ರಾಯ್ಪುರ: ಟೀಮ್ ಇಂಡಿಯಾ(IND VS NZ) ವೇಗಿಗಳ ಘಾತಕ ಬೌಲಿಂಗ್ ದಾಳಿಗೆ ನಲುಗಿದ ಪ್ರವಾಸಿ ನ್ಯೂಜಿಲ್ಯಾಂಡ್ 8 ವಿಕೆಟ್ಗಳ ಸೋಲು ಕಂಡಿದೆ. ಭಾರತ ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.
ರಾಯ್ಪುರದ ಶಾಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 34.3 ಓವರ್ಗಳಲ್ಲಿ 108ಕ್ಕೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ 20.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 111 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಸುಲಭ ಮೊತ್ತವನ್ನು ಚೇಸ್ ಮಾಡಿದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ಲ ಉತ್ತಮ ಆರಂಭ ನೀಡಿದರು. ರಿಸ್ಕಿ ಟ್ರ್ಯಾಕ್ನಲ್ಲಿ ಎಚ್ಚರಿಕೆ ಆಟವಾಡುವ ಮೂಲಕ ತಂಡಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ರೋಹಿತ್ ಶರ್ಮಾ(51) 50 ಎಸೆತ ಎದುರಿಸಿ ಅರ್ಧಶತಕ ಪೂರೈಸಿದರು. ಆದರೆ ಮುಂದಿನ ಎಸೆತದಲ್ಲಿ ಹೆನ್ರಿ ಶಿಪ್ಲೆ ಅವರ ಎಲ್ಬಿಡಬ್ಲ್ಯು ಬಲೆಗೆ ಬಿದ್ದು ವಿಕೆಟ್ ಕೈಚೆಲ್ಲಿದರು. ರೋಹಿತ್ ಮತ್ತು ಗಿಲ್ ಮೊದಲ ವಿಕೆಟ್ಗೆ 72 ರನ್ಗಳ ಜತೆಯಾಟ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಂತಿಮವಾಗಿ ಕಳೆದ ಪಂದ್ಯದ ದ್ವಿಶತಕವೀರ ಶುಭಮನ್ ಗಿಲ್ ಅಜೇಯ 40, ಇಶಾನ್ ಕಿಶನ್ ಅಜೇಯ 8 ರನ್ ಪೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿರಾಟ್ ಕೊಹ್ಲಿ 11 ರನ್ ಗಳಿಸಿ ಸ್ಯಾಂಟ್ನರ್ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಕೊಹ್ಲಿ ಮತ್ತೆ ಸ್ಯಾಂಟ್ನರ್ ವಿರುದ್ಧ ಎಡವಿದರು. ಮೊದಲ ಪಂದ್ಯದಲ್ಲಿಯೂ ಸ್ಯಾಂಟ್ನರ್ಗೆ ವಿಕೆಟ್ ಒಪ್ಪಿಸಿದ್ದರು. ಬೌಲಿಂಗ್ನಲ್ಲಿ ಭಾರತ ಪರ ಮೊಹಮ್ಮದ್ ಶಮಿ ಘಾತಕ ಬೌಲಿಂಗ್ ನಡೆಸಿ ಮೂರು ವಿಕೆಟ್ ಕಿತ್ತು ಮಿಂಚಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಉರುಳಿಸಿದರು.
ಸಂಪೂರ್ಣ ವಿಫಲ ಕಂಡ ಕಿವೀಸ್
ನ್ಯೂಜಿಲ್ಯಾಂಡ್ ಖಾತೆ ತೆರೆಯುವ ಮುನ್ನವೇ ಮೊಹಮ್ಮದ್ ಶಮಿ ಫಿನ್ ಅಲೆನ್ ವಿಕೆಟ್ ಕಿತ್ತು ಶಾಕ್ ನೀಡಿದರು. ಇದರ ಬೆನ್ನಲೇ ಹಾರ್ದಿಕ್ ಪಾಂಡ್ಯ ಮತ್ತೊಂದು ವಿಕೆಟ್ ಉಡಾಯಿಸಿದರು. ಭಾರತ ಬೌಲರ್ಗಳು ಜಿದ್ದಿಗೆ ಬಿದ್ದವರಂತೆ ಘಾತಕ ಸ್ಪೆಲ್ ಮೂಲಕ ವಿಕೆಟ್ ಕೀಳುತ್ತಲೇ ಸಾಗಿದರು. ಕಿವೀಸ್ ಕೇವಲ 15 ರನ್ಗೆ 5 ವಿಕೆಟ್ ಕಳೆದುಕೊಂಡು ಚಿಂತಾಜನಕ ಸ್ಥಿತಿ ತಲುಪಿತು. ಇನ್ನೇನು 50 ರನ್ ಒಳಗೆ ಗಂಟು ಮೂಟೆ ಕಟ್ಟುತ್ತದೆ ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು.
ತಂಡದ ಶೋಚನೀಯ ಸ್ಥಿತಿಯಲ್ಲಿ ಕಳೆದ ಪಂದ್ಯದ ಶತಕ ವೀರ ಮೈಕಲ್ ಬ್ರೇಸ್ವೆಲ್ ಮತ್ತು ಗ್ಲೇನ್ ಫಿಲಿಪ್ಸ್ ಸಣ್ಣ ಮಟ್ಟದ ಹೋರಾಟ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಈ ಜೋಡಿಯೂ ಹೆಚ್ಚು ಕಾಲ ಕ್ರೀಸ್ ಆಕ್ರಮಿಸಿಕೊಳ್ಳಲಿಲ್ಲ. ಬ್ರೇಸ್ವೆಲ್ 22 ರನ್ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದರು. ಫಿಲಿಪ್ಸ್ 36 ರನ್ ಪೇರಿಸಿದರು. ಈ ಜೋಡಿ 47 ರನ್ ಜತೆಯಾಟ ನಡೆಸಿತು. ಅಂತಿಮ ಹಂತದಲ್ಲಿ ಬ್ಯಾಟ್ ಬೀಸಿದ ಮಿಚೆಲ್ ಸ್ಯಾಂಟ್ನರ್ 27 ರನ್ ಗಳಿಸಿದ ಪರಿಣಾಮ ತಂಡದ ಮೊತ್ತ ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಗ್ಲೇನ್ ಫಿಲಿಪ್ಸ್ 52 ಎಸೆತ ಎದುರಿಸಿ 36 ರನ್ ಪೇರಿಸಿದರು. ಇದು ಕಿವೀಸ್ ಪರ ಆಟಗಾರನೊಬ್ಬ ದಾಖಲಿಸಿದ ಅತ್ಯಧಿಕ ಮೊತ್ತ. ಒಟ್ಟಾರೆ ತಂಡದ ಮೂರು ಆಟಗಾರರು ಮಾತ್ರ ಎರಡಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ಸು ಕಂಡರು.
ಸಂಕ್ಷಿಪ್ತ ಸ್ಕೋರ್:
ನ್ಯೂಜಿಲ್ಯಾಂಡ್: 34.3 ಓವರ್ಗಳಲ್ಲಿ 108ಕ್ಕೆ ಆಲೌಟ್(ಗ್ಲೆನ್ ಫಿಲಿಪ್ಸ್ 36, ಬ್ರೇಸ್ವೆಲ್ 22, ಮಿಚೆಲ್ ಸ್ಯಾಂಟ್ನರ್, ಮೊಹಮ್ಮದ್ ಶಮಿ 18ಕ್ಕೆ3, ವಾಷಿಂಗ್ಟನ್ ಸುಂದರ್ 7ಕ್ಕೆ 2, ಹಾರ್ದಿಕ್ ಪಾಂಡ್ಯ 16ಕ್ಕೆ2)
ಭಾರತ: ರೋಹಿತ್ ಶರ್ಮಾ 51, ಶುಭಮನ್ ಗಿಲ್ ಅಜೇಯ 40
ಇದನ್ನೂ ಓದಿ | IND VS NZ | ಟಾಸ್ ಗೆದ್ದ ಬಳಿಕ ಗೊಂದಲಕ್ಕೆ ಒಳಗಾದ ನಾಯಕ ರೋಹಿತ್ ಶರ್ಮಾ; ವಿಡಿಯೊ ವೈರಲ್