ದುಬೈ: ಹಾರ್ದಿಕ್ ಪಾಂಡ್ಯ (೨೫ ರನ್ಗಳಿಗೆ ೩ ವಿಕೆಟ್) ಹಾಗೂ ಭುವನೇಶ್ವರ್ ಕುಮಾರ್ (೨೫ ರನ್ಗಳಿಗೆ ೪ ವಿಕೆಟ್) ಅವರ ಮಾರಕ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡವನ್ನು ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ೧೪೭ ರನ್ಗಳಿಗೆ ಆಲ್ಔಟ್ ಮಾಡಿತು. ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ೧೯.೫ ಓವರ್ಗಳಲ್ಲಿ ೧೪೭ ರನ್ಗಳಿಗೆ ಸರ್ವಪತನ ಕಂಡಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರೋಹಿತ್ ಶರ್ಮ ಅವರು ಯೋಜನೆಗೆ ತಕ್ಕ ಹಾಗೆ ಬೌಲಿಂಗ್ ದಾಳಿ ಸಂಘಟಿಸಿದರು. ಅಪಾಯಕಾರಿ ಬ್ಯಾಟರ್ ಬಾಬರ್ ಅಜಮ್ ಅವರನ್ನು ೧೦ ರನ್ಗಳಿಗೆ ಭುವನೇಶ್ವರ್ ಕುಮಾರ್ ಪೆವಿಲಿಯನ್ಗೆ ಕಳುಹಿಸಿದರು. ನಂತರ ಬಂದ ಫಖರ್ ಜಮಾನ್ (೧೦) ಆವೇಶ್ ಖಾನ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಇಫ್ತಿಕಾರ್ ಅಹಮದ್ ೨೮ ರನ್ ಬಾರಿಸಿ ಅಪಾಯಕಾರಿಯಾಗುವ ಲಕ್ಷಣ ತೋರಿದರೂ ಹಾರ್ದಿಕ್ ಪಾಂಡ್ಯ ಚಾಣಾಕ್ಷ ಬೌಲಿಂಗ್ ಮೂಲಕ ಅವರು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ಗೆ ಕ್ಯಾಚ್ ನೀಡುವಂತೆ ಮಾಡಿದರು.
ಈ ವೇಳೆ ಮೊಹಮ್ಮದ್ ರಿಜ್ವಾನ್ ಭರ್ಜರಿ ಹೊಡೆತಗಳ ಮೂಲಕ ದೊಡ್ಡ ಭಾರತಕ್ಕೆ ಅಪಾಯಕಾರಿಯಾಗುವ ಲಕ್ಷಣ ತೋರಿದರು. ಆದರೆ, ಪಾಂಡ್ಯ ಅವರನ್ನೂ ಯಾಮಾರಿಸಿ ಔಟ್ ಮಾಡಿದರು. ಬಳಿಕ ಖುಷ್ದಿಲ್ ಖಾನ್ (೦೨) ಪಾಂಡ್ಯ ಅವರ ಎಸೆತಕ್ಕೆ ಬಲಿಯಾದರು. ಆಸಿಫ್ ಅಲಿ (೯) ಭುವನೇಶ್ವರ್ ಕುಮಾರ್ ಎಸೆತಕ್ಕೆ ದೊಡ್ಡ ಹೊಡೆತಕ್ಕೆ ಮುಂದಾಗಿ ಸೂರ್ಯಕುಮಾರ್ಗೆ ಕ್ಯಾಚ್ ನೀಡಿದರು. ಕೊನೆಯಲ್ಲಿ ಶಹನವಾಜ್ ದಹಾನಿ ೬ ಎಸೆತಗಳಿಗೆ ೧೬ ರನ್ ಬಾರಿಸಿ ಸ್ಕೋರ್ ೧೫೦ರ ಸಮೀಪ ಬರುವಂತೆ ನೋಡಿಕೊಂಡರು.
ಸ್ಕೋರ್ ವಿವರ
ಪಾಕಿಸ್ತಾನ : ೧೯.೫ ಓವರ್ಗಳಲ್ಲಿ .೧೪೭ (ಮೊಹಮ್ಮದ್ ರಿಜ್ವಾನ್ ೪೩, ಇಫ್ತಿಕಾರ್ ಅಹಮದ್ ೨೮; ಹಾರ್ದಿಕ್ ಪಾಂಡ್ಯ ೨೫ಕ್ಕೆ೩, ಭುವನೇಶ್ವರ್ ಕುಮಾರ್ 2೬ಕ್ಕೆ ೪).