ನ್ಯೂಯಾರ್ಕ್: ಕ್ರೀಡಾ ಲೋಕವೇ ಕಾದು ಕುಳಿತಿರುವ ಭಾರತ(IND vs PAK) ಮತ್ತು ಪಾಕಿಸ್ತಾನ ನಡುವಣ ರೋಚಕ ಟಿ20 ವಿಶ್ವಕಪ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು(ಭಾನುವಾರ) ರಾತ್ರಿ ಇತ್ತಂಡಗಳ ಮಧ್ಯೆ ಈ ಪಂದ್ಯ ನಡೆಯಲಿದೆ. ಅಭಿಮಾನಿಗಳ ಕಾತರ, ಕೌತುಕಗಳೆಲ್ಲ ಸೀಮೆಯನ್ನು ಮೀರಿವೆ. ಜಗತ್ತಿನ ಇತರೆ ಯಾವುದೇ ದೇಶಗಳ ನಡುವಿನ ಕ್ರಿಕೆಟ್ ಸಮರದಲ್ಲಿ ಈ ತೀವ್ರತೆಯನ್ನು ನೀವು ಕಾಣಲು ಸಾಧ್ಯವೇ ಇಲ್ಲ. ಭಾರತ ಮತ್ತು ಪಾಕ್ ಪಂದ್ಯಗಳಲ್ಲಿ ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯುತ್ತಾರೆ. ಹಾಗೆಯೇ ಕೆಲವು ವಿಲನ್‌ಗಳೂ ಹುಟ್ಟಿ ಕೊಳ್ಳುತ್ತಾರೆ. ಪಾಕಿಸ್ತಾನ ಸೋತರೆ ಅಲ್ಲಿ ಇವರ ಪ್ರತಿಕೃತಿ ದಹನವಾಗಲಿದೆ; ಮನೆಗೆ ಕಲ್ಲು ಬೀಳಲಿದೆ. ಇದರಿಂದ ಬಚಾವಾಗುವುದು ಪಾಕ್ ಕ್ರಿಕೆಟಿಗರ ಪಾಲಿಗೆ ಇನ್ನೂ ದೊಡ್ಡ ಸವಾಲು.
ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ರೋಹಿತ್ ಪಡೆಯ ಮೇಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇದೆ. ಹಾಗೆಯೇ ಅಮೆರಿಕ ವಿರುದ್ಧ ಸೋತಿರುವ ಪಾಕಿಸ್ತಾನಕ್ಕೆ ಒತ್ತಡವೂ ಇದೆ. ಗೆದ್ದರಷ್ಟೇ ಮುಂದಿನ ಹಂತಕ್ಕೇರಬಹುದು. ಹೀಗಾಗಿ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಹೆಚ್ಚು. ಆದರೆ ಪಂದ್ಯಕ್ಕೆ ಮಳೆಯ ಭೀತಿ ಕೂಡ ಎದುರಾಗಿದೆ.
ಭಾರತವೇ ಪೇವರಿಟ್
ಮೇಲ್ನೋಟಕೆ ಭಾರತ ಈ ಬಾರಿಯ ಕೂಟದಲ್ಲಿ ಫೇವರಿಟ್ ಆಗಿ ಗುರುತಿಸಿಕೊಂಡಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಸಲ್ಲದು. ಎಲ್ಲ ಪಂದ್ಯದಲ್ಲಿಯೂ ಎಚ್ಚರ ಅಗತ್ಯ. ಅದರಂತೆ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಇದಕ್ಕೆ ಅಮೆರಿಕ ವಿರುದ್ಧ ಪಾಕ್, ಅಫಘಾನಿಸ್ತಾನ ವಿರುದ್ಧ ನ್ಯೂಜಿಲ್ಯಾಂಡ್ ಸೋಲು ಕಂಡಿರುವುದೇ ಉತ್ತಮ ನಿದರ್ಶನ. ಏಕದಿನ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತ ಅಜೇಯವಾಗಿದ್ದರೂ ಕೂಡ, ಟಿ20ಯಲ್ಲಿ ಅಜೇಯವಲ್ಲ. ಭಾರತದ ಆತಿಥ್ಯದಲ್ಲೇ ದುಬೈನಲ್ಲಿ 2021ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ 10 ವಿಕೆಟ್ಗಳ ಹೀನಾಯ ಸೋಲು ಕಂಡಿತ್ತು. 2022ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತ್ತು. ಟಿ20ಯಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಪೈಪೋಟಿ ನೀಡುತ್ತಿದೆ. ಹೀಗಾಗಿ ಎಚ್ಚರದಿಂದ ಆಡಬೇಕು.
ಇದನ್ನೂ ಓದಿ Rohit Sharma Injury: ಪಾಕ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆತಂಕ; ಅಭ್ಯಾಸದ ವೇಳೆ ರೋಹಿತ್ಗೆ ಗಾಯ
ಪಾಕ್ ತಂಡವೂ ಬಲಿಷ್ಠ
ಭಾರತ ತಂಡದಂತೆ ಪಾಕಿಸ್ತಾನ ಕೂಡ ಬಲಿಷ್ಠವಾಗಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಲ್ಲಿ ವೈವಿಧ್ಯಮಯವಾಗಿ ಗೋಚರಿಸಿದೆ. ಬ್ಯಾಟಿಂಗ್‌ನಲ್ಲಿ ಮೊಹಮ್ಮದ್ ರಿಜ್ವಾನ್, ನಾಯಕ ಬಾಬರ್ ಅಜಂ, ಇಫ್ತಿಕರ್, ಫಕಾರ್ ಜಮಾನ್ ಬಲವಾದರೆ ಅತ್ತ ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ, ಶದಾಬ್, ಆಮೀರ್, ರವೂಫ್ ಮತ್ತು ನಶೀಮ್ ಶಾ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಅದರಲ್ಲೂ ಹೊಸ ಚೆಂಡಿನಲ್ಲಿ ಅಫ್ರಿದಿ ಬೆಂಕಿ ಎಸೆತಗಳನ್ನು ಎಸೆಯುವುದರಲ್ಲಿ ಎತ್ತಿದ ಕೈ.
ಮಳೆ ಭೀತಿ
ಸದ್ಯದ ಮುನ್ಸೂಚನೆಯಂತೆ ಪಂದ್ಯ ನಡೆಯುವ ಭಾನುವಾರ ನ್ಯೂಯಾರ್ಕ್ನಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ ಅಮೆರಿಕದ ಕಾಲಮಾನದ ಪ್ರಕಾರ ಬೆಳಗ್ಗೆ 11 ಸುಮಾರಿಗೆ ಶೇ. 51 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಈ ಪಂದ್ಯ ರಾತ್ರಿ ಪ್ರಸಾರವಾಗುತ್ತದೆ. ಮಳೆಯಿಂದ ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ. ಏಕೆಂದರೆ ಲೀಗ್ ಪಂದ್ಯಗಳಿಗೆ ಮೀಸಲು ದಿನ ಇಲ್ಲ.