ಅಹಮದಾಬಾದ್: ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿರುವ ಭಾರತ ಮತ್ತು ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಪಂದ್ಯ ನಡೆಯುವ ಅಹಮದಾಬಾದ್ನಲ್ಲಿ ಮೂರು ದಿನಗಳ ಮಳೆಯ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಪಂದ್ಯಕ್ಕೂ ಮಳೆಯ ಭೀತಿ ಕಾಡಿದೆ.
ಇತ್ತಂಡಗಳ ಮುಖಾಮುಖಿ ಶನಿವಾರ ವಿಶ್ವದ ಅತಿ ಹೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು ಏಳು ವರ್ಷಗಳ ಬಳಿಕ ಪಾಕಿಸ್ತಾನ ಭಾರತದ ನೆಲದಲ್ಲಿ ಆಡುತ್ತಿರುವ ಪಂದ್ಯವಾಗಿದೆ. ಈ ಪಂದ್ಯವನ್ನು ನೋಡಲು ಅಭಿಮಾನಿಗಳು ದುಪ್ಪಟ್ಟು ಹಣ ನೀಡಿ ಟಿಕೆಟ್ ಖರೀದಿಸಿದ್ದಾರೆ. ಸ್ಟೇಡಿಯಂ ಹೌಸ್ಫುಲ್ ಆಗುವುದರಲ್ಲಿ ಅನುಮಾನವೇ ಬೇಡ. ಆದರೆ ವರುಣನ ಅವಕೃಪೆ ಈ ಪಂದ್ಯದಕ್ಕೆ ಇದೆ. IMDಯ ಮುನ್ಸೂಚನೆ ಪ್ರಕಾರ ಅಹಮದಾಬಾದ್ ನಗರದಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ. ಸದ್ಯ ನಗರದಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇದೆ ಎಂದು ತಿಳಿಸಿದೆ.
ಮೀಸಲು ದಿನ ಇಲ್ಲ
ಏಷ್ಯಾ ಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಮೀಸಲು ದಿನ ಇರಿಸಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಆದರೆ ವಿಶ್ವಕಪ್ನಲ್ಲಿ ಯಾವುದೇ ಲೀಗ್ ಪಂದ್ಯಕ್ಕೂ ಮೀಸಲು ದಿನ ಇಲ್ಲ ಎಂದು ಐಸಿಸಿ ಸ್ಪಷ್ಟವಾಗಿ ತಿಳಿಸಿದೆ. ಐಸಿಸಿ ನಿಯಮದ ಪ್ರಕಾರ ಸೆಮಿಫೈನಲ್ನ ಎರಡು ಪಂದ್ಯಗಳಿಗೆ ಮತ್ತು ಫೈನಲ್ಗೆ ಮಾತ್ರ ಮೀಸಲು ದಿನ ಇರಲಿದೆ. ಒಂದೊಮ್ಮೆ ಇಂಡೋ-ಪಾಕ್ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತದೆ.
ಇದನ್ನೂ ಓದಿ IND vs PAK: ಭಾರತ-ಪಾಕ್ ಪಂದ್ಯಕ್ಕೆ ಕಂಚಿನ ಕಂಠದ ಕಾಮೆಂಟರಿ ಕಿಂಗ್ ಅಲಭ್ಯ
ಬಿಗಿ ಭದ್ರತೆಯಲ್ಲಿ ಪಾಕ್ ಅಭ್ಯಾಸ
ಅಹಮದಾಬಾದ್ಗೆ ಬಂದ ಪಾಕಿಸ್ತಾನ ಆಟಗಾರರಿಗೆ ಅತ್ಯಂತ ಭವ್ಯ ಸ್ವಾಗತ ಕೋರಲಾಯಿತು. ಇಲ್ಲಿನ ಸಾಂಸ್ಕೃತಿಕ ನೃತ್ಯ ಜತೆಗೆ ಮತ್ತು ಹೂವಿನ ಮಳೆಯನ್ನೇ ಸುರಿಸಿ ಸ್ವಾಗತಿಸಲಾಯಿತು. ಗುರುವಾರ ಪಾಕ್ ತಂಡದ ಆಟಗಾರರು ಭಾರಿ ಬಿಗಿ ಭದ್ರತೆಯಲ್ಲೇ ಸುಮಾರು 4 ಗಂಟೆಗಳ ಕಾಲ ಅಭ್ಯಾಸವನ್ನು ನಡೆಸಿದ್ದಾರೆ.
ಮೈದಾನದ ಸುತ್ತ ಕಟ್ಟೆಚ್ಚರ
ಪಂದ್ಯ ನಡೆಯುವ ಮೋದಿ ಕ್ರಿಕೆಟ್ ಸ್ಟೇಡಿಯಂ(narendra modi stadium) ಮೇಲೆ ದಾಳಿ ನಡೆಸುವುದಾಗಿ ಈಗಾಗಲೇ ಕೆಲವು ಅನಾಮಿಕ ಕರೆಗಳು ಕೂಡ ಬಂದಿವೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬೆದರಿಕೆ ಹಾಕಿದ್ದ ಎನ್ನಲಾಗಿರುವ ವ್ಯಕ್ತಿಯನ್ನು ಅಹಮದಾಬಾದ್ನ ಅಪರಾಧ ಪತ್ತೆ ದಳ ಬಂಧಿಸಿದೆ. ಈತ ತನ್ನ ಮೊಬೈಲ್‌ನಿಂದ ಬೆದರಿಕೆ ಇ-ಮೇಲ್ ಕಳುಹಿಸಿದ್ದ. ಆದರೆ ಈ ವ್ಯಕ್ತಿ ಯಾವುದೇ ಅಪರಾಧ ಹಿನ್ನೆಲೆಯನ್ನು ಹೊಂದಿಲ್ಲ. ಈತ ಮೂಲತಃ ಮಧ್ಯಪ್ರದೇಶದನಾಗಿದ್ದು ಗುಜರಾತ್‌ನ ರಾಜ್‌ಕೋಟ್ ಹೊರವಲಯದಲ್ಲಿ ವಾಸಿಸುತ್ತಿದ್ದ. ಸದ್ಯಕ್ಕೆ ಈತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ಸ್ಟಾರ್ ನಟರು ಭಾಗಿ
ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಕದನಕ್ಕೆ ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರಾದ ಬಾಲಿವುಡ್ನ ಅಮಿತಾಬ್ ಬಚ್ಚನ್(Amitabh Bachchan) ಮತ್ತು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್(Rajnikanath) ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಇವರ ಜತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಕೂಡ ಉಪಸ್ಥಿತರಿರಲಿದ್ದಾರೆ.