ಹೈದರಾಬಾದ್: ಶುಭಮನ್ ಗಿಲ್(208) ಅವರ ಅತ್ಯಾಕರ್ಷಕ ದ್ವಿಶತಕದ ನೆರವಿನಿಂದ ಟೀಮ್ ಇಂಡಿಯಾ(IND VS NZ) ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 349 ರನ್ ಗಳಿಸಿ ಸವಾಲೊಡ್ಡಿದೆ. ಗಿಲ್ ಈ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಮಿಂಚುವ ಮೂಲಕ ಈ ಸಾಧನೆ ಮಾಡಿದ 5ನೇ ಭಾರತೀಯ ಆಟಗಾರನಾಗಿ ಮೂಡಿಬಂದರು.
ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 349 ರನ್ ಗಳಿಸಿದೆ. ಎದುರಾಳಿ ನ್ಯೂಜಿಲ್ಯಾಂಡ್ ಗೆಲುವಿಗೆ 350 ರನ್ ಪೇರಿಸಬೇಕಿದೆ.
ಉತ್ತಮ ಆರಂಭ
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 60 ರನ್ ಒಟ್ಟುಗೂಡಿಸಿತು. ಲಂಕಾ ವಿರುದ್ಧದ ಸರಣಿಯಲ್ಲಿ ತೋರಿದ ಪ್ರದರ್ಶನವೇ ಈ ಪಂದ್ಯದಲ್ಲಿಯೂ ಈ ಜೋಡಿ ಮುಂದುವರಿಸಿತು. ಆದರೆ ರೋಹಿತ್ ಶರ್ಮಾ 34 ರನ್ ಗಳಿಸಿದ ವೇಳೆ ಬ್ಲೇರ್ ಟಿಕ್ನರ್ ಎಸೆತದಲ್ಲಿ ಔಟಾದರು.
ರೋಹಿತ್ ವಿಕೆಟ್ ಪತನದ ಬಳಿಕ ಆಡಲಿಳಿದ ವಿರಾಟ್ ಕೊಹ್ಲಿ(8) ಹೆಚ್ಚು ಕಾಲ ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು. ಮಿಚೆಲ್ ಸ್ಯಾಂಟ್ನರ್ ಅವರ ಸ್ಪಿನ್ ಮೋಡಿಗೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಈ ವಿಕೆಟ್ ಪತನದ ಬೆನ್ನಲೇ ಬಾಂಗ್ಲಾದೇಶ ವಿರುದ್ಧದ ಸರಣಿ ವೇಳೆ ಅತಿ ವೇಗದ ದ್ವಿಶತಕ ಬಾರಿಸಿ ಮಿಂಚಿದ್ದ ಇಶಾನ್ ಕಿಶನ್(5) ಕೂಡ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ತಂಡದ ಮೊತ್ತ 110 ಆಗುವ ವೇಳೆ ಪ್ರಮುಖ ಮೂರು ಆಟಗಾರರ ವಿಕೆಟ್ ಪತನಗೊಂಡ ವೇಳೆ ಭಾರತ 250ರ ಗಡಿ ದಾಟುವುದೂ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಜವಾಬ್ದಾರಿಯುವಾಗಿ ಬ್ಯಾಟಿಂಗ್ ನಡೆಸಿದ ಶುಭಮನ್ ಗಿಲ್ ಎದುರಾಳಿ ತಂಡದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಆಸರೆಯಾದರು. ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಜತೆ ಉತ್ತಮ ಜತೆಯಾಟ ನಡೆಸುವ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೂರ್ಯಕುಮಾರ್ ಯಾದವ್(31), ಹಾರ್ದಿಕ್ ಪಾಂಡ್ಯ(28) ರನ್ ಗಳಿಸಿದರು. ಉಭಯ ಆಟಗಾರರ ಈ ವಿಕೆಟ್ ಡ್ಯಾರಿಲ್ ಮಿಚೆಲ್ ಪಾಲಾಯಿತು.
ಗಿಲ್ ಸ್ಫೋಟಕ ಬ್ಯಾಟಿಂಗ್
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ಬದಿಯಲ್ಲಿ ಕ್ರೀಸ್ ಕಚ್ಚಿ ನಿಂತ ಯುವ ಆಟಗಾರ ಶುಭಮನ್ ಗಿಲ್ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸುವ ಮೂಲಕ ಕಿವೀಸ್ ಬೌಲರ್ಗಳ ಕಿವಿ ಹಿಂಡಿದರು. ಇದೇ ವೇಳೆ ಅವರು ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅವರ ದಾಖಲೆ ಮುರಿದರು.
ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಕ್ಕೆ ಮೊದಲು ಅವರು ಒಟ್ಟು 18 ಅಂತಾರಾಷ್ಟ್ರೀಯ ಇನಿಂಗ್ಸ್ಗಳಲ್ಲಿ 894 ರನ್ ಬಾರಿಸಿದ್ದರು. ಇದೀಗ ಅವರು ದ್ವಿಶತಕದ ಸಾಧನೆಯ ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 1000 ರನ್ ಗಡಿದಾಟಿದ ಸರದಾರ ಎನಿಸಿಕೊಂಡಿದ್ದಾರೆ. ಈ ಸಾಧನೆಗೆ 19 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ಭಾರತ ತಂಡದ ಪರ ಅತಿವೇಗದಲ್ಲಿ ಈ ಸಾಧನೆ ಮಾಡಿದ ಗರಿಮೆ ತಮ್ಮದಾಗಿಸಿಕೊಳ್ಳುವ ಮೂಲಕ ವಿರಾಟ್ ಕೊಹ್ಲಿ ಹಾಗೂ ಧವನ್ ಅವರನ್ನು ಹಿಂದಿಕ್ಕಿದರು.
ಗಿಲ್ ಒಟ್ಟು 149 ಎಸೆತ ಎದುರಿಸಿ 208 ರನ್ ಪೇರಿಸಿದರು. ಈ ಸ್ಫೋಟಕ ಇನಿಂಗ್ಸ್ ವೇಳೆ ಬರೋಬ್ಬರಿ 19 ಬೌಂಡರಿ ಮತ್ತು 9 ಸಿಕ್ಸರ್ ಬಾರಿಸಿದರು. ಇದರ ಜತೆಗೆ ಅತಿ ಕಿರಿಯ ವಯಸ್ಸಿನಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು.
ಸ್ಕೋರ್ ವಿವರ
ಭಾರತ 50 ಓವರ್ಗಳಲ್ಲಿ 8 ವಿಕೆಟ್ಗೆ 349( ಶುಭಮನ್ ಗಿಲ್ 208, ರೋಹಿತ್ ಶರ್ಮಾ 34, ಸೂರ್ಯಕುಮಾರ್ ಯಾದವ್ 31, ಹಾರ್ದಿಕ್ ಪಾಂಡ್ಯ 28, ಡ್ಯಾರಿಲ್ ಮಿಚೆಲ್ 30ಕ್ಕೆ 2).
ಇದನ್ನೂ ಓದಿ | Rohit Sharma | ಎಂ.ಎಸ್. ಧೋನಿ ದಾಖಲೆ ಮುರಿದ ರೋಹಿತ್ ಶರ್ಮಾ!