ಅಹಮದಾಬಾದ್: ಶನಿವಾರ ನಡೆಯುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ವಿಶ್ವಕಪ್ ಪಂದ್ಯಕ್ಕೆ ಉಭಯ ತಂಡಗಳು ಈಗಾಗಲೇ ಅಹಮದಾಬಾದ್(Ahmedabad) ತಲುಪಿದ್ದು ಅಭ್ಯಾಸವನ್ನು ಆರಂಭಿಸಿವೆ. ಆದರೆ ಮೈದಾನ ಸುತ್ತಲೂ ಭದ್ರತಾ ಪಡೆಗಳು 24×7 ಕಟ್ಟೆಚ್ಚರ ವಹಿಸಿದ್ದಾರೆ. ಗುರುವಾರ ಪಾಕ್ ತಂಡದ ಆಟಗಾರರು ಭಾರಿ ಬಿಗಿ ಭದ್ರತೆಯಲ್ಲೇ ಅಭ್ಯಾಸವನ್ನು ನಡೆಸಿದ್ದಾರೆ.
ಬಾಂಬ್ ದಾಳಿಯ ಬೆದರಿಕೆ
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ(narendra modi stadium) ಮೇಲೆ ದಾಳಿ ನಡೆಸುವುದಾಗಿ ಈಗಾಗಲೇ ಕೆಲವು ಅನಾಮಿಕ ಕರೆಗಳು ಕೂಡ ಬಂದಿವೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬೆದರಿಕೆ ಹಾಕಿದ್ದ ಎನ್ನಲಾಗಿರುವ ವ್ಯಕ್ತಿಯನ್ನು ಅಹಮದಾಬಾದ್ನ ಅಪರಾಧ ಪತ್ತೆ ದಳ ಬಂಧಿಸಿದೆ. ಈತ ತನ್ನ ಮೊಬೈಲ್‌ನಿಂದ ಬೆದರಿಕೆ ಇ-ಮೇಲ್ ಕಳುಹಿಸಿದ್ದ. ಆದರೆ ಈ ವ್ಯಕ್ತಿ ಯಾವುದೇ ಅಪರಾಧ ಹಿನ್ನೆಲೆಯನ್ನು ಹೊಂದಿಲ್ಲ. ಈತ ಮೂಲತಃ ಮಧ್ಯಪ್ರದೇಶದನಾಗಿದ್ದು ಗುಜರಾತ್‌ನ ರಾಜ್‌ಕೋಟ್ ಹೊರವಲಯದಲ್ಲಿ ವಾಸಿಸುತ್ತಿದ್ದ. ಸದ್ಯಕ್ಕೆ ಈತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ಬಾಂಬ್ ದಾಳಿಯ ಬೆದರಿಕೆಯಿಂದ ಹೆಚ್ಚುವರಿ ಪೊಲೀಸ್ ಮತ್ತು ಆರ್ಮಿ ಪಡೆಯನ್ನು ಮೈದಾನ ಸುತ್ತಲೂ ನಿಯೋಗ ಮಾಡಲಾಗಿದೆ. ಮೈದಾನದ 100 ಮೀ. ಆವರಣದಲ್ಲಿ ವಾಹನ ಓಡಾಟ ನಿರ್ಬಂಧಿಸಲಾಗಿದೆ. ಪಂದ್ಯ ನಡೆಯುವ ದಿನ ಸ್ಟೇಡಿಯಂ ಹೌಸ್ಫುಲ್ ಆಗುವುದು ಖಚಿತವಾಗಿದೆ. ಒಂದೇ ಕಡೆ ಲಕ್ಷಾಂತರ ಜನರು ಸೇರುವ ಜಾಗದಲ್ಲಿ ಅನಾಹುತವಾದರೆ ಭಾರಿ ಎಡವಟ್ಟು ಸಂಭವಿಸುತ್ತದೆ. ಹೀಗಾಗಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.
ಅಭ್ಯಾಸ ಆರಂಭಿಸಿದ ಪಾಕ್ ಆಟಗಾರರು
ಅಹಮದಾಬಾದ್ಗೆ ಬಂದ ಪಾಕಿಸ್ತಾನ ಆಟಗಾರರಿಗೆ ಅತ್ಯಂತ ಭವ್ಯ ಸ್ವಾಗತ ಕೋರಲಾಯಿತು. ಇಲ್ಲಿನ ಸಾಂಸ್ಕೃತಿಕ ನೃತ್ಯ ಜತೆಗೆ ಮತ್ತು ಹೂವಿನ ಮಳೆಯನ್ನೇ ಸುರಿಸಿ ಸ್ವಾಗತಿಸಲಾಯಿತು. ಇದೀಗ ಪಾಕ್ ಆಟಗಾರರು ಅಭ್ಯಾಸ ನಡೆಸಿದ್ದಾರೆ. ರಾತ್ರಿ ಸುಮಾರು 4 ಗಂಟೆಗಳ ಕಾಲ ಅಭ್ಯಾಸ ನಡೆಸಿದ್ದಾರೆ. ಆದರೆ ಮೈದಾನದ ಹೊರಗೂ ಮತ್ತು ಒಳಗೂ ಭಾರಿ ಭದ್ರತೆಯನ್ನು ಮಾಡಲಾಗಿತ್ತು.
ಇದನ್ನೂ ಓದಿ IND vs PAK: ಪಾಕ್ ವಿರುದ್ಧ ಕೇಸರಿ ಜೆರ್ಸಿಯಲ್ಲಿ ಆಡಲ್ಲ; ಬಿಸಿಸಿಐ ಸ್ಪಷ್ಟನೆ
ತವರಿನಲ್ಲಿ ಸೋಲಿನ ಪಂಚ್ ನೀಡಲು ಭಾರತ ಸಿದ್ಧ
ವಿಶ್ವಕಪ್ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ! ಬಗೆದಷ್ಟೂ ರೋಚಕ ಅಂಕಿಅಂಶ, ಘಟನಾವಳಿ, ರೋಮಾಂಚನ ಹಾಗೂ ಉದ್ವೇಗದ ಕ್ಷಣಗಳು ಉಕ್ಕಿ ಬರುತ್ತವೆ. ಇವುಗಳಲ್ಲಿ ಪ್ರಮುಖವಾದುದೆಂದರೆ, ಪಾಕಿಸ್ತಾನ ವಿರುದ್ಧದ ಏಕದಿನ ವಿಶ್ವಕಪ್ ಮುಖಾಮುಖೀಯಲ್ಲಿ ಭಾರತ ಸೋಲರಿಯದ ಸರದಾರನಾಗಿ ಮೆರೆದಿರುವುದು. ಈ ಪ್ರತಿಷ್ಠಿತ ಕೂಟದಲ್ಲಿ ಆಡಿದ ಏಳೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿದೆ!. ಇದೀಗ ಎಂಟನೇ ಮುಖಾಮುಖಿಯಲ್ಲಿಯೂ ಸೋಲಿನ ಪಂಚ್ ನೀಡಲು ಭಾರತ ಸಜ್ಜಾಗಿದೆ. ಅದೂ ಕೂಡ ತವರಿನಲ್ಲಿ. ಸದ್ಯ ಇತ್ತಂಡಗಳು ಆಡಿರುವ ಎರಡು ಲೀಗ್ ಪಂದ್ಯಗಳನ್ನು ಗೆದ್ದಿದೆ. ಆದರೆ ಇಲ್ಲಿ ಒಂದು ತಂಡಕ್ಕೆ ಸೋಲು ಖಚಿತವಾಗಿದೆ. ಅದು ಯಾವ ತಂಡಕ್ಕೆ ಎನ್ನುವುದು ಪಂದ್ಯದ ಕೌತುಕ.
ಇದನ್ನೂ ಓದಿ IND vs PAK: ಭಾರತ-ಪಾಕ್ ಪಂದ್ಯಕ್ಕೆ ಕಂಚಿನ ಕಂಠದ ಕಾಮೆಂಟರಿ ಕಿಂಗ್ ಅಲಭ್ಯ
ಅಮಿತಾಬ್, ರಜನಿಕಾಂತ್ ಭಾಗಿ
ಪಾಕಿಸ್ತಾನ(IND vs PAK) ನಡುವಣ ಹೈವೋಲ್ಟೇಜ್ ಕದನಕ್ಕೆ ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರಾದ ಬಾಲಿವುಡ್ನ ಅಮಿತಾಬ್ ಬಚ್ಚನ್(Amitabh Bachchan) ಮತ್ತು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್(Rajnikanath) ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಇವರ ಜತೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಕೂಡ ಉಪಸ್ಥಿತರಿರಲಿದ್ದಾರೆ.
ಬ್ಲೂ ಜೆರ್ಸಿಯಲ್ಲೇ ಪಂದ್ಯ
ಟೀಮ್ ಇಂಡಿಯಾ ಆಟಗಾರರು ಪಾಕ್ ಪಂದ್ಯದಲ್ಲಿ ಕೇಸರಿ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಸುದ್ದಿಯನ್ನು ಬಿಸಿಸಿಐ ನಿರಾಕರಿಸಿತ್ತು. “ಪಾಕಿಸ್ತಾನ ಎದುರಿನ ಪಂದ್ಯಕ್ಕೆ ಟೀಮ್ ಇಂಡಿಯಾ ಪರ್ಯಾಯ ಪಂದ್ಯದ ಕಿಟ್ ಧರಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ನಾವು ಸ್ಪಷ್ಟವಾಗಿ ತಳ್ಳಿಹಾಕುತ್ತೇವೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ಇದೊಂದು ದಾರಿ ತಪ್ಪಿಸಲು ಕೆಲ ವ್ಯಕ್ತಿಗಳು ಮಾಡಿರುವ ಸಂಚು. 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ನಮ್ಮ ತಂಡ ಮೆನ್ ಇನ್ ಬ್ಲೂನಲ್ಲೇ ಆಡಲಿದೆ” ಎಂದು ಬಿಸಿಸಿಐನ ಗೌರವ ಖಜಾಂಚಿ ಆಶಿಶ್ ಶೆಲಾರ್ ತಿಳಿಸಿದ್ದಾರೆ.