ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ಇಂದು ನಡೆಯುವ ಅಂತಿಮ ಟಿ20 ಪಂದ್ಯಕ್ಕೆ ಭಾರತ ತಂಡ ತನ್ನ ಆಡುವ ಬಳಗದಲ್ಲಿ ಕನಿಷ್ಠ 2 ಬದಲಾವಣೆ ಮಾಡುವುದು ನಿಶ್ಚಿತ. 1-0 ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾಕ್ಕೆ ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಬಲವಾಣೆ ಮಾಡಬಹುದು.
ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ದ್ವಿತೀಯ ಪಂದ್ಯದಲ್ಲಿ ಆಡಲಿಳಿದ ಭಾರತ ಡಕ್ವರ್ತ್ ಲೂಯಿಸ್ ನಿಯಮದಿಂದ 5 ವಿಕೆಟ್ ಸೋಲು ಕಂಡಿತ್ತು. ಇದೀಗ ಸರಣಿಯ ಕೊನೆಯ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ಸ್ಟಾರ್ ಮುತ್ತು ಅನುಭವಿ ಆಟಗಾರರಾದ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಅವರನ್ನು ಕೈಬಿಟ್ಟು ಸೋಲಿನ ಏಟು ತಿಂದ ಭಾರತ ಈ ಪಂದ್ಯದಲ್ಲಿ ಇವರರಲ್ಲಿ ಇಬ್ಬರಿಗೆ ಅವಕಾಶ ನೀಡುವುದು ಖಚಿತ.
ದ್ವಿತೀಯ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಜಿತೇಶ್ ಶರ್ಮ ಮತ್ತು ತಿಲಕ್ ವರ್ಮ ಅವರನ್ನು ಕೈ ಬಿಟ್ಟು ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಅಧಿಕವಾಗಿದೆ. ಉಭಯ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದರೂ ಅವರನ್ನು ಕಳೆದ ಪಂದ್ಯಕ್ಕೆ ಬೆಂಚ್ ಕಾಯಿಸಿದ್ದಕ್ಕೆ ಅನೇಕ ಹಿರಿಯ ಮಾಜಿ ಆಟಗಾರರು ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದರು.
ರಿಂಕು ಮೇಲೆ ವಿಶ್ವಾಸ
ಬೌನ್ಸಿ ಪಿಚ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದು ನಾಯಕ ಸೂರ್ಯಕುಮಾರ್ ಮತ್ತು ರಿಂಕು ಸಿಂಗ್ ಮಾತ್ರ. ಹೀಗಾಗಿ ಈ ಪಂದ್ಯದಲ್ಲಿಯೂ ಉಭಯ ಆಟಗಾರರ ಬ್ಯಾಟಿಂಗ್ ಮೇಲೆ ತಂಡ ಹೆಚ್ಚಿನ ನಂಬಿಕೆ ಇರಿಸಿದೆ. ಇವರ ಜತೆ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಬ್ಯಾಟರ್ಗಳು ಈ ಪಂದ್ಯದಲ್ಲಿ ಮೈ ಚಳಿ ಬಿಟ್ಟು ಬ್ಯಾಟ್ ಬೀಸಿದರೆ ತಂಡಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ.
#TeamIndia have arrived in Johannesburg for the 3rd and final T20I. #SAvIND pic.twitter.com/4aabOX0tVN
— BCCI (@BCCI) December 13, 2023
ಮಳೆ ಭೀತಿ ಇಲ್ಲ
ವೆದರ್‌ಕಾಮ್ ನೀಡಿದ ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯ ನಡೆಯುವ ಜೋಹಾನ್ಸ್‌ಬರ್ಗ್‌ನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಇರಲಿದೆ ಎನ್ನಲಾಗಿದೆ. ಮಳೆ ಸಾಧ್ಯತೆ ಶೇ.5ರಷ್ಟು ಇರಲಿದೆ ಎಂದಿದೆ. ಹೀಗಾಗಿ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ದ್ವಿತೀಯ ಪಂದ್ಯವೂ ಮಳೆಯಿಂದ ಅಡಚಣೆಯಾಗಿ 15 ಓವರ್ಗಳ ಪಂದ್ಯ ನಡೆದಿತ್ತು. ಆದರೆ ಅಂತಿಮ ಪಂದ್ಯಕ್ಕೆ ಮಳೆ ಕಾಟ ಇಲ್ಲದಿರುವುದು ಅಭಿಮಾನಿಗಳಿಗೆ ಸಂತಸ ನೀಡಿದೆ.
ಇದನ್ನೂ ಓದಿ IPL 2024: ಯಾರಿಗೆ ಒಲಿಯಲಿದೆ ಐಪಿಎಲ್ ಟ್ರೋಫಿಯ ಶೀರ್ಷಿಕೆ ಪ್ರಾಯೋಜಕತ್ವ?
ಸಂಭಾವ್ಯ ತಂಡ
ಭಾರತ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಇಶಾನ್ ಕಿಶನ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಮುಖೇಶ್ ಕುಮಾರ್.
ದಕ್ಷಿಣ ಆಫ್ರಿಕಾ: ಮ್ಯಾಥ್ಯೂ ಬ್ರೀಟ್ಜ್ಕೆ, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಆಂಡಿಲ್ ಫೆಹ್ಲುಕ್ವಾಯೊ, ಜೆರಾಲ್ಡ್ ಕೊಯೆಟ್ಜಿ, ಲಿಜಾಡ್ ವಿಲಿಯಮ್ಸ್, ತಬ್ರೈಜ್ ಶಮ್ಸಿ.