Site icon Vistara News

IND vs PAK: ಪಂದ್ಯ ರದ್ದು; ಸೂಪರ್​-4 ಪ್ರವೇಶಿಸಿದ ಪಾಕಿಸ್ತಾನ; ಭಾರತದ ಹಾದಿ…

The match has been called off

ಪಲ್ಲೆಕೆಲೆ: ನಿರೀಕ್ಷೆಯಂತೆ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಶನಿವಾರದ ಏಷ್ಯಾಕಪ್(Asia cup 2023)​ ಪಂದ್ಯ ಮಳೆಗೆ ಆಹುತಿಯಾಗಿದೆ. ಭಾರತ ತನ್ನ ಪಾಲಿನ ಬ್ಯಾಟಿಂಗ್​ ಇನಿಂಗ್ಸ್​ ಆಡಿದರೂ ಪಾಕಿಸ್ತಾನದ ಬ್ಯಾಟಿಂಗ್​ ಇನಿಂಗ್ಸ್​ಗೆ ಮಳೆ ಅವಕಾಶವೇ ನೀಡಲಿಲ್ಲ. 10 ಗಂಟೆಯ ವರೆಗೆ ಕಾದ ಪಂದ್ಯದ ರೆಫ್ರಿಗಳು ಮಳೆ ನಿಲ್ಲುವ ಸೂಚನೆ ಇಲ್ಲದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಿದರು. ಉಭಯ ತಂಡಕ್ಕೂ ತಲಾ ಒಂದು ಅಂಕ ನೀಡಲಾಯಿತು. ನೇಪಾಳ ವಿರುದ್ಧ ಮೊದಲ ಪಂದ್ಯ ಗೆದ್ದ ಪಾಕಿಸ್ತಾನ ಒಟ್ಟು ಮೂರು ಅಂಕದೊಂದಿಗೆ ‘ಎ’ ಗುಂಪಿನಿಂದ ಸೂಪರ್​-4ಗೆ ಲಗ್ಗೆಯಿಟ್ಟಿತು. ಭಾರತ ತನ್ನ ಅಂತಿಮ ಪಂದ್ಯವನ್ನು ಸೋಮವಾರ ನೇಪಾಳ ವಿರುದ್ಧ ಇದೇ ಸ್ಟೇಡಿಯಂನಲ್ಲಿ ಆಡಲಿದೆ.

ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತ ಆರಂಭದಲ್ಲೇ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಇಶಾನ್​ ಕಿಶನ್​(80) ಮತ್ತು ಉಪನಾಯಕ ಹಾರ್ದಿಕ್​ ಪಾಂಡ್ಯ(87) ಅವರು ನಡೆಸಿದ ದಿಟ್ಟ ಬ್ಯಾಟಿಂಗ್​ ಹೋರಾಟದ ನೆರವಿನಿಂದ ಭಾರತ 48.5 ಓವರ್​ಗಳಲ್ಲಿ 266 ರನ್​ಗಳಿಗೆ ಸರ್ವಪತನ ಕಂಡಿತು. ಪಾಕ್ ಪರ ಶಾಹೀನ್​ ಅಫ್ರಿದಿ ಘಾತಕ ಬೌಲಿಂಗ್​ ನಡೆಸಿ 4 ವಿಕೆಟ್​ ಕಿತ್ತು ಮಿಂಚಿದರು.

ಬಿಡುವು ನೀಡದ ಮಳೆ

ಭಾರತದ ಇನಿಂಗ್ಸ್​ ಮುಗಿಯುತ್ತಿದಂತೆ ಮಳೆಯೂ ಜೋರಾಗಿ ಸುರಿಯಿತು. ಒಂದು ಹಂತದಲ್ಲಿ ಮಳೆ ಬಿಡು ನೀಡಿತ್ತಾದರೂ ಮೈದಾನಕ್ಕೆ ಹಾಸಿದ್ದ ಕವರ್​ಗಳನ್ನು ತೆಗೆಯುವಷ್ಟರಲ್ಲಿ ಮತ್ತೆ ಜೋರಾಗಿ ಮಳೆ ಸುರಿಯಿತು. ಅಂತಿಮವಾಗಿ ಉಭಯ ತಂಡಗಳ ನಾಯಕರು ಮತ್ತು ಕೋಚ್​ಗಳ ಮಧ್ಯೆ ಮಾತುಕತೆ ನಡೆಸಿದ ರೆಫ್ರಿಗಳು ಪಂದ್ಯವನ್ನು ರದ್ದು ಎಂದು ಘೋಷಿಸಿದರು.

ಪಾಂಡ್ಯ-ಇಶಾನ್​ ಕೆಚ್ಚೆದೆಯ ಹೋರಾಟ

ಅಗ್ರ ಕ್ರಮಾಂಕದ ನಂಬುಗೆಯ ಬ್ಯಾಟರ್​ಗಳೆಲ್ಲ ಬಡಬಡನೆ ವಿಕೆಟ್​ ಒಪ್ಪಿಸಿ ಪೆಲಿಯನ್​ ಸೇರಿದಾಗ ಟೊಂಕ ಕಟ್ಟಿನಿಂತ ಇಶಾನ್​ ಕಿಶನ್​ ಮತ್ತು ಹಾರ್ದಿಕ್​ ಪಾಂಡ್ಯ ಉತ್ತಮ ಜತೆಯಾಟವೊಂದನ್ನು ನಿಭಾಯಿಸುವಲ್ಲಿ ಯಶಸ್ಸಿಯಾದರು. ಪಾಕಿಸ್ತಾನ ವಿರುದ್ಧ ಇದೇ ಮೊದಲ ಬಾರಿ ಆಡಿದ ಇಶಾನ್​ ಕಿಶನ್​ ವಿಚಲಿತರಾಗದೆ ಬ್ಯಾಟ್​ ಬೀಸಿ​ ಪಾಕ್ ಬೌಲರ್​ಗಳನ್ನು ಬೆಂಡೆತ್ತಿದರು. ಓವರ್​ಗೆ ಒಂದರಂತೆ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಅರ್ಧಶತಕ ಸಿಡಿಸಿ ಮಿಂಚಿದರು.

138 ರನ್​ಗಳ ಜತೆಯಾಟ

ಮತ್ತೊಂದು ತುದಿಯಲ್ಲಿ ಇಶಾನ್​ ಕಿಶನ್​ಗೆ ಉತ್ತಮ ಸಾಥ್​ ನೀಡಿದ ಪಾಂಡ್ಯ ಕೂಡ ಪಾಕ್​ ಬೌಲರ್​ಗಳ ದಾಳಿಗೆ ಎದೆಯೊಡ್ಡಿ ನಿಲ್ಲುವಲ್ಲಿ ಯಶಸ್ವಿಯಾದರು. ಅವರು ಕೂಡ ಅರ್ಧಶತಕ ಬಾರಿಸಿದರು. ಸರಿ ಸುಮಾರು 40 ಓವರ್​ ತನಕ ಬ್ಯಾಟಿಂಗ್​ ಕಾಯ್ದುಕೊಂಡ ಉಭಯ ಆಟಗಾರರು 6ನೇ ವಿಕೆಟ್​ಗೆ 138 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. 82 ರನ್​ ಗಳಿಸಿದ್ದ ವೇಳೆ ಸಿಕ್ಸರ್​ ಬಾರಿಸುವ ಯತ್ನದಲ್ಲಿ ಎಡವಿದ ಇಶಾನ್​ ಕಿಶನ್​ ಅವರು ಬಾಬರ್​ ಅಜಂಗೆ ಕ್ಯಾಚ್​ ನೀಡಿ ಔಟಾದರು. ಅವರ ಈ ಅರ್ಧಶತಕದ ಇನಿಂಗ್ಸ್​ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್​ ದಾಖಲಾಯಿತು. ಒಂದೊಮ್ಮೆ ಪಾಂಡ್ಯ ಮತ್ತು ಇಶಾನ್​ ಕಿಶನ್​ ತಂಡಕ್ಕೆ ಆಸರೆಯಾಗದೇ ಹೋಗಿದ್ದರೆ ತಂಡ 150 ಗಡಿ ದಾಟುವುದು ಕೂಡ ಕಷ್ಟ ಎನ್ನುವಂತಿತ್ತು.

ರೋಹಿತ್​-ಕೊಹ್ಲಿ ಪೆವಿಲಿಯನ್​ ಪರೇಡ್​

ಭಾರತ ಪರ ನಾಯಕ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿಯ ಮೇಲೆ ಈ ಪಂದ್ಯದಲ್ಲಿ ತಂಡ ಬೆಟ್ಟದಷ್ಟು ನಿರೀಕ್ಷೆ ಇಟ್ಟಿತ್ತು. ಆದರೆ ಉಭಯ ಆಟಗಾರರು ಅಗ್ಗಕ್ಕೆ ಔಟಾಗಿ ನಿರೀಕ್ಷೆಯನ್ನು ಹುಸಿಗೊಳಿಸಿದರು. ಶಾಹೀನ್​ ಅಫ್ರಿದಿಯ ಮೊದಲ ಓವರ್​ನಲ್ಲಿ ರೋಹಿತ್​ ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಇದೇ ವೇಳೆ ಮಳೆಯಿಂದ ಪಂದ್ಯ ಕೆಲ ಕಾಲ ಸ್ಥಗಿತಗೊಂಡಿತು. ಮಳೆ ನಿಂತು ಬ್ಯಾಟಿಂಗ್​ಗೆ ಬಂದ ರೋಹಿತ್​ ಅವರಲ್ಲಿ ಮೊದಲಿ ಬ್ಯಾಟಿಂಗ್​ ಉತ್ಸಾಹ ಹೆಚ್ಚು ಹೊತ್ತು ಇರಲಿಲ್ಲ. ಶಾಹೀನ್​ ಅಫ್ರಿದಿ ಅವರ ಓವರ್​ನಲ್ಲೇ ಕ್ಲೀನ್​ ಬೌಲ್ಡ್​ ಆದರು. ಈ ಮೂಲಕ ಅಫ್ರಿದಿ ವಿರುದ್ಧ ರೋಹಿತ್ ಮತ್ತೆ ವಿಫಲರಾದರು. ಕಳೆದ ವರ್ಷ ಆಸ್ಟ್ರೇಲಿಯಾ ಮತ್ತು ಇದಕ್ಕೂ ಮುನ್ನ ಯುಎಇಯಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿಯೂ ರೋಹಿತ್ ಅವರು​ ಅಫ್ರಿದಿ ಎಸೆತ ಎದುರಿಸಲಾಗದೆ ವಿಕೆಟ್​ ಕೈಚೆಲ್ಲಿದ್ದರು. ಇದು ಈ ಪಂದ್ಯದಲ್ಲಿಯೂ ಮರುಕಳಿಸಿತು.

ಎಡವಿದ ಕೊಹ್ಲಿ

ಕಳೆದ ವರ್ಷ ಮೆಲ್ಬೊರ್ನ್​ನಲ್ಲಿ ಪಾಕ್​ ವಿರುದ್ಧ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಸೋಲುವ ಸ್ಥಿತಿಯಲ್ಲಿದ್ದ ಭಾರತ ತಂಡಕ್ಕೆ ವಿರಾಟ್​ ಕೊಹ್ಲಿ ಅವರು ಏಕಾಂಗಿಯಾಗಿ ಹೋರಾಟ ನಡೆಸಿ ಸ್ಮರಣೀಯ ಗೆಲುವನ್ನು ತಂದುಕೊಟ್ಟಿದ್ದರು. ಹೀಗಾಗಿ ಅವರ ಮೇಲೆ ಈ ಪಂದ್ಯದಲ್ಲಿಯೂ ಹೆಚ್ಚಿನ ನಿರೀಕ್ಷಿ ಮತ್ತು ನಂಬಿಕೆ ಇರಿಸಲಾಗಿತ್ತು. ರೋಹಿತ್​ ವಿಕೆಟ್​ ಪತನದ ಬಳಿಕ ಕ್ರೀಸ್​ಗೆ ಬಂದ ಕೊಹ್ಲಿ ಬೌಂಡರಿ ಮೂಲಕವೇ ಖಾತೆ ತೆರೆದರು. ಆದರೆ ಅವರ ಆಟ ಈ ಬೌಂಡರಿಗೆ ಸಿಮಿತವಾಯಿತು. ಶಾಹೀನ್​ ಅಫ್ರಿದಿ ಎಸೆದ ಇನ್​ ಸ್ವಿಂಗ್​ ಮರ್ಮವನ್ನು ಅರಿಯುವಲ್ಲಿ ವಿಫಲವಾದ ಕೊಹ್ಲಿ ಇನ್​ಸೈಡ್​ ಎಡ್ಜ್​ ಆಗಿ ಬೌಲ್ಡ್​ ಆದರು. ಈ ಮೂಲಕ ಅಫ್ರಿದಿ ಭಾರತಕ್ಕೆ ಅವಳಿ ಆಘಾತವಿಕ್ಕಿದರು. ತಂಡದ ಮೊತ್ತ 27 ಆಗುವಷ್ಟರಲ್ಲಿ ಪ್ರಮುಖ 2 ವಿಕೆಟ್​ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು.

ಇದನ್ನೂ ಓದಿ IND vs PAK: ಏಕಾಏಕಿ ಭಾರತೀಯರಲ್ಲಿ ಕ್ಷಮೆಯಾಚಿಸಿದ ರೋಹಿತ್​ ಶರ್ಮ!; ಕಾರಣವೇನು?

ಕೊಹ್ಲಿಯ ವಿಕೆಟ್​ ಪತನದ ಬಳಿಕ ಕ್ರೀಸ್​ಗೆ ಇಳಿದ ಅಯ್ಯರ್​ ಬಡಬಡನೆ 2 ಬೌಂಡರಿ ಬಾರಿಸಿ ಬಿರುಸಿನ ಬ್ಯಾಟಿಂಗ್​ ಮೂಲಕ ಪಾಕ್​ ಆಟಗಾರ ಮೇಲೆ ಸವಾರಿ ಮಾಡುವ ಸೂಚನೆ ನೀಡಿದರು. ಆದರೆ 14 ರನ್​ಗಳಿಸಿದ ವೇಳೆ ಇವರು ಕೂಡ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಿಗೆ ಭರವಸೆಯ ಆಟಗಾರ ಎಂದು ನಂಬಿಕೆ ಇರಿಸಿದ್ದ ಯುವ ಬ್ಯಾಟರ್​ ಶುಭಮನ್​ ಗಿಲ್​ ಕೂಡ ರನ್​ ಗಳಿಸಲು ಪರದಾಡಿ 10 ರನ್​ಗೆ ವಿಕೆಟ್​ ಕೈಚೆಲ್ಲಿದರು. ಗಿಲ್​ ಅವರ ಪರದಾಟ ಎಷ್ಟರ ಮಟ್ಟಿಗೆ ಇತ್ತೆಂದರೆ ಮೊದಲ ಬೌಂಡರಿ ಬಾರಿಸಲು 20 ಎಸೆತ ಎದುರಿಸಿದರು. ಆರಂಭಿಕ ಮೂರು ವಿಕೆಟ್​ ಕೂಡ ಬೌಲ್ಡ್​ ಆಗಿಯೇ ಪತನಗೊಂಡಿತು.

ಶಾರ್ದೂಲ್​ ವಿಫಲ

ಇಶಾನ್​ ಕಿಶನ್​ ಅವರು ವಿಕೆಟ್​ ಕೈಚೆಲ್ಲಿದ ಬಳಿಕ ಮೂರು ರನ್​ ಒಟ್ಟುಗೂಡುವಷ್ಟರಲ್ಲಿ ಹಾರ್ದಿಕ್​ ಪಾಂಡ್ಯ ಕೂಡ ವಿಕೆಟ್​ ಒಪ್ಪಿಸಿದರು. 90 ಎಸೆತ ಎದುರಿಸಿದ ಪಾಂಡ್ಯ 7 ಬೌಂಡರಿ ಮತ್ತು ಒಂದು ಸಿಕ್ಸರ್​ ನೆರವಿನಿಂದ 87 ರನ್​​ ಗಳಿಸಿದರು. ಅಂತಿಮ ಹಂತದಲ್ಲಿ ಜಸ್​ಪ್ರೀತ್​ ಬುಮ್ರಾ 16 ರನ್​ಗಳಿಸಿದರು. ಉಳಿದ ಎಲ್ಲ ಬ್ಯಾಟರ್​ಗಳು ಕಳಪೆ ಪ್ರದರ್ಶನ ತೋರಿದರು. ಅನುಭವಿ ಬೌಲರ್​ ಮೊಹಮ್ಮದ್​ ಶಮಿ ಅವರನ್ನು ಕೈಬಿಟ್ಟು ಹೆಚ್ಚುವರಿ ಬ್ಯಾಟಿಂಗ್​ಗೋಸ್ಕರ ತಂಡಕ್ಕೆ ಆಯ್ಕೆ ಮಾಡಿದ ಶಾರ್ದೂಲ್​ ಠಾಕೂರ್​ ಕೇವಲ ಮೂರು ರನ್​ ಗಳಿಸಿ ವೈಫಲ್ಯ ಕಂಡರು.

Exit mobile version