Site icon Vistara News

IND vs PAK | ಕಳೆದ ವರ್ಷ ಸೋತ ಸ್ಟೇಡಿಯಮ್‌ನಲ್ಲೇ ಪಾಕಿಸ್ತಾನಕ್ಕೆ ಪ್ರತ್ಯುತ್ತರ ಕೊಟ್ಟ ಟೀಮ್ ಇಂಡಿಯಾ

ind vs pak

ದುಬೈ : ಕಳೆದ ವರ್ಷ ನಡೆದ ಟಿ೨೦ ವಿಶ್ವ ಕಪ್‌ನಲ್ಲಿ ಭಾರತ ತಂಡ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನದ ವಿರುದ್ಧ ೧೦ ವಿಕೆಟ್‌ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಅದುವರೆಗೆ ಭಾರತ ತಂಡ ಅಷ್ಟೊಂದು ಸುಲಭವಾಗಿ ನೆರೆಯ ರಾಷ್ಟ್ರದ ಮುಂದೆ ತಲೆಬಾಗಿದ್ದೇ ಇಲ್ಲ. ಆ ಸೋಲು ಭಾರತ ತಂಡ ಆಟಗಾರರನ್ನು ಸಿಕ್ಕಾಪಟ್ಟೆ ಕೆರಳಿಸಿತ್ತು. ಆ ಸೇಡನ್ನು ಭಾನುವಾರ ನಡೆದ ಏಷ್ಯಾ ಕಪ್‌ ಪಂದ್ಯದಲ್ಲಿ ತೀರಿಸಿಕೊಂಡಿತು. ಅದೇ ಬಾಬರ್‌ ಅಜಮ್‌ ನೇತೃತ್ವದ ತಂಡವನ್ನು ೫ ವಿಕೆಟ್‌ಗಳಿಂದ ಮಣಿಸಿ ವಿಜಯದ ಕೇಕೆ ಹಾಕಿತು.

ಈ ಬಾರಿ ಭಾರತದ ಗೆಲುವು ಸುಲಭವಾಗಿರಲಿಲ್ಲ. ಯಾಕೆಂದರೆ ವೇಗ ಮತ್ತು ಸ್ವಿಂಗ್‌ ಬೌಲಿಂಗ್‌ಗೆ ನೆರವಾಗುತ್ತಿದ್ದ ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಮ್‌ನ ಪಿಚ್‌ನಲ್ಲಿ ಬ್ಯಾಟಿಂಗ್‌ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಪಾಕಿಸ್ತಾನ ತಂಡವನ್ನು ೧೪೭ ರನ್‌ಗಳಿಗೆ ಕಟ್ಟಿ ಹಾಕಿದ್ದರೂ, ಆ ಗುರಿಯನ್ನು ಮುಟ್ಟುವ ಹಾದಿ ಸುಲಭವಾಗಿರಲಿಲ್ಲ. ಎದುರಾಳಿ ತಂಡದ ವೇಗಿಗಳು ಎಸೆಯುತ್ತಿದ್ದ ಪ್ರತಿ ಎಸೆತಗಳು ಇನ್‌ ಸ್ವಿಂಗ್‌ ಅಥವಾ ಔಟ್‌ಸ್ವಿಂಗ್‌ ಆಗುತ್ತಿತ್ತು. ಚೆಂಡಿನ ಪಥವನ್ನು ಗ್ರಹಿಸಿ ಜೋರಾಗಿ ಬಾರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಎದುರಾಳಿ ಪಾಕಿಸ್ತಾನವಲ್ಲವೇ? ಗೆದ್ದೇ ಗೆಲ್ಲಬೇಕು ಎಂಬ ಜಿದ್ದು ಭಾರತ ತಂಡದ ಆಟಗಾರರಿಗೆ ಇತ್ತು. ವಿರಾಟ್‌ ಕೊಹ್ಲಿ (೩೫ ರನ್‌), ರವೀಂದ್ರ ಜಡೇಜಾ (೩೫ ರನ್‌) ಹಾಗೂ ಹಾರ್ದಿಕ್‌ ಪಾಂಡ್ಯ (ಔಟಾಗದೇ ೩೩ ರನ್‌) ಗೆಲುವು ತಂದುಕೊಟ್ಟರು. ಹೀಗಾಗಿ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ೫ ವಿಕೆಟ್‌ ಕಳೆದುಕೊಂಡು ೧೪೮ ರನ್‌ ಬಾರಿಸಿ ಜಯಶಾಲಿಯಾಯಿತು. ಅದರಲ್ಲೂ ಪಾಕಿಸ್ತಾನ ತಂಡದ ವಿರುದ್ಧ ಸದಾ ಸಿಡಿದೇಳುವ ಹಾರ್ದಿಕ್‌ ಪಾಂಡ್ಯ ಆ ಮೊದಲು ಬೌಲಿಂಗ್‌ನಲ್ಲೂ ೨೫ ರನ್‌ ನೀಡಿ ಪ್ರಮುಖ ೩ ವಿಕೆಟ್‌ಗಳನ್ನು ಕಬಳಿಸಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಗರಿಷ್ಠ ರನ್‌ಗಳ ಚೇಸಿಂಗ್‌

ಇದು ಪಾಕ್‌ ವಿರುದ್ಧ ಟಿ೨೦ ಮಾದರಿಯಲ್ಲಿ ಭಾರತದ ಗರಿಷ್ಠ ರನ್‌ಗಳ ಚೇಸಿಂಗ್‌ ಜಯವೂ ಹೌದು. ಈ ಹಿಂದೆ ೨೦೧೪ರಲ್ಲಿ ನೆರೆಯ ರಾಷ್ಟ್ರದ ತಂಡ ನೀಡಿದ್ದ ೧೩೧ ರನ್‌ಗಳ ಗುರಿಯನ್ನು ಮೀರಿದ್ದೇ ಗರಿಷ್ಠ ಸಾಧನೆಯಾಗಿತ್ತು.

ಥ್ರಿಲ್ಲಿಂಗ್‌ ವಿಕ್ಟರಿ

೧೪೮ ರನ್‌ಗಳ ಗೆಲವಿನ ಗುರಿ ನೋಡುವವರಿಗೆ ಸುಲಭವಾಗಿ ಕಂಡಿತ್ತು. ಆದರೆ, ಟೀಮ್‌ ಇಂಡಿಯಾದ ಬ್ಯಾಟರ್‌ಗಳಿಗೆ ಅಷ್ಟೊಂದು ಸಲೀಸು ಎನಿಸಲಿಲ್ಲ. ಯಾಕೆಂದರೆ, ಕನ್ನಡಿಗ ಮತ್ತು ಟೀಮ್‌ ಇಂಡಿಯಾ ಉಪನಾಯಕ ಕೆ. ಎಲ್‌ ರಾಹುಲ್‌ ಸೊನ್ನೆ ರನ್‌ಗೆ ಔಟಾದರು. ಆಗ ಭಾರತ ತಂಡದ ಮೊತ್ತ ಕೇವಲ ಒಂದು. ಭಾರತ ತಂಡದ ಅಭಿಮಾನಿಗಳ ವಿಶ್ವಾಸ ಒಂದು ಬಾರಿಗೆ ಟುಸ್‌ ಎಂದಿತು. ಇದರೊಂದಿಗೆ ಅವರು ಪಾಕ್‌ ವಿರುದ್ಧ ತಾವು ವೀಕ್ ಎಂಬುದನ್ನು ಸಾಬೀತುಪಡಿಸಿದರು. ಕಳೆದ ವಿಶ್ವ ಕಪ್‌ನಲ್ಲಿಯೂ ಅವರು ೩ ರನ್‌ಗೆ ಗಂಟುಮೂಟೆ ಕಟ್ಟಿದ್ದರು. ಮೊದಲ ವಿಕೆಟ್‌ ಬೇಗ ಪತನಗೊಂಡರೆ ಎದುರಾಳಿ ತಂಡದ ಬೌಲರ್‌ಗಳು ಮೇಲುಗೈ ಸಾಧಿಸುವುದು ಖಚಿತ. ಅಂತೆಯೇ ಆಯಿತು. ಮತ್ತೊಬ್ಬ ಆರಂಭಿಕ ಆಟಗಾರ ರೋಹಿತ್‌ ಶರ್ಮ ಕೂಡ ೧೨ ರನ್‌ಗಳನ್ನು ಬಾರಿಸಿ ಔಟಾಗಿ ನಿರಾಸೆಯಿಂದ ಪೆವಿಲಿಯನ್‌ ಕಡೆಗೆ ಸಾಗಿದರು. ಮೂರನೆಯವರಾಗಿ ಆಡಲು ಬಂದಿದ್ದ ವಿರಾಟ್‌ ಕೊಹ್ಲಿಗೆ ಈ ಪಂದ್ಯ ೧೦೦ನೇ ಟಿ೨೦. ಈ ಪಂದ್ಯವನ್ನು ಸ್ಮರಣೀಯವಾಗಿಸುವುದು ಅವರ ಗುರಿಯೂ ಆಗಿತ್ತು. ಬಂದವರೇ ರನ್‌ ಗಳಿಕೆಗೆ ಮುಂದಾದರು. ತಾವೆದುರಿಸಿದ ಎರಡನೇ ಎಸೆತದಲ್ಲಿಯೇ ಜೀವದಾನ ಪಡೆದುಕೊಂಡರು. ಕೊಹ್ಲಿ ಮತ್ತು ಅವರ ಅಭಿಮಾನಿಗಳು ನೂರು ದೇವರಿಗೆ ಥ್ಯಾಂಕ್ಸ್‌ ಹೇಳಿದರು. ಬಳಿಕ ಒಂದು ಸಿಕ್ಸರ್‌, ಮೂರು ಫೋರ್‌ಗಳ ಸಮೇತ ೩೪ ಎಸೆತಗಳಲ್ಲಿ ೩೫ ರನ್‌ ಬಾರಿಸಿದರು. ಹೀಗಾಗಿ ಭಾರತ ತಂಡದ ರನ್‌ ಗಳಿಕೆಗೆ ವೇಗ ಸಿಕ್ಕಿತು. ಆದರೆ, ಅವರು ರೋಹಿತ್ ಶರ್ಮ ಅವರ ಬೆನ್ನಲ್ಲೇ ಪೆವಿಲಿಯನ್‌ಗೆ ಮರಳಿದ್ದು ಭಾರತ ತಂಡದ ಪಾಲಿಗೆ ಸಂಕಷ್ಟ ಎನಿಸಿಕೊಂಡಿತು.

ಕ್ರಮಾಂಕದಲ್ಲಿ ಬಡ್ತಿ ಪಡೆದು ನಾಲ್ಕನೆಯವರಾಗಿ ಆಡಲು ಬಂದ ರವೀಂದ್ರ ಜಡೇಜಾ ನಿಧಾನಗತಿಯಲ್ಲಿ ಆಡುತ್ತಾ ರನ್‌ ಕಲೆ ಹಾಕಲು ಆರಂಭಿಸಿದರು. ಅವರ ಜತೆ ಸೇರಿದ ಸೂರ್ಯ ಕುಮಾರ್‌ (೧೮) ಕೂಡ ವಿಶ್ವಾಸ ಮೂಡಿಸಿದರು. ಆದರೆ, ನಸೀಮ್‌ ಶಾ ಎಸೆತಕ್ಕೆ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಕಡೆಗೆ ಸಾಗಿದರು. ಈ ವೇಳೆ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ತಮ್ಮ ಬ್ಯಾಟಿಂಗ್‌ ಚಮತ್ಕಾರ ತೋರಿದರು. ಜಡೇಜಾ ಜತೆ ಸೇರಿ ರನ್‌ ಗಳಿಸುತ್ತಲೇ ಬಂದ ಅವರು ಕೊನೆ ಓವರ್‌ನಲ್ಲಿ ಗೆಲುವಿಗೆ ೭ ರನ್‌ ಬೇಕು ಎನ್ನುವಷ್ಟರ ಮಟ್ಟಕ್ಕೆ ಭಾರತಕ್ಕೆ ಮುನ್ನಡೆ ತಂದರು. ಆದರೆ, ಕೊನೇ ಓವರ್‌ನ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಲು ಮುಂದಾದ ಜಡೇಜಾ ಕ್ಲೀನ್‌ ಬೌಲ್ಡ್‌ ಆದಾಗ, ಮತ್ತೊಂದು ತುದಿಯಲ್ಲಿದ್ದ ಹಾರ್ದಿಕ್‌ ಹತಾಶೆಯಿಂದ ತಲೆ ಮೇಲೆ ಕೈ ಹೊತ್ತು ನಿಂತರು. ಬಳಿಕ ಬಂದ ದಿನೇಶ್‌ ಕಾರ್ತಿಕ್‌ ಒಂದು ರನ್‌ ತೆಗೆದು ಪಾಂಡ್ಯಗೆ ಸ್ಟ್ರೈಕ್‌ ಕೊಟ್ಟರು. ಆದರೆ, ನಂತರದ ಎಸೆತ ಪಾಂಡ್ಯ ಬ್ಯಾಟ್‌ಗೆ ತಾಗಲೇ ಇಲ್ಲ. ಹೀಗಾಗಿ ಕೊನೇ ಮೂರು ಎಸೆತಗಳಿಗೆ ೬ ರನ್‌ ಬೇಕಾಯಿತು. ಆದರೆ, ಸ್ಥೈರ್ಯ ಕಳೆದುಕೊಳ್ಳದ ಪಾಂಡ್ಯ ಮುಂದಿನ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ವಿಜಯದ ಕೇಕೆ ಹಾಕಿದರು.

ಬಿಗು ಬೌಲಿಂಗ್‌

ಟಾಸ್‌ ಗೆದ್ದ ತಕ್ಷಣ ನಾಯಕ ರೋಹಿತ್‌ ಶರ್ಮ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಭಾರತ ಬೌಲರ್‌ಗಳು ಸಿಕ್ಕಿದ್ದೇ ಚಾನ್ಸ್‌ ಎಂಬಂತೆ ತಮ್ಮಲ್ಲಿದ್ದ ಅಸ್ತ್ರಗಳನ್ನೆಲ್ಲ ಪ್ರಯೋಗಿಸಿದರು. ಹೀಗಾಗಿ ೧೫ ರನ್‌ ಗಳಿಸುವಷ್ಟರಲ್ಲಿ ಪಾಕಿಸ್ತಾನದ ನಾಯಕ ಬಾಬರ್‌ ಅಜಮ್‌ (೧೦ ರನ್‌) ಪೆವಿಲಿಯನ್‌ ಹಾದಿ ಹಿಡಿದರು. ನಂತರ ಬಂದ ಫಖರ್ ಜಮಾನ್‌ ಕೂಡ ೧೦ ರನ್‌ ಪೇರಿಸಿ ವಾಪಸಾದರು. ಬಾಬರ್‌ಗೆ ಭುವನೇಶ್ವರ್‌ ಕುಮಾರ್‌ ಹಾಗೂ ಫಖರ್‌ಗೆ ಆವೇಶ್‌ ಖಾನ್‌ ಪೆವಿಲಿಯನ್‌ ಹಾದಿ ತೋರಿದರು. ಬಳಿಕ ಬಂದ ಇಫ್ತಿಕಾರ್ ಅಹಮದ್‌ ೨೮ ರನ್‌ ಬಾರಿಸಿ ಕೊನೆಗೆ ಪಾಂಡ್ಯ ಎಸೆದ ಚಾಣಾಕ್ಷ ಎಸೆತಕ್ಕೆ ಬಲಿಬಿದ್ದರು. ಅದರೆ, ಇನ್ನೊಂದೆಡೆ ತಳವೂರಿ ಆಡಿದ ಮೊಹಮ್ಮದ್‌ ರಿಜ್ವಾನ್‌ ೪೩ ರನ್‌ ಗಳಿಸಿ ಪಾಕ್‌ ತಂಡಕ್ಕೆ ಮುನ್ನಡೆ ಕಲ್ಪಿಸುತ್ತಿದ್ದರು. ಅವರೂ ಕೂಡ ಪೆವಿಲಿಯನ್‌ಗೆ ವಾಪಸಾಗುವಂತೆ ಪಾಂಡ್ಯ ನೋಡಿಕೊಂಡರು. ಆ ಬಳಿಕ ಭಾರತ ಬೌಲರ್‌ಗಳು ಸತತವಾಗಿ ವಿಕೆಟ್‌ ಕಬಳಿಸುತ್ತಾ ಹೋದರು. ಒಂದು ಹಂತದಲ್ಲಿ ಪಾಕ್‌ ತಂಡ ೧೩೦ ರನ್‌ಗಳಿಗೆ ಇನಿಂಗ್ಸ್‌ ಕೊನೆಗೊಳಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಕೊನೆಯಲ್ಲಿ ಶಹನವಾಜ್‌ ದಹಾನಿ ಎರಡು ಸಿಕ್ಸರ್ ಸಮೇತ ೧೬ ರನ್‌ ಬಾರಿಸಿ ರನ್‌ ಗಳಿಕೆಯನ್ನು ೧೫೦ರ ಸಮೀಪಕ್ಕೆ ಕೊಂಡೊಯ್ದರು. ಭುವನೇಶ್ವರ್‌ ಕುಮಾರ್‌ ೨೬ ರನ್‌ಗಳಿಗೆ ೬ ವಿಕೆಟ್‌ ಪಡೆದರೆ, ಅರ್ಶ್ ದೀಪ್‌ ಕೂಡ ಎರಡು ವಿಕೆಟ್‌ ತಮ್ಮದಾಗಿಸಿಕೊಂಡರು. ಹಾರ್ದಿಕ್‌ ಪಾಂಡ್ಯ ೩ ವಿಕೆಟ್‌ ಉರುಳಿಸಿದರೆ ಆವೇಶ್ ಖಾನ್‌ ಒಂದು ವಿಕೆಟ್ ಗಿಟ್ಟಿಸಿಕೊಂಡು.

ಇದರೊಂದಿಗೆ ಏಷ್ಯಾ ಕಪ್‌ನ ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ವಿಜಯ ಸಾಧಿಸಿದ್ದು, ಬುಧವಾರ ಹಾಂಕಾಂಗ್‌ ವಿರುದ್ಧ ಎರಡನೇ ಪಂದ್ಯದಲ್ಲಿ ಸೆಣಸಾಡಲಿದೆ.

ಮೋದಿ ಅಭಿನಂದನೆ

ಪಾಕಿಸ್ತಾನ ತಂಡದ ವಿರುದ್ದ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಇದೊಂದು ಅದ್ಭುತ ಪ್ರದರ್ಶನ. ಪಾಕಿಸ್ತಾನ ವಿರುದ್ಧ ಗೆಲ್ಲುವ ಮೂಲಕ ಕ್ರಿಕೆಟ್ ಪ್ರೇಮಿ ದೇಶಕ್ಕೆ ಉತ್ತಮ ಉಡುಗೊರೆಯನ್ನು ಕೊಟ್ಟಿದ್ದೀರಿ. ಚೆನ್ನಾಗಿ ಆಡಿದಿರಿ ಟೀಮ್‌ ಇಂಡಿಯಾ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | IND vs PAK | 100ನೇ ಪಂದ್ಯವಾಡುತ್ತಿರುವ ವಿರಾಟ್‌ ಕೊಹ್ಲಿಗೆ ಶುಭಾಶಯಗಳ ಸುರಿಮಳೆ

Exit mobile version