Site icon Vistara News

IND vs PAK: ಭಾರತ-ಪಾಕ್​ ಪಂದ್ಯಕ್ಕೆ ಕ್ಷಣಗಣನೆ; ಮಳೆ ಭೀತಿ ಇದೆಯೇ?

ahmedabad narendra modi stadium

ಅಹಮದಾಬಾದ್​: ಭಾರತ ಮತ್ತು ಪಾಕಿಸ್ತಾನ(IND vs PAK) ತಂಡಗಳ ಮಧ್ಯೆ ಕ್ರಿಕೆಟ್​ ಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದು ಏಳು ವರ್ಷಗಳ ಬಳಿಕ ಪಾಕ್​ ತಂಡ ಭಾರತದಲ್ಲಿ ಆಡುವ ಪಂದ್ಯವಾಗಿದೆ. ಹೀಗಾಗಿ ನಿರೀಕ್ಷೆಗಳು ಹೆಚ್ಚಾಗಿಯೇ ಇದೆ. ಈ ಪಂದ್ಯಕ್ಕೆ ಯಾವುದೇ ಮಳೆಯ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಅಭಿಮಾನಿಗಳು ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು.

ಹವಾಮಾನ ವರದಿ

IMDಯ ಮುನ್ಸೂಚನೆ ಪ್ರಕಾರ ಅಹಮದಾಬಾದ್‌ ನಗರದಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಆದರೆ ಪಂದ್ಯಕ್ಕೆ ವರುಣನ ಅವಕೃಪೆ ಇರದು. ಶನಿವಾರ ಅಹಮದಾಬಾದ್​ನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇದೆ ಎಂದು ತಿಳಿಸಿದೆ. ಒಂದೊಮ್ಮೆ ಮಳೆ ಬಂದರೂ ವಿಶ್ವಕಪ್​ನಲ್ಲಿ ಯಾವುದೇ ಲೀಗ್​ ಪಂದ್ಯಕ್ಕೂ ಮೀಸಲು ದಿನ ಇಲ್ಲ. ಐಸಿಸಿ ನಿಯಮದ ಪ್ರಕಾರ ಸೆಮಿಫೈನಲ್​ನ ಎರಡು ಪಂದ್ಯಗಳಿಗೆ ಮತ್ತು ಫೈನಲ್​ಗೆ ಮಾತ್ರ ಮೀಸಲು ದಿನ ಇರಲಿದೆ. ಹೀಗಾಗಿ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದು ಅಂಕ ಸಿಗಲಿದೆ.

ಇದು ಏಳು ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತದ ನೆಲದಲ್ಲಿ ಆಡುತ್ತಿರುವ ಪಂದ್ಯವಾಗಿದೆ. ಈ ಪಂದ್ಯವನ್ನು ನೋಡಲು ಅಭಿಮಾನಿಗಳು ದುಪ್ಪಟ್ಟು ಹಣ ನೀಡಿ ಟಿಕೆಟ್​ ಖರೀದಿಸಿದ್ದಾರೆ. ಸ್ಟೇಡಿಯಂ ಹೌಸ್​ಫುಲ್​ ಆಗುವುದರಲ್ಲಿ ಅನುಮಾನವೇ ಬೇಡ.

ಅಕ್ಯುವೆದರ್ ವರದಿಯ ಪ್ರಕಾರ, ಅಹ್ಮದಾಬಾದ್​ನಲ್ಲಿ ಹಗಲಿನಲ್ಲಿ ಶೇ. 14 ರಷ್ಟು ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿಲ್ಲ. ಪಂದ್ಯ ಆರಂಭಕ್ಕೂ ಒಂದು ಗಂಟೆ ಮೊದಲು ಮನೋರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಪ್ರೇಕ್ಷಕರಿಗಾಗಿ ಕ್ರೀಡಾಂಗಣಕ್ಕೆ ಪ್ರವೇಶ ಸಿಗಲಿದೆ.

ಬಾಂಬ್​ ದಾಳಿಯ ಬೆದರಿಕೆಯಿಂದ ಹೆಚ್ಚುವರಿ ಪೊಲೀಸ್​ ಮತ್ತು ಆರ್ಮಿ ಪಡೆಯನ್ನು ಮೈದಾನ ಸುತ್ತಲೂ ನಿಯೋಗ ಮಾಡಲಾಗಿದೆ. ಮೈದಾನದ 100 ಮೀ. ಆವರಣದಲ್ಲಿ ವಾಹನ ಓಡಾಟ ನಿರ್ಬಂಧಿಸಲಾಗಿದೆ. ಪಂದ್ಯ ನಡೆಯುವ ದಿನ ಸ್ಟೇಡಿಯಂ ಹೌಸ್​ಫುಲ್​ ಆಗುವುದು ಖಚಿತವಾಗಿದೆ. ಒಂದೇ ಕಡೆ ಲಕ್ಷಾಂತರ ಜನರು ಸೇರುವ ಜಾಗದಲ್ಲಿ ಅನಾಹುತವಾದರೆ ಭಾರಿ ಎಡವಟ್ಟು ಸಂಭವಿಸುತ್ತದೆ. ಹೀಗಾಗಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.

ಏಳು ಬಾರಿ ವಿಶ್ವ ಕಪ್​ ಮುಖಾಮುಖಿ

ಭಾರತ ಮತ್ತು ಪಾಕ್​ ಮೊದಲ ಬಾರಿಗೆ ಮಿಶ್ವ ಕಪ್​ನಲ್ಲಿ ಮುಖಾಮುಖಿಯಾಗಿದ್ದು 1992ರಲ್ಲಿ ಆ ಬಳಿಕ 1996, 1999, 2003, 2011, 2015, 2019 ಈ ಎಲ್ಲ ಮುಖಾಮುಖಿಯಲ್ಲಿಯೂ ಭಾರತ ಗೆಲುವು ಸಾಧಿಸಿದೆ. ಈ ಬಾರಿಯೂ ಗೆದ್ದು ಪಾಕಿಗೆ ಎಂಟನೇ ಏಟು ನೀಡಲಿ ಎನ್ನುವುದು ಎಲ್ಲ ಭಾರತೀಯರ ಆಶಯವಾಗಿದೆ.

ಇದನ್ನೂ ಓದಿ IND vs PAK: ಭಾರತ-ಪಾಕ್​ ಪಂದ್ಯಕ್ಕೆ ಕಂಚಿನ ಕಂಠದ ಕಾಮೆಂಟರಿ ಕಿಂಗ್​ ಅಲಭ್ಯ

ಸಂಭಾವ್ಯ ತಂಡ

ಭಾರತ: ಇಶಾನ್​ ಕಿಶನ್​/ಶುಭಮನ್​ ಗಿಲ್​, ರೋಹಿತ್​ ಶರ್ಮ(ನಾಯಕ), ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಹಾರ್ದಿಕ್​ ಪಾಂಡ್ಯ, ಕೆ.ಎಲ್​ ರಾಹುಲ್​, ರವೀಂದ್ರ ಜಡೇಜ, ಕುಲ್​ದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್​, ಶಾರ್ದೂಲ್​ ಠಾಕೂರ್​.

ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್ ಉಲ್-ಹಕ್, ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹಾರಿಸ್ ರೌಫ್.

Exit mobile version