ಧರ್ಮಶಾಲ: ಭಾರತ ಮತ್ತು ನ್ಯೂಜಿಲ್ಯಾಂಡ್(IND vs NZ) ತಂಡಗಳು ಭಾನುವಾರ ನಡೆಯುವ ವಿಶ್ವಕಪ್ ಟೂರ್ನಿಯ(icc world cup 2023) 21 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳು ಪ್ರಸಕ್ತ ಟೂರ್ನಿಯಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ. ಆದರೆ ನಾಳೆ ಒಂದು ತಂಡಕ್ಕೆ ಸೋಲು ಖಚಿತ ಈ ತಂಡ ಯಾವುದು ಎನ್ನುವುದು ಪಂದ್ಯದ ಕತೂಹಲ. ಉಭಯ ತಂಡಗಳ ಐಸಿಸಿ ಮಹತ್ವದ ಟೂರ್ನಿಯ ಮುಖಾಮುಖಿಯ ಮಾಹಿತಿ ಇಲ್ಲಿದೆ.
20 ವರ್ಷಗಳಿಂದ ಒಂದೂ ಪಂದ್ಯ ಗೆದ್ದಿಲ್ಲ
ಭಾರತ ತಂಡ ಐಸಿಸಿಯ ಎಲ್ಲ ಮಾದರಿಯ ಮಹತ್ವದ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಒಂದೂ ಪಂದ್ಯ ಗೆಲ್ಲದೆ 20 ವರ್ಷಗಳೇ ಕಳೆದಿದೆ. ಭಾರತ 2003ರ ವಿಶ್ವಕಪ್ನಲ್ಲಿ ಕಿವೀಸ್ ವಿರುದ್ಧ ಕೊನೆಯ ಬಾರಿ ಗೆದ್ದಿತ್ತು. ಇದಾದ ಬಳಿಕ ಇದುವರೆಗೂ ಐಸಿಸಿ ಟೂರ್ನಿಯಲ್ಲಿ ಭಾರತ ಗೆಲುವು ಕಂಡಿಲ್ಲ. ಅಮದು ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 7 ವಿಕೆಟ್ಗಳ ಗೆಲುವು ಸಾಧಿಸಿತ್ತು.
ವಿಶ್ವಕಪ್ ಮುಖಾಮುಖಿ
ಇತ್ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 9 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗೆದ್ದಿದ್ದು ಕೇವಲ ಮೂರು ಪಂದ್ಯಗಳು ಉಳಿದ 5 ಪಂದ್ಯಗಳಲ್ಲಿ ಕಿವೀಸ್ ಗೆದ್ದು ಬೀಗಿದೆ. 2019 ವಿಶ್ವಕಪ್ನಲ್ಲಿ ಲೀಗ್ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಆದರೆ ಸೆಮಿಫೈನಲ್ನಲ್ಲಿ ಭಾರತ ಸೋಲು ಕಂಡಿತ್ತು. ಇದಾದ ಬಳಿಕ ಟೆಸ್ಟ್ ವಿಶ್ವಕಪ್ ಫೈನಲ್ನಲ್ಲಿಯೂ ಭಾರತ ಕಿವೀಸ್ ವಿರುದ್ಧ ಮಂಡಿಯೂರಿತ್ತು. 2016ರ ಟಿ20 ವಿಶ್ವಕಪ್ನಲ್ಲಿಯೂ ಭಾರತ ಸೋಲು ಕಂಡಿತ್ತು. ಒಟ್ಟಾರೆ ಭಾರತ 2007ರ ಬಳಿಕ ಆಡಿದ ಎಲ್ಲ ಐಸಿಸಿ ಮಹತ್ವದ ಟೂರ್ನಿಯಲ್ಲೂ ಸೋಲು ಕಂಡಿದೆ. ಈ ಬಾರಿ ಸೋಲಿನ ಸರಪಳಿಯನ್ನು ಕಳಚಿಕೊಂಡೀತೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ Hardik Pandya: ಹಾರ್ದಿಕ್ ಪಾಂಡ್ಯ ಗಾಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಬಿಸಿಸಿಐ
ಧೋನಿ ರನೌಟ್
2019ರ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಭಾರತೀಯರು ಎಂದೂ ಮರೆಯಲು ಸಾಧ್ಯವಿಲ್ಲ. ಮ್ಯಾಂಚೆಸ್ಟರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 239 ರನ್ ಬಾರಿಸಿತು. ಚೇಸಿಂಗ್ ನಡೆಸಿದ ಭಾರತ 5 ರನ್ನಿಗೆ 3 ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತ್ತು. ಈ ವೇಳೆ ಕ್ರೀಸ್ ಆಕ್ರಮಿಸಿಕೊಂಡ ಧೋನಿ ಮತ್ತು ಜಡೇಜಾ ಸೇರಿಕೊಂಡು ಇನ್ನಿಂಗ್ಸ್ ಕಟ್ಟತೊಡಗಿದರು. ಶತಕದ ಜತೆಯಾಟ ದಾಖಲಾಯಿತು. ಭಾರತ ಗೆಲುವಿನತ್ತ ಮುಖ ಮಾಡಿತ್ತು.
ಜಡೇಜಾ ನಿರ್ಗಮನದ ಬಳಿಕವೂ ಧೋನಿ ಹೋರಾಟವನ್ನು ಜಾರಿಯಲ್ಲಿರಿಸಿದ್ದರು. ಧೋನಿ ಕ್ರೀಸ್‌ನಲ್ಲಿರುವವರೆಗೆ ಭಾರತಕ್ಕೆ ಗೆಲುವು ಖಚಿತ ಎಂದು ಎಲ್ಲರು ನಂಬಿದ್ದರು. ಆದರೆ 49ನೇ ಓವರ್‌ನಲ್ಲಿ ಧೋನಿ ಅರ್ಧ ಶತಕ ಪೂರೈಸಿದ ಬೆನ್ನಲ್ಲೇ ಮಾರ್ಟಿನ್ ಗಪ್ಟಿಲ್ ಅವರ ಡೈರೆಕ್ಟ್ ಥ್ರೋ ಧೋನಿಯನ್ನು ರನೌಟ್ ಮಾಡಿತು. ಅಲ್ಲಿಗೆ ಭಾರತದ ಫೈನಲ್ ಕನಸು ಕಮರಿ ಹೋಯಿತು. ಧೋನಿ ಕಣ್ಣೀರು ಸುರಿಸುತ್ತಾ ಪೆವಿಲಿಯನ್ ಕಡೆಗೆ ನಡೆದರು.
ಏಕದಿನ ಮುಖಾಮುಖಿ
ಏಕದಿನ ಮಾದರಿಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಒಟ್ಟು 116 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 58 ಪಂದ್ಯಗಳಲ್ಲಿ ಗೆದ್ದಿದೆ. ನ್ಯೂಜಿಲ್ಯಾಂಡ್ 50 ಪಂದ್ಯಗಳಲ್ಲಿ ಗೆಲುವು ಕಂಡಿದೆ. 7 ಪಂದ್ಯಗಳು ಫಲಿತಾಂಶ ಕಂಡಿಲ್ಲ. ಒಂದು ಪಂದ್ಯ ಟೈಗೊಂಡಿದೆ.