ಪಾರ್ಲ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯ ಅಂತಿಮ ಹಾಗೂ ಮೂರನೇ ಪಂದ್ಯ ನಾಳೆ(ಗುರುವಾರ) ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್ನಲ್ಲಿ ನಡೆಯಲಿದೆ. 1-1 ಸರಣಿ ಸಮಬಲವಾದ ಕಾರಣ ಸರಣಿ ಗೆಲುವು ಸಾಧಿಸಲು ಇತ್ತಂಡಗಳಿಗೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಈ ಪಂದ್ಯವನ್ನು ತೀವ್ರ ಪೈಪೋಟಿಯಿಂದ ನಿರೀಕ್ಷೆ ಮಾಡಬಹುದು.
ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
ಭಾರತ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಕೊನೆಯ ಬಾರಿಗೆ ಏಕದಿನ ಸರಣಿ ಗೆಲುವು ಕಂಡಿದ್ದು 2018ರಲ್ಲಿ. ಇದಾದ ಬಳಿಕ ಭಾರತ ಆಡಿದ ಎಲ್ಲ ಏಕದಿನ ಸರಣಿಯಲ್ಲೂ ಸೋಲು ಕಂಡಿದೆ. ಇದೀಗ 5 ವರ್ಷದ ಬಳಿಕ ಈ ಪ್ರಶಸ್ತಿ ಬರವನ್ನು ನೀಗಿಸುವ ವಿಶ್ವಾಸದಲ್ಲಿ ರಾಹುಲ್ ಸಾರಥ್ಯದ ಯಂಗ್ ಟೀಮ್ ಇಂಡಿಯಾ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ ರಾಹುಲ್ ಸಾರಥ್ಯದಲ್ಲೇ ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಆಡಲಾಗಿತ್ತಾದರೂ ಗೆಲುವು ಸಿಕ್ಕಿರಲಿಲ್ಲ. ಇದೀಗ ಈ ಸೋಲಿನ ಸೇಡನ್ನು ರಾಹುಲ್ ತೀರಿಸಿಕೊಳ್ಳಬೇಕಿದೆ.
ಗಾಯಕ್ವಾಡ್ ಬ್ಯಾಟಿಂಗ್ ಚಿಂತೆ
ಟಿ20 ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದ ಋತುರಾಜ್ ಗಾಯಕ್ವಾಡ್ ಅವರ ಬ್ಯಾಟ್ ಏಕದಿನ ಸರಣಿಯಲ್ಲಿ ಸದ್ದು ಮಾಡುತ್ತಿಲ್ಲ. ಇವರ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗುತ್ತಿಲ್ಲ. ಪದಾರ್ಪಣ ಪಂದ್ಯವಾಡಿದ ಬಿ ಸಾಯಿ ಸುದರ್ಶನ್ ಉತ್ತಮವಾಗಿ ಆಡುತ್ತಿದ್ದರೂ ಅವರಿಗೆ ಗಾಯಕ್ವಾಡ್ ಸಾಥ್ ನೀಡುತ್ತಿಲ್ಲ. ಸರಣಿ ನಿರ್ಣಾಯಕ ಪಂದ್ಯದಲ್ಲಾದರೂ ಗಾಯಕ್ವಾಡ್ ದೃಢವಾದ ಆರಂಭ ಒದಗಿಸುವ ಅಗತ್ಯವಿದೆ.
ಇದನ್ನೂ ಓದಿ IND vs SA 3rd ODI: ಅಂತಿಮ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಹೇಗಿದೆ?
ದ್ವಿತೀಯ ಪಂದ್ಯದಲ್ಲಿ ತಂಡಕ್ಕೆ ಆಸರೆಯಾದದ್ದು ನಾಯಕ ಕೆ.ಎಲ್ ರಾಹುಲ್ ಮತ್ತು ಸಾಯಿ ಸುದರ್ಶನ್ ಮಾತ್ರ. ಉಭಯ ಆಟಗಾರರು ಅಧರ್ಶತಕ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಡಿಸಿದರು. ಸಾಯಿ ಸುದರ್ಶನ್ ಅವರು ಮೊದಲ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿದ್ದರು. ಚೊಚ್ಚಲ ಏಕದಿನ ಸರಣಿ ಆಡುತ್ತಿದ್ದರೂ ಆಡಿದ 2 ಪಂದ್ಯಗಳಲ್ಲಿಯೂ ಅರ್ಧಶತಕ ಬಾರಿಸಿ ತಂಡದ ಮತ್ತು ಆಯ್ಕೆ ಸಮಿತಿಯ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿಯೂ ಅವರ ಬ್ಯಾಟಿಂಗ್ ಮೇಲೆ ನಿರೀಕ್ಷೆ ಇರಿಸಲಾಗಿದೆ.
ಟ್ರ್ಯಾಕ್ಗೆ ಮರಳಿದ ಹರಿಣ ಪಡೆ
ಜೊಹಾನ್ಸ್ಬರ್ಗ್ನಲ್ಲಿ ಅತ್ಯಂತ ಕಳಪೆ ಮಟ್ಟದ ಬ್ಯಾಟಿಂಗ್ ನಡೆಸಿ ಹೀನಾಯವಾಗಿ ಸೋಲು ಕಂಡ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ದ್ವಿತೀಯ ಪಂದ್ಯದಲ್ಲಿ ಎಲ್ಲ ಲೋಪಗಳನ್ನು ಸರಿಪಡಿಸಿ ಪಂದ್ಯವನ್ನು ಗೆಎಲ್ಲುವ ಮೂಲಕ ಗ್ರೇಟ್ ಕಮ್ಬ್ಯಾಕ್ ಮಾಡಿದ್ದರು. ಹೀಗಾಗಿ ಭಾರತ ಈ ನಾಳಿನ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ. ಉತ್ಕೃಷ್ಟ ಮಟ್ಟದ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದೊಂದಿಗೆ ಎದುರಾಳಿ ತಂಡವನ್ನು ಕಟ್ಟಿ ಹಾಕಬೇಕಿದೆ.
ಸಂಭಾವ್ಯ ತಂಡ
ಭಾರತ: ಕೆ.ಎಲ್ ರಾಹುಲ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್/ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.
ದಕ್ಷಿಣ ಆಫ್ರಿಕಾ: ಟೋನಿ ಡಿ ಝೋರ್ಜಿ, ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ನಾಂಡ್ರೆ ಬರ್ಗರ್, ಲಿಜಾಡ್ ವಿಲಿಯಮ್ಸ್, ಬ್ಯೂರಾನ್ ಹೆಂಡ್ರಿಕ್ಸ್.