Site icon Vistara News

IND vs PAK: ಇಶಾನ್​-ಪಾಂಡ್ಯ ಅರ್ಧಶತಕ; ಪಾಕ್​ಗೆ ಸ್ಪರ್ಧಾತ್ಮಕ ಗುರಿ ನೀಡಿದ ಭಾರತ

Ishan Kishan and Hardik Pandya put together a half-century

ಪಲ್ಲೆಕೆಲೆ: ಮಳೆಯ ಅಡಚಣೆಯ ಮಧ್ಯೆಯೂ ಇಶಾನ್​ ಕಿಶನ್​(80) ಮತ್ತು ಉಪನಾಯಕ ಹಾರ್ದಿಕ್​ ಪಾಂಡ್ಯ(87) ಅವರು ನಡೆಸಿದ ದಿಟ್ಟ ಬ್ಯಾಟಿಂಗ್​ ಹೋರಾಟದಿಂದ ಟೀಮ್​ ಇಂಡಿಯಾ(IND vs PAK) ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಸ್ಪರ್ಧಾತ್ಮ ಮೊತ್ತವನ್ನು ಪೇರಿಸಿ ನಿಟ್ಟುಸಿರು ಬಿಟ್ಟಿದೆ. ಪಾಕ್ ಪರ ಶಾಹೀನ್​ ಅಫ್ರಿದಿ ಘಾತಕ ಬೌಲಿಂಗ್​ ನಡೆಸಿ 4 ವಿಕೆಟ್​ ಕಿತ್ತರು.

ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತ ಆರಂಭದಲ್ಲೇ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಮಧ್ಯಮ ಕ್ರಮಾಂಕದ ಎಡಗೈ ಆಟಗಾರ ಇಶಾನ್​ ಕಿಶನ್(Ishan Kishan)​ ಮತ್ತು ಹಾರ್ದಿಕ್ ಪಾಂಡ್ಯ(Hardik Pandya) ನಡೆಸಿದ ಬ್ಯಾಟಿಂಗ್​ ಹೋರಾಟದಿಂದ ನೆರವಿನಿಂದ 48.5 ಓವರ್​ಗಳಲ್ಲಿ 266 ರನ್​ಗಳಿಗೆ ಸರ್ವಪತನ ಕಂಡಿತು. ಪಾಕಿಸ್ತಾನ ಗೆಲುವಿಗೆ 267 ರನ್​ ಬಾರಿಸಬೇಕಿದೆ.

ರೋಹಿತ್​-ಕೊಹ್ಲಿ ಪೆವಿಲಿಯನ್​ ಪರೇಡ್​

ನಾಯಕ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿಯ ಮೇಲೆ ಈ ಪಂದ್ಯದಲ್ಲಿ ತಂಡ ಬೆಟ್ಟದಷ್ಟು ನಿರೀಕ್ಷೆ ಇಟ್ಟಿತ್ತು. ಆದರೆ ಉಭಯ ಆಟಗಾರರು ಅಗ್ಗಕ್ಕೆ ಔಟಾಗಿ ನಿರೀಕ್ಷೆಯನ್ನು ಹುಸಿಗೊಳಿಸಿದರು. ಶಾಹೀನ್​ ಅಫ್ರಿದಿಯ ಮೊದಲ ಓವರ್​ನಲ್ಲಿ ರೋಹಿತ್​ ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಇದೇ ವೇಳೆ ಮಳೆಯಿಂದ ಪಂದ್ಯ ಕೆಲ ಕಾಲ ಸ್ಥಗಿತಗೊಂಡಿತು. ಮಳೆ ನಿಂತು ಬ್ಯಾಟಿಂಗ್​ಗೆ ಬಂದ ರೋಹಿತ್​ ಅವರಲ್ಲಿ ಮೊದಲಿ ಬ್ಯಾಟಿಂಗ್​ ಉತ್ಸಾಹ ಹೆಚ್ಚು ಹೊತ್ತು ಇರಲಿಲ್ಲ. ಶಾಹೀನ್​ ಅಫ್ರಿದಿ ಅವರ ಓವರ್​ನಲ್ಲೇ ಕ್ಲೀನ್​ ಬೌಲ್ಡ್​ ಆದರು. ಈ ಮೂಲಕ ಅಫ್ರಿದಿ ವಿರುದ್ಧ ರೋಹಿತ್ ಮತ್ತೆ ವಿಫಲರಾದರು. ಕಳೆದ ವರ್ಷ ಆಸ್ಟ್ರೇಲಿಯಾ ಮತ್ತು ಇದಕ್ಕೂ ಮುನ್ನ ಯುಎಇಯಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿಯೂ ರೋಹಿತ್ ಅವರು​ ಅಫ್ರಿದಿ ಎಸೆತ ಎದುರಿಸಲಾಗದೆ ವಿಕೆಟ್​ ಕೈಚೆಲ್ಲಿದ್ದರು. ಇದು ಈ ಪಂದ್ಯದಲ್ಲಿಯೂ ಮರುಕಳಿಸಿತು.

ಎಡವಿದ ಕೊಹ್ಲಿ

ಕಳೆದ ವರ್ಷ ಮೆಲ್ಬೊರ್ನ್​ನಲ್ಲಿ ಪಾಕ್​ ವಿರುದ್ಧ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಸೋಲುವ ಸ್ಥಿತಿಯಲ್ಲಿದ್ದ ಭಾರತ ತಂಡಕ್ಕೆ ವಿರಾಟ್​ ಕೊಹ್ಲಿ ಅವರು ಏಕಾಂಗಿಯಾಗಿ ಹೋರಾಟ ನಡೆಸಿ ಸ್ಮರಣೀಯ ಗೆಲುವನ್ನು ತಂದುಕೊಟ್ಟಿದ್ದರು. ಹೀಗಾಗಿ ಅವರ ಮೇಲೆ ಈ ಪಂದ್ಯದಲ್ಲಿಯೂ ಹೆಚ್ಚಿನ ನಿರೀಕ್ಷಿ ಮತ್ತು ನಂಬಿಕೆ ಇರಿಸಲಾಗಿತ್ತು. ರೋಹಿತ್​ ವಿಕೆಟ್​ ಪತನದ ಬಳಿಕ ಕ್ರೀಸ್​ಗೆ ಬಂದ ಕೊಹ್ಲಿ ಬೌಂಡರಿ ಮೂಲಕವೇ ಖಾತೆ ತೆರೆದರು. ಆದರೆ ಅವರ ಆಟ ಈ ಬೌಂಡರಿಗೆ ಸಿಮಿತವಾಯಿತು. ಶಾಹೀನ್​ ಅಫ್ರಿದಿ ಎಸೆದ ಇನ್​ ಸ್ವಿಂಗ್​ ಮರ್ಮವನ್ನು ಅರಿಯುವಲ್ಲಿ ವಿಫಲವಾದ ಕೊಹ್ಲಿ ಇನ್​ಸೈಡ್​ ಎಡ್ಜ್​ ಆಗಿ ಬೌಲ್ಡ್​ ಆದರು. ಈ ಮೂಲಕ ಅಫ್ರಿದಿ ಭಾರತಕ್ಕೆ ಅವಳಿ ಆಘಾತವಿಕ್ಕಿದರು. ತಂಡದ ಮೊತ್ತ 27 ಆಗುವಷ್ಟರಲ್ಲಿ ಪ್ರಮುಖ 2 ವಿಕೆಟ್​ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು.

ಕೊಹ್ಲಿಯ ವಿಕೆಟ್​ ಪತನದ ಬಳಿಕ ಕ್ರೀಸ್​ಗೆ ಇಳಿದ ಅಯ್ಯರ್​ ಬಡಬಡನೆ 2 ಬೌಂಡರಿ ಬಾರಿಸಿ ಬಿರುಸಿನ ಬ್ಯಾಟಿಂಗ್​ ಮೂಲಕ ಪಾಕ್​ ಆಟಗಾರ ಮೇಲೆ ಸವಾರಿ ಮಾಡುವ ಸೂಚನೆ ನೀಡಿದರು. ಆದರೆ 14 ರನ್​ಗಳಿಸಿದ ವೇಳೆ ಇವರು ಕೂಡ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಿಗೆ ಭರವಸೆಯ ಆಟಗಾರ ಎಂದು ನಂಬಿಕೆ ಇರಿಸಿದ್ದ ಯುವ ಬ್ಯಾಟರ್​ ಶುಭಮನ್​ ಗಿಲ್​ ಕೂಡ ರನ್​ ಗಳಿಸಲು ಪರದಾಡಿ 10 ರನ್​ಗೆ ವಿಕೆಟ್​ ಕೈಚೆಲ್ಲಿದರು. ಗಿಲ್​ ಅವರ ಪರದಾಟ ಎಷ್ಟರ ಮಟ್ಟಿಗೆ ಇತ್ತೆಂದರೆ ಮೊದಲ ಬೌಂಡರಿ ಬಾರಿಸಲು 20 ಎಸೆತ ಎದುರಿಸಿದರು. ಆರಂಭಿಕ ಮೂರು ವಿಕೆಟ್​ ಕೂಡ ಬೌಲ್ಡ್​ ಆಗಿಯೇ ಪತನಗೊಂಡಿತು.

ಪಾಂಡ್ಯ-ಇಶಾನ್​ ಕೆಚ್ಚೆದೆಯ ಹೋರಾಟ

ಅಗ್ರ ಕ್ರಮಾಂಕದ ನಂಬುಗೆಯ ಬ್ಯಾಟರ್​ಗಳೆಲ್ಲ ಬಡಬಡನೆ ವಿಕೆಟ್​ ಒಪ್ಪಿಸಿ ಪೆಲಿಯನ್​ ಸೇರಿದಾಗ ಟೊಂಕ ಕಟ್ಟಿನಿಂತ ಇಶಾನ್​ ಕಿಶನ್​ ಮತ್ತು ಹಾರ್ದಿಕ್​ ಪಾಂಡ್ಯ ಉತ್ತಮ ಜತೆಯಾಟವೊಂದನ್ನು ನಿಭಾಯಿಸುವಲ್ಲಿ ಯಶಸ್ಸಿಯಾದರು. ಪಾಕಿಸ್ತಾನ ವಿರುದ್ಧ ಇದೇ ಮೊದಲ ಬಾರಿ ಆಡಿದ ಇಶಾನ್​ ಕಿಶನ್​ ವಿಚಲಿತರಾಗದೆ ಬ್ಯಾಟ್​ ಬೀಸಿ​ ಪಾಕ್ ಬೌಲರ್​ಗಳನ್ನು ಬೆಂಡೆತ್ತಿದರು. ಓವರ್​ಗೆ ಒಂದರಂತೆ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಅರ್ಧಶತಕ ಸಿಡಿಸಿ ಮಿಂಚಿದರು.

ಇದನ್ನೂ ಓದಿ IND vs PAK: ಏಕಾಏಕಿ ಭಾರತೀಯರಲ್ಲಿ ಕ್ಷಮೆಯಾಚಿಸಿದ ರೋಹಿತ್​ ಶರ್ಮ!; ಕಾರಣವೇನು?

138 ರನ್​ಗಳ ಜತೆಯಾಟ

ಮತ್ತೊಂದು ತುದಿಯಲ್ಲಿ ಇಶಾನ್​ ಕಿಶನ್​ಗೆ ಉತ್ತಮ ಸಾಥ್​ ನೀಡಿದ ಪಾಂಡ್ಯ ಕೂಡ ಪಾಕ್​ ಬೌಲರ್​ಗಳ ದಾಳಿಗೆ ಎದೆಯೊಡ್ಡಿ ನಿಲ್ಲುವಲ್ಲಿ ಯಶಸ್ವಿಯಾದರು. ಅವರು ಕೂಡ ಅರ್ಧಶತಕ ಬಾರಿಸಿದರು. ಸರಿ ಸುಮಾರು 40 ಓವರ್​ ತನಕ ಬ್ಯಾಟಿಂಗ್​ ಕಾಯ್ದುಕೊಂಡ ಉಭಯ ಆಟಗಾರರು 6ನೇ ವಿಕೆಟ್​ಗೆ 138 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. 82 ರನ್​ ಗಳಿಸಿದ್ದ ವೇಳೆ ಸಿಕ್ಸರ್​ ಬಾರಿಸುವ ಯತ್ನದಲ್ಲಿ ಎಡವಿದ ಇಶಾನ್​ ಕಿಶನ್​ ಅವರು ಬಾಬರ್​ ಅಜಂಗೆ ಕ್ಯಾಚ್​ ನೀಡಿ ಔಟಾದರು. ಅವರ ಈ ಅರ್ಧಶತಕದ ಇನಿಂಗ್ಸ್​ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್​ ದಾಖಲಾಯಿತು. ಒಂದೊಮ್ಮೆ ಪಾಂಡ್ಯ ಮತ್ತು ಇಶಾನ್​ ಕಿಶನ್​ ತಂಡಕ್ಕೆ ಆಸರೆಯಾಗದೇ ಹೋಗಿದ್ದರೆ ತಂಡ 150 ಗಡಿ ದಾಟುವುದು ಕೂಡ ಕಷ್ಟ ಎನ್ನುವಂತಿತ್ತು.

ಶಾರ್ದೂಲ್​ ವಿಫಲ

ಇಶಾನ್​ ಕಿಶನ್​ ಅವರು ವಿಕೆಟ್​ ಕೈಚೆಲ್ಲಿದ ಬಳಿಕ ಮೂರು ರನ್​ ಒಟ್ಟುಗೂಡುವಷ್ಟರಲ್ಲಿ ಹಾರ್ದಿಕ್​ ಪಾಂಡ್ಯ ಕೂಡ ವಿಕೆಟ್​ ಒಪ್ಪಿಸಿದರು. 90 ಎಸೆತ ಎದುರಿಸಿದ ಪಾಂಡ್ಯ 7 ಬೌಂಡರಿ ಮತ್ತು ಒಂದು ಸಿಕ್ಸರ್​ ನೆರವಿನಿಂದ 87 ರನ್​​ ಗಳಿಸಿದರು. ಅಂತಿಮ ಹಂತದಲ್ಲಿ ಜಸ್​ಪ್ರೀತ್​ ಬುಮ್ರಾ 16 ರನ್​ಗಳಿಸಿದರು. ಉಳಿದ ಎಲ್ಲ ಬ್ಯಾಟರ್​ಗಳು ಕಳಪೆ ಪ್ರದರ್ಶನ ತೋರಿದರು. ಅನುಭವಿ ಬೌಲರ್​ ಮೊಹಮ್ಮದ್​ ಶಮಿ ಅವರನ್ನು ಕೈಬಿಟ್ಟು ಹೆಚ್ಚುವರಿ ಬ್ಯಾಟಿಂಗ್​ಗೋಸ್ಕರ ತಂಡಕ್ಕೆ ಆಯ್ಕೆ ಮಾಡಿದ ಶಾರ್ದೂಲ್​ ಠಾಕೂರ್​ ಕೇವಲ ಮೂರು ರನ್​ ಗಳಿಸಿ ವೈಫಲ್ಯ ಕಂಡರು.

Exit mobile version