ಧರ್ಮಶಾಲ: ವಿಶ್ವಕಪ್ ಪಂದ್ಯಾವಳಿಯ ದೊಡ್ಡ ಕದನವೊಂದು ಭಾನುವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ. ಇದಕ್ಕೆ ಸಾಕ್ಷಿಯಾಗಲಿರುವ ತಂಡಗಳೆಂದರೆ ಭಾರತ ಮತ್ತು ಸೈಲೆಂಟ್ ಕಿಲ್ಲರ್ ನ್ಯೂಜಿಲ್ಯಾಂಡ್. ಎರಡೂ ತಂಡಗಳು ಕೂಟದಲ್ಲಿ ಈವರೆಗೆ ಅಜೇಯವಾಗಿ ಉಳಿದಿರುವುದರಿಂದ ಹಾಗೂ ಎರಡೂ ಬಲಿಷ್ಠ ಪಡೆಗಳಾಗಿರುವುದರಿಂದ ಸಹಜವಾಗಿಯೇ ಈ ಪಂದ್ಯದ ತೂಕ ಹೆಚ್ಚಾಗಿದೆ. ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಸಂಭಾವ್ಯ ತಂಡಗಳ ಸಂಪೂರ್ಣ ಮಾಹಿತಿ ಇಂತಿದೆ.
ಪಿಚ್ ರಿಪೋರ್ಟ್
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ (ಎಚ್‌ಪಿಸಿಎ) ಪ್ರಕೃತಿಯ ಅತ್ಯಂತ ರಮಣೀಯ ಸ್ಟೇಡಿಯಂ ಆಗಿದ್ದು, ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್ ಓವಲ್, ನ್ಯೂಜಿಲ್ಯಾಂಡ್ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ. 23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿದೆ. ಹೀಗಾಗಿ ಇಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಇದು ಪೇಸ್ ಬೌಲಿಂಗ್ ಸ್ವರ್ಗವೆನಿಸಿದೆ. ಆದರೆ ವಿಶ್ವಕಪ್ ಟೂರ್ನಿಯ ಸಲುವಾಗಿ ಇಲ್ಲಿನ ಪಿಚ್ ನವೀಕೃತಗೊಳಿಸಲಾಗಿದೆ ಹೀಗಾಗಿ ಈಗ ಬ್ಯಾಟಿಂಗ್ಗೂ ಈ ಪಿಚ್ ನೆರವು ನೀಡುತ್ತದೆ. ಆದರೆ ಆರಂಭದಲ್ಲಿ ಮಾತ್ರ ಬೌಲರ್ಗಳೇ ಮೇಲುಲೈ ಸಾಧಿಸುತ್ತಾರೆ. ಚಳಿಯ ವಾತಾವರಣದಲ್ಲಿ ಆಡಿದ ಅನುಭವ ಹೆಚ್ಚು ಇರುವ ಕಾರಣ ಕಿವೀಸ್ಗೆ ಇಲ್ಲಿನ ವಾತಾವರಣದ ಲಾಭವೂ ಪಡೆಯಬಹುದು.
ಇದನ್ನೂ ಓದಿ ಇಂಡೋ-ಕಿವೀಸ್ ಪಂದ್ಯಕ್ಕೆ ಮತ್ತೆ ಮಳೆ ಕಂಟಕ; ಧರ್ಮಶಾಲ ಪಂದ್ಯ ಅನುಮಾನ
ಈ ಸ್ಟೇಡಿಯಂನಲ್ಲಿ ಒಟ್ಟು 7 ಏಕದಿನ ಪಂದ್ಯಗಳು ಆಡಲಾಗಿದ್ದು 3 ಬಾರಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಗೆದ್ದರೆ, 4 ಬಾರಿ ಚೇಸಿಂಗ್ ನಡೆಸಿದ ತಂಡ ಗೆಲುವು ಸಾಧಿಸಿದೆ. 231 ಇಲ್ಲಿನ ಮೊದಲ ಇನಿಂಗ್ಸ್ನ ಎವರೇಜ್ ಮೊತ್ತವಾಗಿದೆ. ಈ ಮೈದಾನದಲ್ಲಿ ದಾಖಲಾದ ಅತ್ಯಧಿಕ ಮೊತ್ತವೆಂದರೆ 9 ವಿಕೆಟ್ಗೆ 364 ರನ್. ಇದು ಈ ಬಾರಿ ವಿಶ್ವಕಪ್ ಕಪ್ ಟೂರ್ನಿಯಲ್ಲೇ ದಾಖಲಾಗಿದೆ. ಬಾಂಗ್ಲಾದೇಶ ವಿರುದ್ಧ ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ರನ್ ಪೇರಿಸಿತ್ತು. ಭಾರತ ಮತ್ತು ಕಿವೀಸ್ ಬಲಿಷ್ಠವಾಗಿರುವ ಕಾರಣ ಈ ಪಂದ್ಯವೂ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗಬಹುದು.
ಇದನ್ನೂ ಓದಿ IND vs NZ: ನ್ಯೂಜಿಲ್ಯಾಂಡ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ
ಹವಾಮಾನ ವರದಿ
ಹವಾಮಾನ ಇಲಾಖೆಯ ವರದಿ ಪ್ರಕಾರ, ಪಂದ್ಯ ನಡೆಯುವ ಭಾನುವಾರ ಧರ್ಮಶಾಲದಲ್ಲಿ ಭಾರಿ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಿದೆ. ಟಾಸ್ ಕೂಡ ನಡೆಯುವುದು ಅನುಮಾನ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಅಕ್ಟೋಬರ್ 17ರಂದು ಇಲ್ಲೇ ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ ವಿರುದ್ಧದ ಪಂದ್ಯ ಮಳೆಯಿಂದ 43 ಓವರ್ಗೆ ಸೀಮಿತಗೊಳಿಸಲಾಗಿತ್ತು. ಇದೀಗ ಈ ಪಂದ್ಯಕ್ಕೂ ಮಳೆಯ ಭೀತಿ ಕಾಡಿದೆ.
Touchdown Dharamshala 📍🏔️#TeamIndia | #CWC23 | #MeninBlue | #INDvNZ pic.twitter.com/l5AtXNcDrH
— BCCI (@BCCI) October 20, 2023
ಬಲಾಬಲ
ಇತ್ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 9 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗೆದ್ದಿದ್ದು ಕೇವಲ ಮೂರು ಪಂದ್ಯಗಳು ಉಳಿದ 5 ಪಂದ್ಯಗಳಲ್ಲಿ ಕಿವೀಸ್ ಗೆದ್ದು ಬೀಗಿದೆ. 2019 ವಿಶ್ವಕಪ್ನಲ್ಲಿ ಲೀಗ್ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಆದರೆ ಸೆಮಿಫೈನಲ್ನಲ್ಲಿ ಭಾರತ ಸೋಲು ಕಂಡಿತ್ತು. ಈ ಅಂಕಿ ಅಂಶಗಳ ಆಧಾರದಲ್ಲಿ ಕಿವೀಸ್ ಗೆಲುವಿನ ನೆಚ್ಚಿನ ತಂಡವಾಗಿದೆ.
ಇದನ್ನೂ ಓದಿ ಕಿವೀಸ್ ವಿರುದ್ಧ ಭಾರತ ಕೊನೆಯ ಬಾರಿ ವಿಶ್ವಕಪ್ ಪಂದ್ಯ ಗೆದ್ದಾಗ ಕೊಹ್ಲಿ,ರೋಹಿತ್ಗೆ ಎಷ್ಟು ವಯಸ್ಸು?
ಸಂಭಾವ್ಯ ತಂಡ
ನ್ಯೂಜಿಲ್ಯಾಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.
ಭಾರತ: ರೋಹಿತ್ ಶರ್ಮ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್.