ಅಹಮದಾಬಾದ್: ಶುಭಮನ್ ಗಿಲ್(ಅಜೇಯ 126 ) ಅವರ ಅತ್ಯಾಕರ್ಷಕ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ20(IND VS NZ) ಪಂದ್ಯದಲ್ಲಿ ಭಾರತ 234ರನ್ ಗಳಿಸಿ ಸವಾಲೊಡ್ಡಿದೆ. ಕಿವೀಸ್ ಗೆಲುವಿಗೆ 235 ರನ್ ಪೇರಿಸಬೇಕಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 234 ರನ್ ಗಳಿಸಿದೆ. ಭಾರತ ಪರ ಶುಭಮನ್ ಗಿಲ್, ರಾಹುಲ್ ತ್ರಿಪಾಠಿ(44) ಮತ್ತು ನಾಯಕ ಹಾರ್ದಿಕ್ ಪಾಂಡ್ಯ(30) ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು.
ಮತ್ತೆ ವೈಫಲ್ಯ ಕಂಡ ಕಿಶನ್
ಬಾಂಗ್ಲಾದೇಶ ವಿರುದ್ಧ ದ್ವಿಶತಕ ಬಾರಿಸಿದ ಬಳಿಕ ಇಶಾನ್ ಕಿಶನ್ ಸಂಪೂರ್ಣ ಮಂಕಾಗಿದ್ದಾರೆ. ಆ ಬಳಿಕ ಆಡಿದ ಒಂದೂ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಕಿವೀಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಆಡಬಹುದು ಎಂದು ನಿರೀಕ್ಷೆ ಇರಿಸಲಾಗಿತ್ತು. ಆದರೆ ಕೇವಲ 1 ರನ್ಗೆ ಔಟಾಗುವ ಮೂಲಕ ನಿರೀಕ್ಷೆಯನ್ನು ಹುಸಿಯಾಗಿಸಿದ್ದಾರೆ.
ಗಿಲ್-ತ್ರಿಪಾಠಿ ಉತ್ತಮ ಜತೆಯಾಟ
ಆರಂಭಿಕ ವಿಕೆಟ್ ಪತನದ ಬಳಿಕ ಜತೆಯಾದ ರಾಹುಲ್ ತ್ರಿಪಾಠಿ ಮತ್ತು ಶುಭಮನ್ ಗಿಲ್ ಕಿವೀಸ್ ಬೌಲರ್ಗಳ ಮೇಲೆ ಸವಾರಿ ನಡೆಸಿ ಉತ್ತಮ ರನ್ ಕಲೆಹಾಕಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಉಭಯ ಆಟಗಾರರು ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆ ಸುರಿಸಿದರು. ಆದರೆ ಅರ್ಧಶತಕದ ಅಂಚಿನಲ್ಲಿ ಎಡವಿದ ತ್ರಿಪಾಠಿ ಅವರು ಸೋಧಿಗೆ ವಿಕೆಟ್ ಒಪ್ಪಿಸಿದರು. 22 ಎಸೆತ ಎದುರಿಸಿ 44 ರನ್ ಬಾರಿಸಿದರು. ಈ ಇನಿಂಗ್ಸ್ ವೇಳೆ 3 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಯಿತು. ಗಿಲ್ ಮತ್ತು ತ್ರಿಪಾಠಿ ದ್ವಿತೀಯ ವಿಕೆಟ್ಗೆ 80 ರನ್ ಜತೆಯಾಟ ನಡೆಸಿತು. ಸೂರ್ಯಕುಮಾರ್ ಯಾದವ್ 24 ರನ್ಗೆ ಆಟ ಮುಗಿಸಿದರು.
ಗಿಲ್ ಬೊಂಬಾಟ್ ಶತಕ
ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿ ಮಿಂಚಿದ್ದ ಶುಭಮನ್ ಗಿಲ್ ಬ್ಯಾಟಿಂಗ್ ಪ್ರತಾಪ ಟಿ20 ಕ್ರಿಕೆಟ್ನಲ್ಲಿಯೂ ಮುಂದುವರಿದಿದೆ. ಕಿವೀಸ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಅವರು ಅಂತಿಮ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು. ಇದು ಅವರ ಚೊಚ್ಚಲ ಟಿ20 ಶತಕವಾಗಿದೆ. ಆರಂಭದಿಂದಲೇ ಕಿವೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಗಿಲ್ 63 ಎಸೆತದಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ ಬಾರಿಸಿಸುವ ಮೂಲಕ ಅಜೇಯ 126 ರನ್ ಪೇರಿಸಿದರು. ಉಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ 30 ರನ್ ಬಾರಿಸಿದರು.
ಇದನ್ನೂ ಓದಿ IND VS AUS: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಶ್ರೇಯಸ್ ಅಯ್ಯರ್ ಅಲಭ್ಯ
ಭಾರತ: 20 ಓವರ್ಗಳಲ್ಲಿ 4 ವಿಕೆಟ್ಗೆ 234 (ಶುಭಮನ್ ಗಿಲ್ , ರಾಹುಲ್ ತ್ರಿಪಾಠಿ 44, ಸೂರ್ಯಕುಮಾರ್ ಯಾದವ್ 24, ಹಾರ್ದಿಕ್ ಪಾಂಡ್ಯ 30)