ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ(IND vs PAK) ಪಂದ್ಯದ ಜೋಶ್ ದೊಡ್ಡ ಮಟ್ಟದಲ್ಲೇ ಇರುತ್ತದೆ. ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ಅಭಿಮಾನಿಗಳು ಕೂಡ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ದುಬಾರಿ ಬೆಲೆಯ ಟಿಕೆಟ್ ಕೊಂಡುಕೊಳ್ಳಲು ಹಿಂದೇಟು ಹಾಕುವುದಿಲ್ಲ. ಪಾಕ್ ತಂಡದ ಅಭಿಮಾನಿಯೊಬ್ಬ ತನ್ನ ಟ್ರ್ಯಾಕ್ಟರ್(Pakistani fan sells tractor) ಮಾರಿ ಲಕ್ಷಾಂತರ ರೂ ಖರ್ಚು ಮಾಡಿ ಪಂದ್ಯದ ಟಿಕೆಟ್ ಖರೀದಿ ಮಾಡಿ ಪಂದ್ಯ ಸೋತ ಬಳಿಕ ಕಣ್ಣೀರು ಹಾಕಿದ್ದಾನೆ. ಈ ವಿಡಿಯೊ ವೈರಲ್ ಆಗಿದೆ.
ಕಳೆದ ಭಾನುವಾರ ಭಾರತ ಮತ್ತು ಪಾಕ್ ತಂಡಗಳು ಟಿ20 ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು ಭಾರತ ಗೆದ್ದು ಬೀಗಿತ್ತು. ಈ ಪಂದ್ಯವನ್ನು ನೋಡಲು ಪಾಕ್ ಅಭಿಮಾನಿಯೊಬ್ಬ ಕರಾಚಿಯಿಂದ ನ್ಯೂಯಾರ್ಕ್ಗೆ ಬಂದಿದ್ದ. ಈತ ತನ್ನ ಟ್ರ್ಯಾಕ್ಟರ್ ಮಾರಿ ಪಂದ್ಯವನ್ನು ನೋಡಲು ಆಗಮಿಸಿದ್ದ. ಆದರೆ ಪಂದ್ಯ ಸೋತ ಕಾರಣ ಆತ ನಿರಾಸೆಗೊಂಡು ಕಣ್ಣೀರು ಹಾಕಿದ್ದಾನೆ. ಪಂದ್ಯದ ಬಳಿಕ ಎಎನ್ಐ ಜತೆ ಮಾತನಾಡುವ ವೇಳೆ ಆತ ತಾನು ಟ್ರ್ಯಾಕ್ಟರ್ ಮಾರಿ ಪಂದ್ಯ ವೇಖ್ಷಣೆಗೆ ಬಂದ ವಿಚಾರವನ್ನು ತಿಳಿಸಿದ್ದಾನೆ. ಪಾಕ್ ಆಟಗಾರರ ಕಳಪೆ ಪ್ರದರ್ಶನಕ್ಕೂ ಆತ ಆಕ್ರೋಶ ಹೊರಹಾಕಿದ್ದಾನೆ. ಇದರ ವಿಡಿಯೊ ವೈರಲ್ ಆಗಿದೆ.
“ತಾನು ಸ್ಟೇಡಿಯಂನಲ್ಲೇ ಲೈವ್ ಆಗಿ ಪಂದ್ಯ ವೀಕ್ಷಿಸುವ ಸಲುವಾಗಿ ಮತ್ತು ನನ್ನ ದೇಶವನ್ನು ಬೆಂಬಲಿಸಲು ನನ್ನ ಟ್ರ್ಯಾಕ್ಟರ್‌ನ್ನು ಮಾರಿದೆ. (ಈ ಟಿಕೆಟ್ ಮೊತ್ತ 3000 ಯುಎಸ್‌ಡಿ ಅಂದರೆ ಪಾಕಿಸ್ತಾನದ ರೂಪಾಯಿಗೆ ಪರಿವರ್ತಿಸುವುದಾದರೆ 840,526.93) ಆದರೆ ಪಾಕಿಸ್ತಾನ ಈ ಪಂದ್ಯವನ್ನು ಹೀಗೆ ಆಡುತ್ತದೆ ಎಂದು ನಾನು ಊಹೆಯೂ ಮಾಡಿರಲಿಲ್ಲ. ಸೋಲಿಗೆ ತಂಡದ ಅತಿಯಾದ ಆತ್ಮವಿಶ್ವಾಸವೇ ಕಾರಣ” ಎಂದು ಈ ಅಭಿಮಾನಿ ಹತಾಶೆ ವ್ಯಕ್ತಪಡಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಪಾಕ್ ಬೌಲರ್ಗಳ ನಿಖರ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾಗಿ ಕೇವಲ 119 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಪಾಕ್ ಕೂಡ ಭಾರತದ ಬೌಲಿಂಗ್ ದಾಳಿಗೆ ನಲುಗಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಸೋಲು ಕಂಡಿತು. ಮೊಹಮ್ಮದ್ ರಿಜ್ವಾನ್(31) ಒಂದು ಹಂತದ ವರೆಗೆ ಭಾರತೀಯ ಬೌಲರ್ಗಳನ್ನು ಕಾಡಿದರೂ ಕೂಡ ಬುಮ್ರಾ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಇಲ್ಲಿಂದ ಪಾಕ್ ಕುಸಿತ ಕೂಡ ಆರಂಭವಾಯಿಯು. ಕೊನೆಗೂ ಭಾರತ ಪಂದ್ಯವನ್ನು ಗೆದ್ದು ಬೀಗುವಲ್ಲಿ ಯಶಸ್ಸು ಕಂಡಿತು.
ಪಾಕ್ 2 ಸೋಲು ಕಂಡಿದ್ದರೂ ಕೂಡ ಸೂಪರ್-8 ಪ್ರವೇಶಿಸುವ ಕ್ಷೀಣ ಅವಕಾಶವೊಂದಿದೆ. ಜತೆಗೆ ಅದೃಷ್ಟ ಕೂಡ ಕೈಹಿಡಿಯಬೇಕಿದೆ.
ಸದ್ಯ ‘ಎ’ ಗುಂಪಿನಲ್ಲಿ ಭಾರತ ಮತ್ತು ಆತಿಥೇಯ ಅಮೆರಿಕ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ತಲಾ 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡಿದೆ. ಒಂದು ಪಂದ್ಯ ಗೆದ್ದ ಕೆನಾಡ ಮೂರನೇ ಸ್ಥಾನದಲ್ಲಿದೆ. ಗೆಲುವೇ ಕಾಣದ ಪಾಕಿಸ್ತಾನ 4ನೇ ಸ್ಥಾನಿಯಾಗಿದೆ. ಪಾಕ್ ಮುಂದಿನ ಪಂದ್ಯದಲ್ಲಿ ಐರ್ಲೆಂಡ್ ಮತ್ತು ಕೆನಡಾ ವಿರುದ್ಧ ಆಡಲಿದೆ. ಒಂದು ಗುಂಪಿನಿಂದ ಎರಡು ತಂಡಗಳು ಮಾತ್ರ ಸೂಪರ್ 8ಗೆ ಪ್ರವೇಶ ಪಡೆಯಲಿದೆ. ಪಾಕ್ಗೂ ಕೂಡ ಈ ಹಂತಕ್ಕೇರಲು ಸಣ್ಣ ಅವಕಾಶವೊಂದಿದೆ. ಈ ಲೆಕ್ಕಾಚಾರ ಹೀಗಿದೆ.
ಸೂಪರ್-8ಗೆ ಪ್ರವೇಶಿಸಲು ಪಾಕಿಸ್ತಾನ ತಂಡವು ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಅಷ್ಟೇ ಅಲ್ಲದೆ ಯುಎಸ್‌ಎ ಮತ್ತು ಕೆನಡಾ ತಂಡಗಳು ಗುಂಪು ಹಂತದಲ್ಲಿ ಉಳಿದ ಪಂದ್ಯಗಳಲ್ಲಿ ಸೋಲು ಕಾಣಬೇಕು. ಅಮೆರಿಕ ಮುಂದಿನ 2 ಪಂದ್ಯಗಳಲ್ಲಿ ಸೋಲು ಕಂಡು, ಪಾಕ್ 2 ಪಂದ್ಯ ಗೆದ್ದರೆ ಉಭಯ ತಂಡಗಳಿಗೆ ತಲಾ 4 ಅಂಕ ಆಗಲಿದೆ. ಹೀಗಾಗಿ ಪಾಕ್ಗೆ ಕೇವಲ ಗೆಲುವು ಮಾತ್ರ ಸಾಲದು ಜತೆಗೆ ರನ್ರೇಟ್ ಕೂಡ ಬೇಕಾಗಿದೆ. ಅಮೆರಿಕ ಮತ್ತು ಭಾರತ ಮುಂದಿನ ಪಂದ್ಯದಲ್ಲಿ ಗೆದ್ದರೆ ಪಾಕ್ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.