ಮುಂಬಯಿ: ಇಂದು ನಡೆಯುವ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಕಣಕ್ಕಿಳಿಯಲಿವೆ. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಯಾವುದೇ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಈಗಾಗಲೇ ತಿಳಿಸಿದೆ. ಇದರಿಂದ ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು.
ಮತ್ತೆ ಎದುರಾಳಿ
4 ವರ್ಷಗಳ ಬಳಿಕ ಮತ್ತೆ ಭಾರತ ಮತ್ತು ನ್ಯೂಜಿಲ್ಯಾಂಡ್ ಸೆಮಿಫೈನಲ್ ಮುಖಾಮುಖಿಯಾಗುತ್ತಿವೆ. ಪಂದ್ಯ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಎಲ್ಲರ ಬಾಯಲ್ಲೂ ಕೂಡ ಇದೇ ಮಾತು, ಪ್ರತಿ ಬಾರಿಯೂ ಭಾರತದ ಗೆಲುವಿಗೆ ಅಡ್ಡಗಾಲಿಡುವ ಕಿವೀಸ್ ಅಪಾಯಕಾರಿ ಎನ್ನುವುದು. ಕಳೆದ 20 ವರ್ಷಗಳಿಂದ ಕಿವೀಸ್ ವಿರುದ್ಧ ಐಸಿಸಿ ಟೂರ್ನಿಯಲ್ಲಿ ಗೆಲುವು ಸಾಧಿಸದಿದ್ದ ಭಾರತ ಲೀಗ್ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇದೇ ವಿಶ್ವಾಸದಲ್ಲಿ ಸೆಮಿಯಲ್ಲಿಯೂ ಬಗ್ಗುಬಡಿಯಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.
ಮಳೆ ಬಂದರೆ ಏನು ಗತಿ?
ವಿಶ್ವಕಪ್ ಲೀಗ್ ಹಂತದ ಯಾವುದೇ ಪಂದ್ಯಕ್ಕೂ ಮೀಸಲು ದಿನ ಇರಲಿಲ್ಲ. ಲೀಗ್ ಹಂತದ ಪಂದ್ಯಗಳು ಮಳೆಯಿಂದ ರದ್ದುಗೊಂಡರೆ ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಕೆಲವು ಪಂದ್ಯಗಳಿಗೆ ಮಳೆ ಅಡ್ಡಿ ಪಡಿಸಿದ್ದರೂ, ಯಾವುದೇ ಪಂದ್ಯ ಕೂಡ ರದ್ದುಗೊಂಡಿರಲಿಲ್ಲ. ಇದೀಗ ಸೆಮಿಫೈನಲ್ಗೆ ಮಳೆ ಬಂದು ನಿಗದಿತ ದಿನದಂದು ಪಂದ್ಯ ನಡೆಯದಿದ್ದರೆ ಏನು ಗತಿ, ಫಲಿತಾಂಶ ನಿರ್ಧಾರ ಹೇಗೆ ಹೀಗೆ ಹಲವು ಪಶ್ನೆಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಆದರೆ ಚಿಂತಿಸುವ ಅಗತ್ಯವಿಲ್ಲ. ಐಸಿಸಿ ಮಂಗಳವಾರ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು, ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರುತ್ತದೆ ಎಂದಿದೆ.
ಇದನ್ನೂ ಓದಿ IND vs NZ: ಸೆಮಿ ಪಂದ್ಯದ ನಕಲಿ ಟಿಕೆಟ್ ಮಾರಾಟ; ಮೋಸ ಹೋದೀರಿ ಹುಷಾರ್!
ಮೀಸಲು ದಿನವೂ ಮಳೆ ಬಂದರೆ ಫಲಿತಾಂಶ ಹೇಗೆ?
ಒಂದೊಮ್ಮೆ ಸೆಮಿಫೈನಲ್ ಪಂದ್ಯಗಳು ಮಳೆಯಿಂದ ಅಡಚಣೆಯಾಗಿ ಮೀಸಲು ದಿನವೂ ನಡೆಯದಿದ್ದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎಂಬ ಪಶ್ನೆ ಎಲ್ಲ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಇದಕ್ಕೆ ಉತ್ತರ ಇಲ್ಲಿದೆ. ಮೀಸಲು ದಿನವೂ ಪಂದ್ಯ ಸಂಪೂರ್ಣವಾಗಿ ನಡೆಯದಿದ್ದರೆ ಆಗ ಲೀಗ್ ಹಂತದಲ್ಲಿ ಹೆಚ್ಚು ಅಂಕ ಮತ್ತು ರನ್ ರೇಟ್ ಹೊಂದಿರುವ ತಂಡ ಫೈನಲ್ ಪ್ರವೇಶಿಸಲಿದೆ. ಉದಾಹರಣೆ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡದ ಸೆಮಿ ಫೈನಲ್ ರದ್ದುಗೊಂಡರೆ ಇದರ ಲಾಭ ಭಾರತಕ್ಕೆ ಲಭಿಸಲಿದೆ. ಏಕೆಂದರೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ. ಹೀಗಾಗಿ ಭಾರತ ಫೈನಲ್ ಪ್ರವೇಶ ಪಡೆಯುತ್ತದೆ.
ಬೌಂಡರಿ ಕೌಂಟ್ ಇಲ್ಲ
ಕಳೆದ ಬಾರಿಯ ವಿಶ್ವಕಪ್ ಫೈನಲ್ನಲ್ಲಿ ಸೂಪರ್ ಓವರ್ ಟೈಗೊಂಡಾಗ ಫಲಿತಾಂಶಕ್ಕೆ ಬೌಂಡರಿ ಲೆಕ್ಕಾಚಾರವನ್ನು ಮಾಡಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಈ ಬಾರಿ ಬೌಂಡರಿ ನಿಯಮವನ್ನು ತೆಗೆದು ಹಾಕಲಾಗಿದೆ. ಈ ಬಾರಿ ಸೆಮಿ ಆಗಲಿ ಫೈನಲ್ ಆಗಲಿ ಟೈ ಗೊಂಡರೆ ಫಲಿತಾಂಶ ಬರುವ ತನಕ ಸೂಪರ್ ಓವರ್ ಆಡಿಸಲಾಗುತ್ತದೆ.