ಇಂದೋರ್: ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಭರ್ಜರಿ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್ಗೆ 385 ರನ್ ಪೇರಿಸಿ ಸವಾಲೊಡ್ಡಿದೆ.
ಇಂದೋರ್ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ಗೆ 385 ರನ್ ಗಳಿಸಿದೆ. ನ್ಯೂಜಿಲ್ಯಾಂಡ್ ಗೆಲುವಿಗೆ 386 ರನ್ ಪೇರಿಸಬೇಕಿದೆ.
ರೋಹಿತ್-ಗಿಲ್ ಬೊಂಬಾಟ್ ಬ್ಯಾಟಿಂಗ್
ಕಿವೀಸ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ತಮ್ಮ ಪರಾಕ್ರಮವನ್ನು ಈ ಪಂದ್ಯದಲ್ಲಿಯೂ ಮುಂದುವರಿಸಿದರು. ಆದರೆ ಈ ಪಂದ್ಯದಲ್ಲಿ ಉಭಯ ಆಟಗಾರರ ಬ್ಯಾಟಿಂಗ್ ಆರ್ಭಟ ಹಿಂದಿನ ಎರಡು ಪಂದ್ಯಕ್ಕಿಂತಲೂ ಜೋರಾಗಿತ್ತು. ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ರೋಹಿತ್ ಮತ್ತು ಗಿಲ್ ಸಿಕ್ಸರ್, ಬೌಂಡರಿ ಮೂಲಕ ಕಿವೀಸ್ ಬೌಲರ್ಗಳ ಬೆವರಿಳಿಸಿದರು.
ಒಂದು ಹಂತದಲ್ಲಿ ಈ ಜೋಡಿಯ ಬ್ಯಾಟಿಂಗ್ ಗಮನಿಸುವಾಗ ಭಾರತ ತಂಡ 500ರ ಗಡಿ ದಾಟುವ ಸೂಚನೆ ಇತ್ತು. ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಉಭಯ ಆಟಗಾರರು 20 ಓವರ್ ವೇಳೆಗೆ ಬರೋಬ್ಬರಿ 200 ರನ್ ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇದೇ ವೇಳೆ ರೋಹಿತ್ ಮತ್ತು ಶುಭಮನ್ ಗಿಲ್ ಶತಕವನ್ನೂ ಪೂರೈಸಿದರು.
ಕಳೆದ ಒಂದುವರೆ ವರ್ಷಗಳಿಂದ ಶತಕದ ಬರ ಅನುಭವಿಸುತ್ತಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ತಮ್ಮ ಏಕದಿನ ವೃತ್ತಿಜೀವನದ 30ನೇ ಶತಕವನ್ನು ಪೂರೈಸಿದರು. ಒಟ್ಟು 85 ಎಸೆತ ಎದುರಿಸಿದ ರೋಹಿತ್ 6 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 101 ರನ್ ಗಳಿಸಿ ಬ್ರೇಸ್ವೆಲ್ಗೆ ವಿಕೆಟ್ ಒಪ್ಪಿಸಿದರು. ಗಿಲ್ ಮತ್ತು ರೋಹಿತ್ ಮೊದಲ ವಿಕೆಟ್ಗೆ ಬರೋಬ್ಬರಿ 212 ರನ್ ಜತೆಯಾಟ ನಡೆಸಿದರು.
ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ 18 ರನ್ ಆಗುವ ವೇಳೆಗೆ ಶುಭಮನ್ ಗಿಲ್ ವಿಕೆಟ್ ಕೂಡ ಬಿತ್ತು. ಶುಭಮನ್ ಗಿಲ್ 78 ಎಸೆತ ಎದುರಿಸಿ 122 ರನ್ ಬಾರಿಸುವ ಮೂಲಕ ಶತಕ ಪೂರೈಸಿದರು. ಈ ಇನಿಂಗ್ಸ್ ವೇಳೆ 13 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಯಿತು.
ಹಠಾತ್ ಕುಸಿತ ಕಂಡ ಭಾರತ
ಶುಭಮನ್ ಮತ್ತು ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ತಂಡದ ಮೊತ್ತ ಹಠಾತ್ ಕುಸಿತ ಕಂಡಿತು. ವಿರಾಟ್ ಕೊಹ್ಲಿ(36), ಸೂರ್ಯಕುಮಾರ್ ಯಾದವ್(14), ಇಶಾನ್ ಕಿಶನ್(17) ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದರು. ಇದರಿಂದ ತಂಡದ ಬೃಹತ್ ಮೊತ್ತಕ್ಕೆ ಹಿನ್ನಡೆಯಾಯಿತು. ಸೂರ್ಯಕುಮಾರ್ ಮತ್ತು ಇಶಾನ್ ಕಿಶನ್ ಕಿವೀಸ್ ವಿರುದ್ಧದ ಮೂರು ಪಂದ್ಯಗಳಲ್ಲಿಯೂ ಸಂಪೂರ್ಣ ವೈಫಲ್ಯ ಕಂಡರು.
ಸಿಡಿದು ನಿಂತ ಪಾಂಡ್ಯ
ಒಂದೊಡೆ ತಂಡದ ವಿಕೆಟ್ ಬೀಳುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಸಿಡಿದು ನಿಂತ ಉಪನಾಯಕ ಹಾರ್ದಿಕ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ಮಿಂಚಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಪಾಂಡ್ಯ ಮೂರು ಸಿಕ್ಸರ್ ಮತ್ತು ಮೂರು ಬೌಂಡರಿ ಮೂಲಕ 54 ರನ್ ಬಾರಿಸಿದರು. ಇವರಿಗೆ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಉತ್ತಮ ಸಾಥ್ ನೀಡಿದರು. ಶಾರ್ದೂಲ್ ಒಟ್ಟು 17 ಎಸೆತಗಳಿಂದ 25 ರನ್ ಚಚ್ಚಿದರು.
ಸಂಕ್ಷಿಪ್ತ ಸ್ಕೋರ್
ಭಾರತ: 50 ಓವರ್ಗಳಲ್ಲಿ 9 ವಿಕೆಟ್ಗೆ 385 (ರೋಹಿತ್ ಶರ್ಮಾ 101, ಶುಭಮನ್ ಗಿಲ್ 112, ಹಾರ್ದಿಕ್ ಪಾಂಡ್ಯ 54)
ಇದನ್ನೂ ಓದಿ | IND VS NZ: 30ನೇ ಏಕದಿನ ಶತಕ ಬಾರಿಸಿದ ರೋಹಿತ್ ಶರ್ಮಾ