ಪಲ್ಲೆಕೆಲೆ: ಸಾಂಪ್ರದಾಯಿಕ ಹಾಗೂ ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ರೋಚಕ ಕ್ರಿಕೆಟ್ ಹಣಾಹಣಿಗೆ ಕ್ಷಣಗಣನೆ ಶುರುವಾಗಿದೆ. ಶನಿವಾರ ಏಷ್ಯಾ ಕಪ್(Asia Cup 2023) ಪಂದ್ಯಾವಳಿಯಲ್ಲಿ ರೋಹಿತ್ ಶರ್ಮ(Rohit Sharma) ಮತ್ತು ಬಾಬರ್ ಅಜಂ(Babar Azam) ಪಡೆಗಳು ಪರಸ್ಪರ ಎದುರಾಗಲಿವೆ. ಈ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಸಂಚಲನ ಮೂಡಲಿದೆ. ಆದರೆ ಈ ಹೈವೋಲ್ಟೆಜ್ ಕದನಕ್ಕೆ ವರಣ ದೇವನ ಭಯವೂ ಎದುರಾಗಿದೆ.
ಭಾರತಕ್ಕೆ ಮೊದಲ ಪಂದ್ಯ
ಇದು ಟೀಮ್ ಇಂಡಿಯಾಕ್ಕೆ ಕೂಟದ ಆರಂಭಿಕ ಪಂದ್ಯವಾದರೂ ಫೈನಲ್ ಸ್ಪರ್ಧೆಗೂ ಮಿಗಿಲಾದ ಕೌತುಕ, ರೋಮಾಂಚನ, ನಿರೀಕ್ಷೆಗಳನ್ನು ಮೂಡಿಸಿದೆ. ಏಕೆಂದರೆ ಎದುರಾಳಿ ಪಾಕಿಸ್ತಾನ. ಸ್ವಾರಸ್ಯವೆಂದರೆ, ಈವರೆಗಿನ 15 ಏಷ್ಯಾ ಕಪ್ ಕೂಟಗಳಲ್ಲಿ ಒಮ್ಮೆಯೂ ಭಾರತ-ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖೀ ಆಗಿಲ್ಲ. ಭಾರತ ಅತ್ಯಧಿಕ 7 ಸಲ, ಪಾಕಿಸ್ತಾನ 2 ಸಲ ಚಾಂಪಿಯನ್ ಆಗಿದಿದ್ದರೂ ಎರಡೂ ತಂಡಗಳು ಫೈನಲ್‌ನಲ್ಲಿ ಎದುರಿಸಿದ್ದು ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು! ಈ ಸಲವಾದರೂ ಭಾರತ-ಪಾಕಿಸ್ತಾನ ಪ್ರಶಸ್ತಿ ಸಮರದಲ್ಲಿ ಎದುರಾಗಬಹುದೇ ಎಂಬುದು ಅಭಿಮಾನಿಗಳ ಕುತೂಹಲ.
ಅಪಾಯಕಾರಿ ಪಾಕ್
ಏಷ್ಯಾಕಪ್ನಲ್ಲಿ ಭಾರತದ ದಾಖಲೆ ಉತ್ತಮವಾಗಿದೆ. ಅಂಕಿ ಅಂಶ ಪ್ರಕಾರ ಪಾಕಿಸ್ತಾನ ವಿರುದ್ಧ ಭಾರತವೇ ಗೆಲ್ಲುವೆ ಫೇವರಿಟ್ ಆಗಿದೆ. ಉಭಯ ತಂಡಗಳು ಈ ವರೆಗೆ ಒಟ್ಟು ಆಡಿದ 17 ಪಂದ್ಯಗಳಲ್ಲಿ ಭಾರತ 9 ಜಯ ಒಲಿಸಿಕೊಂಡಿದೆ. ಪಾಕ್ 6 ಜಯ ಸಾಧಿಸಿದೆ. 2 ಪಂದ್ಯ ರದ್ದುಗೊಂಡಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಭಾರತ ಮುಂದಿದ್ದರೂ ಪಾಕ್ ಸವಾಲನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳಬಾರದು. ಕಳೆದ ವರ್ಷ ಸೂಪರ್-4 ಪಂದ್ಯದಲ್ಲಿ ಪಾಕ್ ತಂಡ ಭಾರತಕ್ಕೆ ಆಘಾತವಿಕ್ಕಿತ್ತು. ಅಲ್ಲದೆ ಪ್ರಸ್ತುತ ಏಕದಿನ ಕ್ರಿಕೆಟ್ನ ನಂ.1 ತಂಡವಾಗಿಯೂ ಪಾಕ್ ಗುರುತಿಸಿಕೊಂಡಿದೆ. ಹೀಗಾಗಿ ಭಾರತ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು.
ಇದನ್ನೂ ಓದಿ IND vs PAK: ಇಂಡೋ-ಪಾಕ್ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
ಕೊಹ್ಲಿ-ರೋಹಿತ್, ಬುಮ್ರಾ ಮೇಲೆ ಬೆಟ್ಟದಷ್ಟು ನಿರೀಕ್ಷೆ
ಇನ್ನು ಒಂದು ತಿಂಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಹೀಗಾಗಿ ಈ ಬಾರಿ ಏಷ್ಯಾಕಪ್ 50 ಓವರ್ನಲ್ಲಿ ನಡೆಯುತ್ತಿದೆ. ಭಾರತ ಇಲ್ಲಿ ತೋರುವ ಪ್ರದರ್ಶನ ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ. ಅನುಭವಿ ಆಟಗಾರ ಕೆ.ಎಲ್ ಸಂಪೂರ್ಣ ಫಿಟ್ ಆಗದೆ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಬೆನ್ನು ನೋವಿನಿಂದ ಚೇತರಿಕೆ ಕಂಡು 11 ತಿಂಗಳ ಬಳಿಕ ಕ್ರಿಕೆಟ್ಗೆ ಮರಳಿದ ಜಸ್ಪ್ರೀತ್ ಬುಮ್ರಾ ತಂಡ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ. ಇವರ ಪ್ರದರ್ಶನ ನಿರ್ಣಾಯಕ.
ಸೂರ್ಯಕುಮಾರ್ಗೆ ಅವಕಾಶ ಕಷ್ಟ
ಆರಂಭಿಕರಾಗಿ ಈಗಾಗಲೇ ಯಶಸ್ಸು ಕಂಡಿರುವ ನಾಯಕ ರೋಹಿತ್ ಮತ್ತು ಯುವ ಆಟಗಾರ ಶುಭಮನ್ ಗಿಲ್ ಭಾರತದ ಇನಿಂಗ್ಸ್ ಆರಂಭಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬೆನ್ನು ನೋವಿನಿಂದ ಚೇತರಿಕೆ ಕಂಡಿರುವ ಶ್ರೇಯಸ್ ಅಯ್ಯರ್ ಆಡುವುದು ಖಚಿತವಾಗಿದೆ. 5ನೇ ಕ್ರಮಾಂಕ ಉಪನಾಯಕ ಹಾರ್ದಿಕ್ ಪಾಂಡ್ಯ ಪಾಲಾದರೆ, 6ನೇ ಕ್ರಮಾಂಕ ಇಶಾನ್ ಕಿಶನ್ ಮತ್ತು 7ನೇ ಕ್ರಮಾಂಕ ಆಲ್ರೌಂಡರ್ ರವೀಂದ್ರ ಜಡೇಜಾಗೆ ಸಿಗಲಿದೆ. ಇನ್ನುಳಿದ ಸ್ಥಾನಗಳು ಬೌಲರ್ಗಳ ಪಾಲಾಗುದರಿಂದ ಸೂರ್ಯಕುಮಾರ್ಗೆ ಅವಕಾಶ ಸಿಗುವುದು ಕಷ್ಟ.
ಇದನ್ನೂ ಓದಿ Asia Cup 2023: ಭಾರತ-ಪಾಕ್ ಏಷ್ಯಾಕಪ್ ಟೂರ್ನಿಯ ರೆಕಾರ್ಡ್ ಹೀಗಿದೆ
ಬಾಬರ್ ಪಡೆ ಬಲಿಷ್ಠ
ಬಾಬರ್ ಅಜಂ ಪಡೆ ಎಲ್ಲ ವಿಭಾಗಗಳಲ್ಲೂ ಬಲಿಷ್ಠ ಆಟಗಾರರನ್ನು ನೆಚ್ಚಿಕೊಂಡಿದೆ. ಬಾಬರ್ ಕೂಟ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಇದಕ್ಕೆ ನೇಪಾಳ ವಿರುದ್ಧದ ಪಂದ್ಯವೇ ಉತ್ತಮ ಸಾಕ್ಷಿ. ಇದಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲ ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್ ಹಾಗೂ ಆರಂಭಿಕ ಆಟಗಾರ ಫಖಾರ್ ಜಮಾನ್ ಅಂತಿಮ ಹಂತದಲ್ಲಿ ಶದಾಬ್ ಖಾನ್ ಬೌಲಿಂಗ್ನಲ್ಲಿ ಅದರಲ್ಲೂ ಹೊಸ ಚೆಂಡಿನಲ್ಲಿ ಎರಡೂ ಕಡೆ ಸ್ವಿಂಗ್ ಮಾಡಬಲ್ಲ ಘಾತಕ ವೇಗಿ ಶಾಹೀನ್ ಅಫ್ರಿದಿ, ಯುವ ವೇಗಿ ನಸೀಮ್ ಶಾ,ಹ್ಯಾರಿಸ್ ರಾವುಫ್ ಅವರನ್ನೊಳಗೊಂಡ ಪಾಕ್ ಅತ್ಯಂತ ಸಮರ್ಥವಾಗಿ ಕಾಣಿಸಿಕೊಂಡಿದೆ. ಆದರೆ ಶನಿವಾರ ಯಾವ ತಂಡ ಉತ್ತಮ ಸಾಧನೆಗೈಯುತ್ತದೋ, ಯಾವ ತಂಡದ ಅದೃಷ್ಟ ಖುಲಾಯಿಸುತ್ತದೋ ಅದಕ್ಕೆ ಗೆಲುವು ಒಲಿಯಲಿದೆ. ಈ ಅದೃಷ್ಟ ಭಾರತದ್ದೇ ಆಗಲಿ ಎಂಬುದು ಎಲ್ಲರ ಹಾರೈಕೆ.