ಬೆಂಗಳೂರು: ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ(IND vs PAK) ತಂಡದ ಆಟಗಾರರು ಹಲವು ದಾಖಲೆಗಳನ್ನು ಬರೆದಿದ್ದಾರೆ. ಭಾರತ ಮತ್ತು ಪಾಕ್ ಮೊದಲ ಬಾರಿಗೆ ವಿಶ್ವ ಕಪ್ನಲ್ಲಿ ಮುಖಾಮುಖಿಯಾಗಿದ್ದು 1992ರಲ್ಲಿ ಆ ಬಳಿಕ 1996, 1999, 2003, 2011, 2015, 2019 ಈ ಎಲ್ಲ ಮುಖಾಮುಖಿಯಲ್ಲಿಯೂ ಭಾರತ ಗೆಲುವು ಸಾಧಿಸಿದೆ. ಈ ಬಾರಿಯೂ ಗೆದ್ದು ಅಜೇಯ ದಾಖಲೆ ಕಾಯ್ದುಕೊಳ್ಳಲಿ ಎನ್ನುವುದು ಎಲ್ಲ ಭಾರತೀಯರ ಆಶಯವಾಗಿದೆ. ಉಭಯ ತಂಡಗಳ ಮಧ್ಯೆ ಗರಿಷ್ಠ ವೈಯಕ್ತಿಕ ರನ್ ಬಾರಿಸಿದ ಸಾಧಕರ ಪಟ್ಟಿ ಇಲ್ಲಿದೆ.
ರೋಹಿತ್ ಶರ್ಮ
ರೋಹಿತ್ ಶರ್ಮ ಅವರು ಪಾಕಿಸ್ತಾನ ವಿರುದ್ಧದ ಗರಿಷ್ಠ ವೈಯಕ್ತಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ರೋಹಿತ್ 2019ರಲ್ಲಿ ಮ್ಯಾಚೆಂಸ್ಟರ್ನಲ್ಲಿ ನಡೆದಿದ್ದ ಪಂದ್ಯದಲ್ಲಿ 113 ಎಸೆತಗಳಲ್ಲಿ 140 ರನ್ ಬಾರಿಸಿದ್ದರು.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಿಂಗ್ ಕೊಹ್ಲಿ 2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ 126 ಎಸೆತಗಳಿಂದ 107 ರನ್ ಬಾರಿಸಿದ್ದರು. ಈ ಬಾರಿ ಈ ದಾಖಲೆಯನ್ನು ಮೀರಿ ನಿಲ್ಲಲಿದ್ದಾರಾ ಎಂದು ಕಾದು ನೋಡಬೇಕಿದೆ.
ಸಯೀದ್ ಅನ್ವರ್
ಪಾಕಿಸ್ತಾನ ಮಾಜಿ ಆಟಗಾರ ಸಯೀದ್ ಅನ್ವರ್ ಅವರು ಈ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಅವರು 2003ರಲ್ಲಿ ಭಾರತ ವಿರುದ್ಧ 126 ಎಸೆತಗಳಿಂದ 101 ರನ್ ಬಾರಿಸಿ ಈ ಸಾಧನೆ ಮಾಡಿದ್ದರು. 2015ರ ವರೆಗೆ ಅವರು ಅಗ್ರಸ್ಥಾನದಲ್ಲೇ ಇದ್ದರು. ಆ ಬಳಿಕ ವಿರಾಟ್ ಮತ್ತು ರೋಹಿತ್ ಅವರನ್ನು ಹಿಂದಿಕ್ಕಿದ್ದರು.
ಇದನ್ನೂ ಓದಿ IND vs PAK: ಭಾರತ-ಪಾಕ್ ಪಂದ್ಯಕ್ಕೆ ಕ್ಷಣಗಣನೆ; ಮಳೆ ಭೀತಿ ಇದೆಯೇ?
ಸಚಿನ್ ತೆಂಡೂಲ್ಕರ್
ಕ್ರಿಕೆಟ್ ದಿಗ್ಗಜ ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಪಾಕಿಸ್ತಾನ ವಿರುದ್ಧ 2003ರಲ್ಲಿ 98 ರನ್ ಬಾರಿಸಿದ್ದರು. ಗರಿಷ್ಠ ವೈಯಕ್ತಿಕ ರನ್ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಸಚಿನ್ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ನವಜೋತ್ ಸಿಂಗ್ ಸಿಧು
ಭಾರತ ತಂಡದ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನ ವಿರುದ್ಧ ಗರಿಷ್ಠ ವೈಯಕ್ತಿಕ ರನ್ ಗಳಿಸಿದ ಮೊದಲ ಆಟಗಾರ. 1996ರ ವಿಶ್ವಕಪ್ನಲ್ಲಿ ಅವರು 93 ರನ್ ಬಾರಿಸಿದ್ದರು. ಆ ಬಳಿಕ ಅನೇಕ ಆಟಗಾರರು ಈ ರನ್ ಹಿಂದಿಕ್ಕಿದರು. ಈಗ ಇವರ 5ನೇ ಸ್ಥಾನದಲ್ಲಿದ್ದಾರೆ.
ದಾಖಲೆಗಳ ಪಟ್ಟಿ
1. ಉಭಯ ತಂಡಗಳು ವಿಶ್ವಕಪ್ ಪಂದ್ಯಗಳಲ್ಲಿ ಭಾರತ 7ಕ್ಕೆ 300 ರನ್ ಗಳಿಸಿದ್ದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಇದು 2015 ವಿಶ್ವಕಪ್ ಕೂಟದಲ್ಲಿ ದಾಖಲಾಗಿತ್ತು.
2. ಸಚಿನ್ ತೆಂಡೂಲ್ಕರ್ ಅವರು ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯಗಳಲ್ಲಿ ಮುನ್ನೂರು ಪ್ಲಸ್ ರನ್ ಪೇರಿಸಿದ ಏಕೈಕ ಆಟಗಾರ (313 ರನ್).
3. ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯಗಳಲ್ಲಿ 3 ಶತಕ ದಾಖಲಾಗಿದೆ. 2003ರಲ್ಲಿ ಸಯೀದ್ ಅನ್ವರ್ 101 ರನ್, 2015ರಲ್ಲಿ ಕೊಹ್ಲಿ 107 ರನ್, 2019 ರಲ್ಲಿ ರೋಹಿತ್ ಶರ್ಮ 140 ರನ್ ಬಾರಿಸಿದ್ದಾರೆ.
4. ಇತ್ತಂಡಗಳ ವಿಶ್ವಕಪ್ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ ಅತೀ ಹೆಚ್ಚು 3 ಅರ್ಧ ಶತಕ ಹೊಡೆದಿದ್ದಾರೆ.
5. ಭಾರತ-ಪಾಕ್ ವಿಶ್ವಕಪ್ ಪಂದ್ಯಗಳಲ್ಲಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅತೀ ಹೆಚ್ಚು ವಿಕೆಟ್ ಉರುಳಿಸಿದ ದಾಖಲೆ ಹೊಂದಿದ್ದಾರೆ. 8 ವಿಕೆಟ್.
6. ವೆಂಕಟೇಶ್ ಪ್ರಸಾದ್ 1999ರ ಪಂದ್ಯದಲ್ಲಿ 27ಕ್ಕೆ 5 ವಿಕೆಟ್ ಉರುಳಿಸಿದ್ದು ಭಾರತದ ಬೌಲರ್ ಒಬ್ಬರ ಉತ್ತಮ ದಾಖಲೆಯಾಗಿದೆ. 2019ರಲ್ಲಿ ಮೊಹಮ್ಮದ್ ಶಮಿ 4 ವಿಕೆಟ್ ಪಡೆದಿದ್ದರು.
7. ಭಾರತ-ಪಾಕ್ ಪಂದ್ಯಗಳಲ್ಲಿ ಮೂವರು 5 ವಿಕೆಟ್ ಉರುಳಿಸಿದ್ದಾರೆ. ವೆಂಕಟೇಶ್ ಪ್ರಸಾದ್ (27/5, 1999), ವಹಾಬ್ ರಿಯಾಜ್ (46/5, 2011) ಮತ್ತು ಸೊಹೈಲ್ ಖಾನ್ (55/5, 2015).
8. ಭಾರತ-ಪಾಕ್ ಪಂದ್ಯಗಳಲ್ಲಿ ಮಾಜಿ ನಾಯಕ ಮಹೇಂದ್ರ ಸೀಂಗ್ ಧೋನಿ ಅತ್ಯುತ್ತಮ ಸಾಧನೆಗೈದ ವಿಕೆಟ್ ಕೀಪರ್ ಆಗಿದ್ದಾರೆ.
9. ಮಾಜಿ ಆಟಗಾರ ಅನಿಲ್ ಕುಂಬ್ಳೆ ಪಾಕಿಸ್ತಾನ ವಿರುದ್ಧ ಅತೀ ಹೆಚ್ಚು 5 ಕ್ಯಾಚ್ ಪಡೆದ ಫೀಲ್ಡರ್ ಆಗಿದ್ದಾರೆ.