ಮಲ್ಬೋರ್ನ್: ವಿರಾಟ್ ಕೊಹ್ಲಿ (೮೨*), ಹಾರ್ದಿಕ್ ಪಾಂಡ್ಯ(೪೦) ಅವರ ಶತಕದ ಜತೆಯಾಟದ ನೆರವಿನಿಂದ ಭಾರತ ತಂಡ ಪಾಕಿಸ್ತಾನ ವಿರುದ್ಧ ಟಿ೨೦ ವಿಶ್ವ ಕಪ್ ಸೂಪರ್ ೧೨ ಪಂದ್ಯದಲ್ಲಿ ೪ ವಿಕೆಟ್‌ಗಳ ಗೆಲುವು ದಾಖಲಿಸಿ ಹಾಲಿ ವಿಶ್ವ ಕಪ್ ಕೂಟದಲ್ಲಿ ಶುಭಾರಂಭ ಕಂಡಿದೆ. ಈ ಮೂಲಕ ಈ ಇಬ್ಬರು ಸ್ಟಾರ್ ಬ್ಯಾಟರ್‌ಗಳು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವಿನ ಕಿರೀಟ ಇಟ್ಟರು.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾನುವಾರದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಆರಂಭಿಕ ಆಘಾತದ ಹೊರತಾಗಿಯೂ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೫೯ ರನ್ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ ೩೧ ರನ್ ಒಟ್ಟುಗೂಡುವಷ್ಟರಲ್ಲಿ ಪ್ರಮುಖ ೪ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಕೊಹ್ಲಿ ಮತ್ತು ಹಾರ್ದಿಕ್ ಜತೆಗೂಡಿ ಆರಂಭದಲ್ಲಿ ತಾಳ್ಮೆಯುತ ಆಟವಾಡಿ ತಂಡಕ್ಕೆ ನೆರವಾದರು. ಈ ಜೋಡಿ ೫ನೇ ವಿಕೆಟ್‌ಗೆ ೧೧೩ ರನ್ ಜತೆಯಾಟ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಭಾರತ ತಂಡ ೨೦ ಓವರ್‌ಗಳಲ್ಲಿ ೬ ವಿಕೆಟ್‌ನಷ್ಟಕ್ಕೆ ೧೬೦ ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಅಬ್ಬರಿಸಿದ ಕಿಂಗ್ ಕೊಹ್ಲಿ
ಪಾಕಿಸ್ತಾನ ವಿರುದ್ಧ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಆರ್ಭಟ ಈ ಪಂದ್ಯದಲ್ಲೂ ಕಂಡುಬಂತು. ಪಾಕ್ ಬೌಲರ್‌ಗಳಿಗೆ ಸಿಕ್ಸರ್ ಮತ್ತು ಬೌಂಡರಿ ರುಚಿ ತೋರಿಸಿದರು. ಅದರಂತೆ 53 ಎಸೆತ ಎದುರಿಸಿದ ಕೊಹ್ಲಿ 4 ಸಿಕ್ಸರ್ , 6 ಬೌಂಡರಿ ಸಹಿತ 82 ರನ್ ಸಿಡಿಸಿ ಅಜೇಯರಾಗಿ ಉಳಿದರು. ಹಾರ್ದಿಕ್ ಪಾಂಡ್ಯ 37 ಎಸೆತದಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಮೂಲಕ 40 ರನ್ ಗಳಿಸಿದರು.
ಇದನ್ನೂ ಓದಿ | IND vs PAK | ಒಂದು ದಿನ ಮೊದಲೇ ಭಾರತೀಯರಿಗೆ ದೀಪಾವಳಿ ಉಡುಗೊರೆ ಕೊಟ್ಟ ವಿರಾಟ್ ಕೊಹ್ಲಿ