Site icon Vistara News

IND vs PAK: ಇಂಡೋ-ಪಾಕ್ ಟಿ20 ವಿಶ್ವಕಪ್​ ಕೌತುಕ; ಹೇಗಿದೆ ಇತ್ತಂಡಗಳ ದಾಖಲೆ? 

IND vs PAK

ind-vs-pakt20-world-cup-head-to-head-stats-results

ನ್ಯೂಯಾರ್ಕ್​: ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಹೈವೋಲ್ಟೇಜ್​ ಕದನ ನಾಳೆ(ಭಾನುವಾರ) ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಈ ಎರಡೂ ದೇಶಗಳ ನಡುವಿನ ಕ್ರಿಕೆಟ್‌ ಹೋರಾಟವನ್ನು ಯಾವುದೇ ಉತ್ಪ್ರೇಕ್ಷಿತ ವರ್ಣನೆ, ಹೋಲಿಕೆ, ಉಪಮೆಗಳಿಗೆ ಬೇಕಾದರೂ ಬಳಸಿಕೊಳ್ಳಬಹುದು. ಉಳಿದ ಸಂದರ್ಭದಲ್ಲಿ ಯಾವುದನ್ನು ನಾವು ಉತ್ಪ್ರೇಕ್ಷೆ ಎನ್ನಬಹುದೋ, ಈ ಎರಡು ದೇಶಗಳ ಕ್ರಿಕೆಟ್‌ ಹೋರಾಟದ ಸಂದರ್ಭದಲ್ಲಿ ಅವು ನಿಜವಾಗಿರುತ್ತವೆ. ಜಗತ್ತಿನ ಇತರೆ ಯಾವುದೇ ದೇಶಗಳ ನಡುವಿನ ಕ್ರಿಕೆಟ್‌ ಸಮರದಲ್ಲಿ ಈ ತೀವ್ರತೆಯನ್ನು ನೀವು ಕಾಣಲು ಸಾಧ್ಯವೇ ಇಲ್ಲ.

ಎರಡೂ ದೇಶಗಳ ನಡುವಿನ ಹದಗೆಟ್ಟ ಸಂಬಂಧ ಹಾಗೂ ತ್ವೇಷಮಯ ವಾತಾವರಣದ ನಡುವೆ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ವಿಶ್ವಕಪ್‌(IND vs PAK T20 World Cup) ಆಗಿರಲಿ ಇತರ ಯಾವುದೇ ಟೂರ್ನಿಯ ಪಂದ್ಯವಾಗಿರಲಿ ಇದನ್ನು ನೋಡುವುದೇ ಒಂದು ರೋಮಾಂಚನ.

ಭಾರತ ಮತ್ತು ಪಾಕ್​ ಪಂದ್ಯಗಳಲ್ಲಿ ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯುತ್ತಾರೆ. ಹಾಗೆಯೇ ಕೆಲವು ವಿಲನ್‌ಗಳೂ ಹುಟ್ಟಿ ಕೊಳ್ಳುತ್ತಾರೆ. ಪಾಕಿಸ್ತಾನ ಸೋತರೆ ಅಲ್ಲಿ ಇವರ ಪ್ರತಿಕೃತಿ ದಹನವಾಗಲಿದೆ; ಮನೆಗೆ ಕಲ್ಲು ಬೀಳಲಿದೆ. ಇದರಿಂದ ಬಚಾವಾಗುವುದು ಪಾಕ್‌ ಕ್ರಿಕೆಟಿಗರ ಪಾಲಿಗೆ ಇನ್ನೂ ದೊಡ್ಡ ಸವಾಲು.

ಇದನ್ನೂ ಓದಿ AFG vs NZ: ಅಫಘಾನಿಸ್ತಾನ ವಿರುದ್ಧ ಹೀನಾಯ ಸೋಲು ಕಂಡ ನ್ಯೂಜಿಲ್ಯಾಂಡ್​

ಟಿ20 ವಿಶ್ವಕಪ್​ನಲ್ಲಿ ಭಾರತ ಅಜೇಯವಲ್ಲ

ಭಾರತ ತಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ದಾಖಲೆ ಹೊಂದಿದೆ. ಆದರೆ, ಟಿ20 ವಿಶ್ವಕಪ್​ನಲ್ಲಿ ಭಾರತ ಅಜೇಯವಲ್ಲ. ಒಟ್ಟು 7 ಬಾರಿ ಇತ್ತಂಡಗಳು ಟಿ20 ವಿಶ್ವಕಪ್​ನಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 6 ಪಂದ್ಯ ಗೆದ್ದರೆ, ಪಾಕಿಸ್ತಾನ ಒಂದು ಪಂದ್ಯ ಗೆದ್ದಿದೆ. ಭಾರತಕ್ಕೆ ಸೋಲು ಎದುರಾದದ್ದು 2021ರಲ್ಲಿ ದುಬೈನಲ್ಲಿ ನಡೆದಿದ್ದ ಟೂರ್ನಿಯಲ್ಲಿ. ವಿರಾಟ್​ ಕೊಹ್ಲಿ ಸಾರಥ್ಯದ ಟೀಮ್​ ಇಂಡಿಯಾ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು.

ಒಟ್ಟಾರೆಯಾಗಿ ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದ್ದರೂ ಕೂಡ ಪಾಕ್​ ಸವಾಲನ್ನು ಅಷ್ಟು ಹಗುರವಾಗಿ ಕಡೆಗಣಿಸುವಂತಿಲ್ಲ.

ನ್ಯೂಯಾರ್ಕ್‌ನಲ್ಲಿ ಪಂದ್ಯ ನಡೆಸಲು ಕಾರಣವೇನು?

ಇತ್ತಂಡಗಳ ನಡುವಣ ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಅಣಿಯಾಗಲಿದೆ. ಈ ಪಂದ್ಯಕ್ಕಾಗಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ಭಾರತ ಮತ್ತು ಪಾಕ್​ ನಡುವಣ ಪಂದ್ಯಕ್ಕಾಗಿಯೇ ನಿರ್ಮಿಸಲಾಗಿದೆ. ಈ ಪಂದ್ಯವನ್ನು ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕೂಡ ಒಂದು ಕಾರಣವಿದೆ. ಅದೇನೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ನಡೆಸಲಾಗುತ್ತಿದೆ. ಆಘಾತಕಾರಿ ನಸೌ ಪಿಚ್​ನಲ್ಲಿ ಆಡುವುದೇ ಉಭಯ ತಂಡಗಳಿಗೆ ದೊಡ್ಡ ಚಿಂತೆಯಾಗಿದೆ.

Exit mobile version