ಬೆಂಗಳೂರು : ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದಿದೆ. ಈ ಮೂಲಕ ಟಿ20 ವಿಶ್ವ ಕಪ್ ಇತಿಹಾಸದ ಮುಖಾಮುಖಿಯಲ್ಲಿ 8-1 ರ ಮುನ್ನಡೆ ಪಡೆದುಕೊಂಡಿದೆ. ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತೀಯ ಬೌಲಿಂಗ್ ವಿಭಾಗ ಬ್ಯಾಟರ್ಗಳು ಪೇರಿಸಿದ್ದ 119 ರನ್ಗಳ ಸಾಧಾರಣ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿದೆ. ಈ ಭಾರೀ ಜಿದ್ದಾಜಿದ್ದಿನ ಹೋರಾಟಕ್ಕೆ 34,000 ಕ್ಕೂ ಹೆಚ್ಚು ಅಭಿಮಾನಿಗಳು ಸಾಕ್ಷಿಯಾಗಿದ್ದರು. ಬುಮ್ರಾ ಅವರ ಅಸಾಧಾರಣ ಪ್ರದರ್ಶನವು ಪಾಕಿಸ್ತಾನ ವಿರುದ್ಧದ ಭಾರತದ ಗೆಲುವಿನಲ್ಲಿ ನಿರ್ಣಾಯಕ ಅಂಶವೆಂದು ಸಾಬೀತಾಗಿದೆ. ಯಾಕೆಂದರೆ ಈ ಹಂತದಲ್ಲಿ ಪಾಕಿಸ್ತಾನದ ಗೆಲುವಿನ ನಿರೀಕ್ಷೆ ಶೇಕಡಾ 92 ರಷ್ಟು ಇದ್ದರೆ, ಭಾರತದ್ದು ಕೇವಲ 8% ಇತ್ತು. ಆದರೆ, ಫಲಿತಾಂಶ ಮಾತ್ರ ಉಲ್ಟಾ ಆಯಿತು. ವಿಶ್ವ ವೇದಿಕೆಯಲ್ಲಿ ನಾವೇ ಬಾಸ್ ಎಂಬುದನ್ನು ಭಾರತ ಮತ್ತೊಂದು ಬಾರಿ ಸಾಕ್ಷಿ ಸಮೇತ ತೋರಿಸಿತು.
ಭಾರತವು 119 ರನ್ಗಳ ಸಾಧಾರಣ ಮೊತ್ತವನ್ನು ರಕ್ಷಿಸಿದಾಗ, ಅವರ ಪ್ರತಿಭೆ ಅನಾವರಣಗೊಂಡಿತು. 3 ವಿಕೆಟ್ಗೆ 80 ರನ್ ಗಳಿಸಿದ್ದ ಪಾಕಿಸ್ತಾನವು ಅಂತಿಮವಾಗಿ 113 ರನ್ಗೆ ಸೀಮಿತಗೊಂಡಿದ್ದು ಭಾರತ ತಂಡದ ಸಾಮರ್ಥ್ಯಕ್ಕೆ ಸಾಕ್ಷಿ. ಈ ಪ್ರದರ್ಶನವು ಬುಮ್ರಾ ಅವರ ಶ್ರೇಷ್ಠ ವೃತ್ತಿಜೀವನದಲ್ಲಿ ಸ್ಮರಣೀಯ ಎನಿಸಿಕೊಳ್ಳಲಿದೆ. ಪಾಕ್ ತಂಡದ ರನ್ ಎಚ್ಚರಿಕೆಯಿಂದ ಪ್ರಾರಂಭವಾಗಿತ್ತು. ಮೊಹಮ್ಮದ್ ರಿಜ್ವಾನ್ 31 ರನ್ ಗಳಿಸಿ ಇನ್ನಿಂಗ್ಸ್ ಗೆ ಭದ್ರ ಬುನಾದಿ ಹಾಕಿದ್ದರು. ಆದಾಗ್ಯೂ, ನಿಯಮಿತವಾಗಿ ವಿಕೆಟ್ಗಳು ಕಳೆದುಕೊಂಡ ಕಾರಣ ಪಾಕಿಸ್ತಾನದ ವೇಗಕ್ಕೆ ಅಡ್ಡಿಯಾಯಿತು.
ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ವೇಗದ ಬೌಲಿಂಗ್ನಲ್ಲಿ ಮಾಸ್ಟರ್ ಕ್ಲಾಸ್ ಪ್ರದರ್ಶನ ನೀಡಿದ್ದರು. ನಿರ್ಣಾಯಕ ವಿಕೆಟ್ಗಳನ್ನು ಅವರು ಪಡೆದರು. 14 ರನ್ ವೆಚ್ಚದಲ್ಲಿ 3 ವಿಕೆಟ್ ಪಡೆದ ಅಸಾಧಾರಣ ಅಂಕಿಅಂಶಗಳೊಂದಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಸ್ಪೆಲ್ನಲ್ಲಿ 15 ಡಾಟ್ ಬಾಲ್ ಇದ್ದವು. ಇದರಿಂದಲೇ ಪಾಕ್ ತಂಡಕ್ಕೆ ಒತ್ತಡ ಎದುರಾಯಿತು.
ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದ್ದ ಪಾಕಿಸ್ತಾನ ಗೆಲುವಿನ ಕಡೆಗೆ ಸಾಗಿತ್ತ. ಮುಹಮ್ಮದ್ ರಿಜ್ವಾನ್, ಬಾಬರ್ ಅಜಮ್ ಮತ್ತು ಉಸ್ಮಾನ್ ಖಾನ್ ನಡುವಿನ ಅಗ್ರ ಮೂರು ಜೊತೆಯಾಟಗಳು ಮೆನ್ ಇನ್ ಗ್ರೀನ್ಗೆ ಆರಂಭಿಕ ಮುನ್ನಡೆ ತಂದುಕೊಟ್ಟಿತ್ತು. ಆದರೆ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಮಾರಕ ದಾಳಿಗೆ ಪಾಕಿಸ್ತಾನದ ಅವನತಿ ಶುರುವಾಯಿತು. ಪಾಕಿಸ್ತಾನ 11.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದ್ದಾಗ ಆ ತಂಡದ ಗೆಲುವಿನ ನಿರೀಕ್ಷೆ ಶೇ.92ರಷ್ಟಿತ್ತು. ಭಾರತದ ಅಭಿಮಾನಿಗಳೆಲ್ಲರೂ ಸೋಲು ನಿರೀಕ್ಷಿತ ಎಂದು ಅಂದುಕೊಂಡಿದ್ದರು. ಇನ್ನು ಮ್ಯಾಚ್ ನೋಡುವುದು ಬೇಡ ಎಂದು ಮಲಗಿದ್ದರು. ಆದರೆ, ಬೆಳಗ್ಗೆದ್ದು ನೋಡುವಾಗ ಭಾರತ ಗೆದ್ದಿತ್ತು. ಇದು ಭಾರತದ ಬೌಲರ್ಗಳ ಸಾಮರ್ಥ್ಯದಿಂದ ಎಂಬುದು ಅರ್ಥವಾಯಿತು. ಗೆದ್ದೇ ಗೆಲ್ಲುತ್ತೇವೆ ಎಂದು ಅಂದುಕೊಂಡಿದ್ದ ಪಾಕಿಸ್ತಾನದ ಅಭಿಮಾನಿಗಳ ಒಣ ಜಂಭ ಠುಸ್ ಎಂದಿತು.
ಸತತ ಎರಡು ಅವಮಾನ
ಪಾಕಿಸ್ತಾನ 12.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಆದರೆ 20 ಓವರ್ ಗಳಲ್ಲಿ ಆ ತಂಡ 7 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿ ಸೋತಿತು. ಅಲ್ಲದೆ ಗ್ರೂಪ್ ಹಂತದಲ್ಲಿ ಸತತ ಎರಡನೇ ಪಂದ್ಯವನ್ನು ಕಳೆದುಕೊಂಡಿತು. ಈ ಹಿಂದೆ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಹೀನಾಯವಾಗಿ ಸೂಪರ್ ಓವರ್ನಲ್ಲಿ ಸೋತಿತ್ತು. ನಮ್ಮದು ಬೆಸ್ಟ್ ಬೌಲಿಂಗ್ ಘಟಕ ಎಂದು ಹೇಳಿಕೊಳ್ಳುವ ಪಾಕ್ ಮತ್ತೊಮ್ಮೆ ಅವಮಾನಕ್ಕೆ ಒಳಗಾಯಿತು.
ಇದನ್ನೂ ಓದಿ:IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!
ಶೇ.8ರಷ್ಟು ಗೆಲುವಿನ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಭಾರತ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಟಿ20ಐನಲ್ಲಿ ಭಾರತ ಸಾಧಿಸಿದ ಅತ್ಯಂತ ಕಡಿಮೆ ಗುರಿ
120 ರನ್ – ಪಾಕ್ ವಿರುದ್ಧ , ನ್ಯೂಯಾರ್ಕ್ 2024 *
139 ರನ್, ಜಿಂಬಾಬ್ವೆ ವಿರುದ್ಧ ಹರಾರೆ 2016
145 – ಇಂಗ್ಲೆಂಡ್ ವಿರುದ್ಧ ನಾಗಪುರ- 2017
147 ರನ್- ಬಾಂಗ್ಲಾದೇಶ ವಿರುದ್ಧ- ಬೆಂಗಳೂರು 2016
ಟಿ20 ವಿಶ್ವಕಪ್ನಲ್ಲಿ ರಕ್ಷಿಸಿದ ಸಣ್ಣ ಮೊತ್ತಗಳು
120 ರನ್, ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ, ಚಟ್ಟೋಗ್ರಾಮ್ 2014
120 ರನ್- ಪಾಕಿಸ್ತಾನ ವಿರುದ್ಧ ಭಾರತ, ನ್ಯೂಯಾರ್ಕ್ 2024 *
124 ವೆಸ್ಟ್ ಇಂಡೀಸ್ ವಿರುದ್ಧ ಅಫಘಾನಿಸ್ತಾನ- ನಾಗ್ಪುರ 2016