ಜೋಹಾನ್ಸ್ಬರ್ಗ್: ಅರ್ಶ್ದೀಪ್ ಸಿಂಗ್(5) ಮತ್ತು ಆವೇಶ್ ಖಾನ್(4) ಅವರ ಘಾತಕ ಬೌಲಿಂಗ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ಎದುರು 8 ವಿಕೆಟ್ಗಳ ಸೋಲು ಕಂಡಿದೆ. ಗೆಲುವು ಸಾಧಿಸಿದ ಕೆ.ಎಲ್ ರಾಹುಲ್ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಅರ್ಶದೀಪ್ ಸಿಂಗ್ ಅವರು ಘಾತಕ ಬೌಲಿಂಗ್ ದಾಳಿಯ ಮೂಲಕ ಆಘಾತವಿಕ್ಕಿದರು. ಅವರ ಬೌಲಿಂಗ್ ದಾಳಿಗೆ ತಡೆಯೊಡ್ಡಿ ನಿಲ್ಲುವಲ್ಲಿ ವಿಫಲವಾದ ಹರಿಣ ಪಡೆ ತರಗೆಲೆಯಂತೆ ಉದುರಿ 27.3 ಓವರ್ಗಳಲ್ಲಿ 116 ರನ್ಗೆ ಸರ್ವಪತನ ಕಂಡಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ಶ್ರೇಯಸ್ ಅಯ್ಯರ್(52) ಮತ್ತು ಪದಾರ್ಪಣ ಪಂದ್ಯವಾಡಿದ ಸಾಯಿ ಸುದರ್ಶನ್(ಅಜೇಯ 55) ಬಾರಿಸಿದ ಅರ್ಧಶತಕದ ನೆರವಿನಿಂದ 16.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 117 ರನ್ ಬಾರಿಸಿ ಗೆಲುವು ದಾಖಲಿಸಿತು. ಸರಣಿಯ ದ್ವಿತೀಯ ಪಂದ್ಯ ಡಿಸೆಂಬರ್ 19 ಮಂಗಳವಾರ ನಡೆಯಲಿದೆ.
A comfortable chase for India as Sai Sudharsan scores an unbeaten fifty on ODI debut 👏#SAvIND | 📝: https://t.co/41fhHQfcmC pic.twitter.com/i2AQxFbHMf
— ICC (@ICC) December 17, 2023
ಪದಾರ್ಪಣ ಪಂದ್ಯದಲ್ಲೇ ಅರ್ಧಶತಕ
ಚೇಸಿಂಗ್ ವೇಳೆ ಪದಾರ್ಪಣ ಪಂದ್ಯವಾಡಿದ ಸಾಯಿ ಸುದರ್ಶನ್ ಅವರು ಅರ್ಧಶತಕ ಬಾರಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಆರಂಭಿಕನಾಗಿ ಕಣಕ್ಕಿಳಿದ ಅವರು 10 ರನ್ ದಾಟುವ ಮುನ್ನವೇ ಎಲ್ಬಿಡಬ್ಲ್ಯು ಅಪಾಯದಿಂದ ಜೀವದಾನ ಪಡೆದರು. ದಕ್ಷಿಣ ಆಫ್ರಿಕಾ ಡಿಆರ್ಎಸ್ ಮೊರೆ ಹೋಗಿದ್ದರೆ ಅವರು ವಿಕೆಟ್ ಕಳೆದುಕೊಳ್ಳಬೇಕಿತ್ತು. ಟಿವಿ ರೀಪ್ಲೆಯಲ್ಲಿ ನೋಡುವಾಗ ಪಿಚಿಂಗ್ ಇನ್ಸೈಡ್ ಮತ್ತು ಚೆಂಡು ಸರಿಯಾಗಿ ವಿಕೆಟ್ಗೆ ಬಡಿದಿರುವ ಸ್ಪಷ್ಟವಾಗಿತ್ತು. ಆದರೆ ಮಾರ್ಕ್ರಮ್ ಡಿಆರ್ಎಸ್ ಪಡೆಯದ ಕಾರಣ ಸಾಯಿ ಸುದರ್ಶನ್ ಪಾರಾದರು. ಇದೇ ಅವಕಾಶವನ್ನು ಎರಡು ಕೈಗಳಿಂದ ಬಾಚಿದ ಅವರು ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. 43 ಎಸೆತ ಎದುರಿಸಿ 9 ಬೌಂಡರಿ ನೆರವಿನಿಂದ 55 ರನ್ ಬಾರಿಸಿದರು. ಇವರ ಜತೆಗಾರ ಶ್ರೇಯಸ್ ಅಯ್ಯರ್ 6 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ 52 ರನ್ ಗಳಿಸಿದರು. ಇನ್ನೇನು ಗೆಲುವಿಗೆ ಒಂದೆರಡು ರನ್ ಬೇಕಿದ್ದಾಗ ಅಯ್ಯರ್ ವಿಕೆಟ್ ಕಳೆದುಕೊಂಡರು.
ಇದನ್ನೂ ಓದಿ Arshdeep Singh: 5 ವಿಕೆಟ್ ಕಿತ್ತು ಭಾರತ ಪರ ನೂತನ ದಾಖಲೆ ಬರೆದ ಅರ್ಶ್ದೀಪ್ ಸಿಂಗ್
ಸಿಂಗ್ ಈಸ್ ಕಿಂಗ್
ಭರ್ತಿ 10 ಓವರ್ ಬೌಲಿಂಗ್ ದಾಳಿ ನಡೆಸಿದ ಅರ್ಶ್ದೀಪ್ ಸಿಂಗ್ ಕೇವಲ 37 ರನ್ ಬಿಟ್ಟುಕೊಟ್ಟು ಪ್ರಮುಖ 5 ವಿಕೆಟ್ ಕಿತ್ತು ‘ಸಿಂಗ್ ಈಸ್ ಕಿಂಗ್’ ಎನಿಸಿಕೊಂಡರು. ಪಂದ್ಯ ಆರಂಭಗೊಂಡು ಮೂರು ರನ್ ಆಗುವಷ್ಟರಲ್ಲಿ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಅವರು ದಕ್ಷಿಣ ಆಫ್ರಿಕಾಗೆ ಅವಳಿ ಆಘಾತ ನೀಡಿದರು. ಡೇಂಜರಸ್ ಬ್ಯಾಟರ್ಗಳಾದ ರೀಝಾ ಹೆಂಡ್ರಿಕ್ಸ್ ಮತ್ತು ರಸ್ಸಿ ವಾನ್ಡರ್ ಡುಸ್ಸೆನ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಪೆವಿಲಿಯನ್ಗೆ ಅಟ್ಟಿದರು. ಇದು ಬ್ಯಾಕ್ಟು ಬ್ಯಾಕ್ ವಿಕೆಟ್ ಆಗಿತ್ತು. ಇಬ್ಬರದ್ದು ಶೂನ್ಯ ಗಳಿಕೆ. ಹೆಂಡ್ರಿಕ್ಸ್ ಕ್ಲೀನ್ ಬೌಲ್ಡ್ ಆದರೆ, ಡುಸ್ಸೆನ್ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.
Maiden 5⃣-wicket haul in international cricket! 👏 👏
— BCCI (@BCCI) December 17, 2023
Take A Bow – @arshdeepsinghh 🙌 🙌
Follow the Match ▶️ https://t.co/tHxu0nUwwH #TeamIndia | #SAvIND pic.twitter.com/xhWmAxmNgK
ದಾಖಲೆ ಬರೆದ ಅರ್ಶ್ದೀಪ್
ಅರ್ಶ್ದೀಪ್ ಸಿಂಗ್ ಅವರು ಈ ಪಂದ್ಯದಲ್ಲಿ 5 ವಿಕೆಟ್ ಕೀಳುವ ಮೂಲಕ ಭಾರತ ಪರ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ದಕ್ಷಿಣ ಆಫ್ರಿಕಾ ಪರ 5 ವಿಕೆಟ್ ಕಿತ್ತ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಆದರೆ, ಒಟ್ಟಾರೆಯಾಗಿ ದಕ್ಷಿಣ ಆಫ್ರಿಕಾ ಪರ 5 ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪಟ್ಟಿಯಲ್ಲಿ ಅವರಿಗೆ ನಾಲ್ಕನೇ ಸ್ಥಾನ. ಸುನೀಲ್ ಜೋಶಿ ಮೊದಲಿಗ. ಜೋಶಿ 1999ರಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇವಲ 6 ರನ್ಗೆ 5 ವಿಕೆಟ್ ಕಿತ್ತು ಮಿಂಚಿದ್ದರು. ಉಳಿದ ಸಾಧಕರೆಂದರೆ ಯಜುವೇಂದ್ರ ಚಹಲ್ (22 ರನ್ಗೆ 5) ಮತ್ತು ರವೀಂದ್ರ ಜಡೇಜಾ (33 ರನ್ಗೆ 5).
ತೀವ್ರ ಪೈಪೋಟಿ ನೀಡಿದ ಆವೇಶ್ ಖಾನ್
ಜಿದ್ದಿಗೆ ಬಿದ್ದವರಂತೆ ಅರ್ಶ್ದೀಪ್ ಸಿಂಗ್ಗೆ ತೀವ್ರ ಪೈಪೋಟಿ ನೀಡಿದ ಅವೇಶ್ ಖಾನ್ ತಮ್ಮ ಆವೇಶಭರಿತ ಬೌಲಿಂಗ್ ದಾಳಿ ನಡೆಸುವ ಮೂಲಕ 27 ರನ್ ನೀಡಿ 4 ವಿಕೆಟ್ ಕಿತ್ತರು. ಉಭಯ ಬೌಲರ್ಗಳ ಘಾತಕ ಬೌಲಿಂಗ್ ದಾಳಿಯನ್ನು ಎದುರಿಸಲು ವಿಫಲವಾದ ಡೇವಿಡ್ ಮಿಲ್ಲರ್(2), ವಿಯಾನ್ ಮುಲ್ಡರ್(0), ಹೆನ್ರಿಕ್ ಕ್ಲಾಸೆನ್(6), ನಾಯಕ ಐಡೆನ್ ಮಾರ್ಕ್ರಮ್(12),ರಾಸ್ಸಿ ವ್ಯಾನ್ ಡೆರ್ ಡಸ್ಸೆನ್(0), ಹೆಂಡ್ರಿಕ್ಸ್(0) ಬಾರಿಸಿ ಪೆವಿಲಿಯನ್ ಪರೇಡ್ ನಡೆಸಿದರು.
ಆಸರೆಯಾದ ಫೆಹ್ಲುಕ್ವಾಯೊ
58ರನ್ಗೆ 7 ವಿಕೆಟ್ ಕಳೆದುಕೊಂಡು ಗಂಟುಮೂಟೆ ಕಟ್ಟುವ ಸ್ಥಿತಿಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಆಸರೆಯಾದ್ದು ಬೌಲರ್ ಆಂಡಿಲೆ ಫೆಹ್ಲುಕ್ವಾಯೊ. ಭಾರತೀಯ ಬೌಲರ್ಗಳ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ 2 ಸಿಕ್ಸರ್ ಮತ್ತು 3 ಬೌಂಡರಿ ಬಾರಿಸಿ 33 ರನ್ ಗಳಿಸಿದರು. ಇರರದ್ದೇ ತಂಡದ ಪರ ಅತ್ಯಧಿಕ ಗಳಿಕೆ. ಒಂದೊಮ್ಮೆ ಇವರು ಈ ಮೊತ್ತವನ್ನು ಬಾರಿಸುತ್ತಿರದಿದ್ದರೆ ಹರಿಣ ಪಡೆ 70 ರನ್ಗೆ ಆಲೌಟ್ ಆಗುತ್ತಿತ್ತು. ಇವರ ಈ ಬ್ಯಾಟಿಂಗ್ನಿಂದಾಗಿ ಕನಿಷ್ಠ 100 ರನ್ಗಳ ಗಡಿ ದಾಟುವಂತಾಯಿತು. ಅಂತಿಮ ವಿಕೆಟ್ ಕುಲ್ದೀಪ್ ಪಾಲಾಯಿತು.