ನ್ಯೂಯಾರ್ಕ್: ಯಾವುದೇ ಐಸಿಸಿ ಕೂಟದಲ್ಲಿಯೂ ಭಾರತ-ಪಾಕಿಸ್ತಾನ(IND vs PAK) ಪಂದ್ಯಕ್ಕೆ ಇರುವಂತಹ ಕ್ರೇಜ್ ಉಳಿದ ಯಾವ ಪಂದ್ಯಕ್ಕೂ ಕಾಣಸಿಗದು. ನಿರೀಕ್ಷೆಗೂ ಮೀರಿದ ಕ್ರೇಜ್ ಕಂಡುಬರುತ್ತದೆ. ಕಳೆದ 2022ರಲ್ಲಿ ಮೆಲ್ಬೋರ್ನ್ನಲ್ಲಿ(IND vs PAK 2022 T20 World Cup) ನಡೆದಿದ್ದ ಟಿ20 ವಿಶ್ವಕಪ್ನ ಸೂಪರ್ 12 ಹಂತದ ಸೂಪರ್ ಥ್ರಿಲ್ಲಿಂಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಅಸಾಮಾನ್ಯ ಬ್ಯಾಟಿಂಗ್ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಕೊಹ್ಲಿಯ ಬ್ಯಾಟಿಂಗ್ ಆರ್ಭಟ ಕಂಡು ಪಾಕ್ ಅಕ್ಷರಶಃ ನಲುಗಿ ಹೋಗಿತ್ತು. ಕೊಹ್ಲಿಯ(Virat Kohli) ಅಂದಿನ ಬ್ಯಾಟಿಂಗ್ ಗತವೈಭವ ಮತ್ತೆ ಮರುಕಳಿಸಲಿ ಎನ್ನುವುದು ಭಾರತೀಯ ಅಭಿಮಾನಗಳ ಆಶಯ. ಭಾರತ ಮತ್ತು ಪಾಕ್ ನಡುವಣ ಪಂದ್ಯ ನಾಳೆ(ಭಾನುವಾರ) ನಡೆಯಲಿದೆ.
ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ(India vs Pakistan) ಶಾನ್ ಮಸೂದ್ ಮತ್ತು ಇಫ್ತಿಕಾರ್ ಅಹ್ಮದ್ ಬಾರಿಸಿದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 159 ರನ್ ಬಾರಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 10 ರನ್ ಗಳಿಸುವಷ್ಟರಲ್ಲಿ ರೋಹಿತ್ ಶರ್ಮ(4) ಮತ್ತು ಕೆ.ಎಲ್ ರಾಹುಲ್(4) ವಿಕೆಟ್ ಕಳೆದುಕೊಂಡಿತು. ಆ ಬಳಿಕ ಬಂದ ಸೂರ್ಯಕುಮಾರ್(15) ಮತ್ತು ಅಕ್ಷರ್ ಪಟೇಲ್(2) ಕೂಡ ನಿರಾಸೆ ಮೂಡಿಸಿದರು.
ಆರಂಭಿಕ ಆಘಾತ ಅನುಭವಿಸಿ ಸೋಲಿನತ್ತ ಮುಖಮಾಡಿದ್ದ ಭಾರತಕ್ಕೆ ಆಸರೆಯಾದದ್ದು ವಿರಾಟ್ ಕೊಹ್ಲಿ. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಕೂಡ ತಂಡದ ಗೆಲುವಿಗಾಗಿ ಪಣ ತೊಟ್ಟಿದ್ದ ಕೊಹ್ಲಿ 53 ಎಸೆತದಲ್ಲಿ ಅಜೇಯ 82 ರನ್ ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ 40 ರನ್ ಬಾರಿಸಿ ಕೊಹ್ಲಿಗೆ ಉತ್ತಮ ಸಾಥ್ ನೀಡಿದ್ದು ಕೂಡ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.
ಇದನ್ನೂ ಓದಿ IND vs PAK: ಇಂಡೋ-ಪಾಕ್ ಟಿ20 ವಿಶ್ವಕಪ್ ಕೌತುಕ; ಹೇಗಿದೆ ಇತ್ತಂಡಗಳ ದಾಖಲೆ?
ಅಂತಿಮ ಒಂದು ಎಸೆತಕ್ಕೆ 2 ರನ್ ಬೇಕಿದ್ದಾಗ ಕ್ರೀಸ್ನಲ್ಲಿದ್ದ ಅಶ್ವಿನ್ ಅವರು ಮೊಹಮ್ಮದ್ ನವಾಜ್ ಅವರ ಲೆಗ್ಸೈಡ್ ಎಸೆತವನ್ನು ಅಷ್ಟೇ ಸೊಗಸಾಗಿ ವೈಡ್ ಬಿಟ್ಟರು. ಪಂದ್ಯ ಟೈಗೊಂಡಿತು. ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದು ಭಾರತದ ಗೆಲುವು ಸಾರಿದರು. ಕೊಹ್ಲಿಯ ಅಸಾಮಾನ್ಯ ಬ್ಯಾಟಿಂಗ್ ಇನ್ನಿಂಗ್ಸ್ ಕಂಡ ನಾಯಕ ರೋಹಿತ್ ಶರ್ಮಾ ಓಡಿ ಬಂದು ಕೊಹ್ಲಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಾಚರಣೆ ಮಾಡಿದ್ದರು.
ಭಾರತ ತಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ದಾಖಲೆ ಹೊಂದಿದೆ. ಆದರೆ, ಟಿ20 ವಿಶ್ವಕಪ್ನಲ್ಲಿ ಭಾರತ ಅಜೇಯವಲ್ಲ. ಒಟ್ಟು 7 ಬಾರಿ ಇತ್ತಂಡಗಳು ಟಿ20 ವಿಶ್ವಕಪ್ನಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 6 ಪಂದ್ಯ ಗೆದ್ದರೆ, ಪಾಕಿಸ್ತಾನ ಒಂದು ಪಂದ್ಯ ಗೆದ್ದಿದೆ. ಭಾರತಕ್ಕೆ ಸೋಲು ಎದುರಾದದ್ದು 2021ರಲ್ಲಿ ದುಬೈನಲ್ಲಿ ನಡೆದಿದ್ದ ಟೂರ್ನಿಯಲ್ಲಿ. ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ 10 ವಿಕೆಟ್ಗಳ ಹೀನಾಯ ಸೋಲು ಕಂಡಿತ್ತು.
ಒಟ್ಟಾರೆಯಾಗಿ ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದ್ದರೂ ಕೂಡ ಪಾಕ್ ಸವಾಲನ್ನು ಅಷ್ಟು ಹಗುರವಾಗಿ ಕಡೆಗಣಿಸುವಂತಿಲ್ಲ.