ಮೌಂಟ್ ಮೌಂಗನಿ: ಸೂರ್ಯಕುಮಾರ್ ಯಾದವ್ (111 *) ಅವರ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 191 ರನ್ ಗಳಿಸಿದೆ. ನ್ಯೂಜಿಲ್ಯಾಂಡ್ ತಂಡ ಗೆಲುವಿಗೆ 192 ರನ್ ಬಾರಿಸಬೇಕಿದೆ.
ಮೌಂಟ್ ಮೌಂಗನಿ ಬೇ ಓವಲ್ ಸ್ಟೇಡಿಯಂನಲ್ಲಿ ಭಾನುವಾರದ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 191 ರನ್ ಗಳಿಸಿದೆ. ಭಾರತ ಪರ ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಕಿವೀಸ್ ಬೌಲರ್ಗಳ ಮೇಲೆರಗಿ ಸಿಕ್ಸರ್, ಫೋರ್ಗಳ ಸುರಿಮಳೆಗೈದ ಕಾರಣ ತಂಡ ಬೃಹತ್ ಮೊತ್ತ ಕಲೆಹಾಕಿತು. ಸೂರ್ಯಕುಮಾರ್ 51 ಎಸೆತಗಳಿಂದ ಅಜೇಯ 111 ರನ್ ಬಾರಿಸಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ಮನಮೋಹಕ ಇನಿಂಗ್ಸ್ ವೇಳೆ 7 ಸಿಕ್ಸರ್ ಮತ್ತು 11 ಬೌಂಡರಿ ದಾಖಲಾಯಿತು. ಉಳಿದಂತೆ ಆರಂಭಿಕ ಆಟಗಾರ ಇಶಾನ್ ಕಿಶಾನ್ 36 ರನ್ ಗಳಿಸಿದರು.
ಮತ್ತೆ ಎಡವಿದ ರಿಷಭ್ ಪಂತ್
ಯುವ ಆಟಗಾರ ರಿಷಭ್ ಪಂತ್ ಈ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಭಡ್ತಿ ಪಡೆದು ಆರಂಭಿಕನಾಗಿ ಆಡಲಿಳಿದರು. ಆದರೆ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿ ಮತ್ತೆ ನಿರಾಸೆ ಮೂಡಿಸಿದರು. 13 ಎಸೆತ ಎದುರಿಸಿದ ಅವರು ಕೇವಲ 6 ರನ್ ಗಳಿಸಿ ಲಾಕಿ ಫರ್ಗ್ಯುಸನ್ಗೆ ವಿಕೆಟ್ ಒಪ್ಪಿಸಿದರು. ಕಳೆದ ವಿಶ್ವ ಕಪ್ ಪಂದ್ಯದ ವೇಳೆಯೂ ಇದೇ ರೀತಿಯ ವೈಫಲ್ಯ ಕಂಡಿದ್ದರು. ವಿಶ್ವ ಕಪ್ನಲ್ಲಿ ಮೀಸಲು ಆಟಗಾರನಾಗಿದ್ದ ಶ್ರೇಯಸ್ ಅಯ್ಯರ್ ಕೂಡ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಉಳಿದಂತೆ ಹಾರ್ದಿಕ್ ಪಾಂಡ್ಯ ಕೂಡ ನಾಯಕನ ಆಟವಾಡುವಲ್ಲಿ ಯಶಸ್ಸು ಗಳಿಸಲಿಲ್ಲ. ಉಭಯ ಆಟಗಾರರ ಗಳಿಕೆ 13ರನ್ಗೆ ಅಂತ್ಯ ಕಂಡಿತು.
ಸೌಥಿ ಹ್ಯಾಟ್ರಿಕ್ ಸಾಧನೆ
ನ್ಯೂಜಿಲೆಂಡ್ ತಂಡದ ಹಿರಿಯ ಅನುಭವಿ ಬೌಲರ್ ಟಿಮ್ ಸೌಥಿ ಪಂದ್ಯದ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದರು. ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆದು ಟಿ20 ಕ್ರಿಕೆಟ್ನಲ್ಲಿ ಎರಡನೇ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಮತ್ತೊಬ್ಬ ಆಟಗಾರನೆಂದರೆ ಶ್ರೀಲಂಕಾದ ಲಸಿತ್ ಮಾಲಿಂಗ.
ಸಂಕ್ಷಿಪ್ತ ಸ್ಕೋರ್: ಭಾರತ 20 ಓವರ್ಗಳಲ್ಲಿ 6 ವಿಕೆಟ್ಗೆ 191 (ಸೂರ್ಯಕುಮಾರ್ ಯಾದವ್ ಅಜೇಯ 111, ಇಶಾನ್ ಕಿಶಾನ್ 36, ಟಿಮ್ ಸೌಥಿ 34ಕ್ಕೆ 3).
ಇದನ್ನೂ ಓದಿ | IND VS NZ | ಟಾಸ್ ಗೆದ್ದ ನ್ಯೂಜಿಲ್ಯಾಂಡ್; ಭಾರತಕ್ಕೆ ಬ್ಯಾಟಿಂಗ್ ಆಹ್ವಾನ