Site icon Vistara News

IND vs NZ: ಮುಂದಿದೆ ಟೇಬಲ್​ ಟಾಪ್​ ಕಂಟಕ; ಪಾರಾದೀತೇ ಭಾರತ?

rohit sharma and kane williamson

ಮುಂಬಯಿ: 12 ವರ್ಷಗಳ ಬಳಿಕ ವಿಶ್ವಕಪ್(ICC World Cup 2023)​ ಗೆಲ್ಲುವ ಇರಾದೆಯೊಂದಿಗೆ ಭಾರತ ತಂಡ ಬುಧವಾರ ನಡೆಯುವ ಸೆಮಿಫೈನಲ್(IND vs NZ)​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಆದರೆ ಕ್ರಿಕೆಟ್​ ಅಭಿಮಾನಿಗಳಿಗೆ ಆತಂಕವೊಂದು ಎದುರಾಗಿದೆ. ಇದಕ್ಕೆ ಎರಡು ಕಾರಣ. ಭಾರತ ಟೇಬಲ್​ ಟಾಪರ್ ಆಗಿರುವುದು ಮತ್ತು ಎದುರಾಳಿ ನ್ಯೂಜಿಲ್ಯಾಂಡ್​ ಸಿಕ್ಕಿರುವುದು. ಈ ಕಂಟಕದಿಂದ ಭಾರತ ಪಾರಾದೀತೇ ಎನ್ನುವುದು ಬುಧವಾರದ ಕುತೂಹಲ.

ಟೇಬಲ್​ ಟಾಪ್​ ಕಂಟಕವೇ?

ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ ತಂಡಕ್ಕೆ ಟೇಬಲ್​ ಟಾಪ್​ ಸ್ಥಾನ ಕಂಟಕವಾಗಿಯೇ ಪರಿಣಮಿಸಿದೆ. ಹೌದು, ಈ ಹಿಂದಿನ ಎರಡು ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿತ್ತು. ಆದರೆ ಈ ಎರಡೂ ಸೆಮಿಫೈನಲ್​ನಲ್ಲಿ ಸೋಲು ಕಂಡಿತ್ತು. 2015ರಲ್ಲಿ ಭಾರತ ‘ಬಿ’ ಗ್ರೂಪ್​ನಲ್ಲಿ ಆಡಿದ ಎಲ್ಲ 6 ಪಂದ್ಯಗಳನ್ನು ಗೆದ್ದು 12 ಅಂಕದೊಂದಿಗೆ ಸೆಮಿಫೈನಲ್​ ಪ್ರವೇಶಿಸಿತ್ತು. 2019ರಲ್ಲಿ ಲಂಡನ್​ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ 9 ಪಂದ್ಯಗಳನ್ನು ಆಡಿ 7ರಲ್ಲಿ ಗೆದ್ದು 15 ಅಂಕದೊಂದಿಗೆ ಅಗ್ರಸ್ಥಾನ ಪಡೆದಿದ್ದತ್ತು. ಆದರೆ ಈ ಎರಡೂ ಟೂರ್ನಿಯಲ್ಲಿ ಸೆಮಿ ಪಂದ್ಯಗಳಲ್ಲಿ ಭಾರತ ಮುಗ್ಗರಿಸಿತ್ತು.

ಇದನ್ನೂ ಓದಿ Ind vs Nz : ಹಳೆ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ಭಾರತ?

2015ರಲ್ಲಿ ಆಸೀಸ್​ ವಿರುದ್ಧ ಸೋಲು

2015ರ ವಿಶ್ವಕಪ್​ನಲ್ಲಿ ಟೇಬಲ್​ ಟಾಪರ್​ ಭಾರತ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್​ ಪಂದ್ಯವನ್ನಾಡಿತ್ತು. 2011ರಲ್ಲಿ ಭಾರತಕ್ಕೆ ವಿಶ್ವಕಪ್​ ತಂದುಕೊಟ್ಟ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು 2ನೇ ಬಾರಿಯೂ ವಿಶ್ವಕಪ್​ ತಂದುಕೊಡಲಿದ್ದಾರೆ ಎಂದು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಸಿಡ್ನಿಯಲ್ಲಿ ನಡೆದ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡ ಧೋನಿ ಪಡೆಗೆ ಆಘಾತವಿಕ್ಕಿತು. 95 ರನ್ನುಗಳ ಸೋಲು ಕಂಡು ಟೂರ್ನಿಯನ್ನು ಅಂತ್ಯಗೊಲೀಸಿತು. ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ 7 ವಿಕೆಟ್​ಗೆ 328 ರನ್‌ ಪೇರಿಸಿತು. ಬೃಹತ್​ ಮೊತ್ತವನ್ನು ಕಂಡು ಆರಂಭದಲ್ಲೇ ಕಂಗಾಲಾದ ಭಾರತ 46.5 ಓವರ್‌ಗಳಲ್ಲಿ 233ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿಗೆ ತುತ್ತಾಯಿತು. ಆಸೀಸ್​ ಪರ ಸ್ಟೀವನ್​ ಸ್ಮಿತ್​ (105), ಆರಾನ್​ ಫಿಂಚ್‌ (81) ಬಾರಿಸಿ ಮಿಂಚಿದರು. ಭಾರತದ ಪರ ಧೋನಿ 65 ರನ್‌ ಮಾಡಿದರು. ಉಳಿದ ಎಲ್ಲ ಆಟಗಾರರು ವೈಫಲ್ಯ ಕಂಡರು.

2019 world cup semi final


2019ರಲ್ಲಿ ಕಿವೀಸ್​ ವಿರುದ್ಧ ಸೋಲು

ಲಂಡನ್​ನಲ್ಲಿ ನಡೆದ ಈ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ವಿರಾಟ್​ ಕೊಹ್ಲಿ ಸಾರಥ್ಯದಲ್ಲಿ ಕಣಕ್ಕಿಳಿದಿತ್ತು. ಲೀಗ್​ ಹಂತದಲ್ಲಿ ಅಮೋಘ ಸಾಧನೆ ತೋರಿದ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ರೋಹಿತ್​ ಶರ್ಮ ಅವರು ವಿಶ್ವಕಪ್​ ಇತಿಹಾಸದ ಆವೃತ್ತಿಯಯೊಂದರಲ್ಲೇ ಸರ್ವಾಧಿಕ 5 ಶತಕ ಬಾರಿಸಿದ್ದರು. ತಂಡ ಎಲ್ಲ ವಿಭಾಗದಲ್ಲೂ ಬಲಿಷ್ಠ ವಾಗಿತ್ತು. ಅಲ್ಲದೆ ಕಪ್​ ಗೆಲ್ಲುವ ಫೇವರಿಟ್​ ಕೂಡ ಆಗಿತ್ತು. ಆದರೆ ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ಅಡ್ಡಗಾಲಿಕ್ಕಿತು.

ಮ್ಯಾಂಚೆಸ್ಟರ್​ನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ನ್ಯೂಜಿಲ್ಯಾಂಡ್​ 8ಕ್ಕೆ 239 ರನ್‌ ಗಳಿಸಿತು. ಭಾರತದ ಬ್ಯಾಟಿಂಗ್​ ವೇಳೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಮೀಸಲು ದಿನಕ್ಕೆ ಮುಂದುವರಿಯಿತು. ಇಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿದ ಕೊಹ್ಲಿ ಪಡೆ 18 ರನ್​ಗಳ ಸೋಲಿಗೆ ತುತ್ತಾಯಿತು. ಧೋನಿ ಅವರು ರನೌಟ್​ ಆಗುವ ಮೂಲಕ ಭಾರತದ ವಿಶ್ವಕಪ್​ ಕನಸು ಕಮರಿಹೋಗಿತ್ತು. ಭಾರತ 49.3 ಓವರ್‌ಗಳಲ್ಲಿ 221ಕ್ಕೆ ಆಲೌಟ್‌ ಆಗಿ ಕೂಟದಿಂದ ನಿರ್ಗಮಿಸಿತು.

2019 world cup semi final


ಈ ಬಾರಿಯೂ ಟೇಬಲ್​ ಟಾಪರ್​…

ಈ ಹಿಂದಿನ ಎರಡು ಟೂರ್ನಿಗಳಲ್ಲಿ ಟೇಬಲ್​ ಟಾಪರ್​ ಆಗಿದ್ದ ಭಾರತ ಈ ಬಾರಿಯೂ ಅಗ್ರಸ್ಥಾನದಲ್ಲೇ ಕಾಣಿಸಿಕೊಂಡಿದೆ. ಹೀಗಾಗಿ ಸಂಖ್ಯಾ ಶಾಸ್ತ್ರದ ಭವಿಷ್ಯದಲ್ಲಿ ಭಾರತಕ್ಕೆ ಕಂಟಕ ತಪ್ಪಿದ್ದಲ್ಲ. ಅಲ್ಲದೆ ಎದುರಾಳಿ ನ್ಯೂಜಿಲ್ಯಾಂಡ್​ ಕಾಣಿಸಿಕೊಂಡಿರುವುದು ಇನ್ನಷ್ಟು ಚಿಂತೆಗೆ ಕಾರಣವಾಗಿದೆ. ಭಾರತ ಕಳೆದ ವಿಶ್ವಕಪ್ ಸೆಮಿಫನಲ್​ ಮತ್ತು ಚೊಚ್ಚಲ ವಿಶ್ವಕಪ್​ ಟೆಸ್ಟ್​ನಲ್ಲಿ ಕಿವೀಸ್​ ವಿರುದ್ಧವೇ ಸೋಲು ಕಂಡಿತ್ತು. ಹೀಗಾಗಿ ಭಾರತ 2 ಕಂಟಕವನ್ನು ಗೆಲ್ಲಬೇಕಿದೆ.

Exit mobile version