕೆ ಆಲೌಟ್ (ಡ್ಯಾರಿಲ್ ಮಿಚೆಲ್ 35, ಹಾರ್ದಿಕ್ ಪಾಂಡ್ಯ 16ಕ್ಕೆ 4, ಅರ್ಶ್ದೀಪ್ 16ಕ್ಕೆ 2, ಉಮ್ರಾನ್ ಮಲಿಕ್ 9ಕ್ಕೆ 2, ಶಿವಂ ಮಾವಿ 12ಕ್ಕೆ 2)