ಬಾರ್ಬಡೋಸ್: ಹಾಲಿ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ(IND vs SA Final) ಲೀಗ್, ಸೂಪರ್-8 ಮತ್ತು ನಾಕೌಟ್ ಪಂದ್ಯಗಳಿಗೆ ಮಳೆಯಿಂದ ಅಡಚಣೆ ಉಂಟಾಗಿತ್ತು. ಇದೀಗ ಇಂದು ನಡೆಯುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಫೈನಲ್ ಪಂದ್ಯಕ್ಕೂ ಭಾರೀ ಮಳೆ ಭೀತಿ ಎದುರಾಗಿದೆ.
ಫೈನಲ್ ಪಂದ್ಯಕ್ಕೂ ಹವಾಮಾನ ಇಲಾಖೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಶೇ.70ರಷ್ಟು ಮಳೆಯಾಗಲಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಒಂದೊಮ್ಮೆ ನಿಗದಿತ ದಿನ ಪಂದ್ಯ ನಡೆಯದೇ ಇದ್ದರೆ, ಮೀಸಲು ದಿನಕ್ಕೆ ಮುಂದುವರಿಯಲಿದೆ. ಸೂಪರ್ 8 ಹಂತದಲ್ಲಿ ಮತ್ತು ಸೆಮಿಫೈನಲ್ ಪಂದ್ಯ ಮಳೆಯಿಂದ ಮೀಸಲು ದಿನವೂ ಫಲಿತಾಂಶ ಕಾಣದಿದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸ್ಥಾನ ಮುಂದಿನ ಹಂತಕ್ಕೇರುತ್ತದೆ. ಆದರೆ ಫೈನಲ್ ಪಂದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ.
ಮುಖಾಮುಖಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೆ 26 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 14 ಪಂದ್ಯ ಗೆದ್ದರೆ, ದಕ್ಷಿಣ ಆಫ್ರಿಕಾ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 6 ಪಂದ್ಯಗಳಲ್ಲಿ ಆಡಿದ್ದು, ಭಾರತ 4 ಪಂದ್ಯ ಗೆದ್ದಿದೆ. 2 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಕಂಡಿದೆ. 2022ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಅಂತರದ ಸೋಲು ಕಂಡಿತ್ತು.
ಜಂಟಿ ವಿಜೇತರ ಘೋಷಣೆ
ಒಂದು ವೇಳೆ ಫೈನಲ್(T20 World Cup 2024) ಪಂದ್ಯ ಮೀಸಲು ದಿನದಲ್ಲಿಯೂ ನಡೆಯದೇ ಹೋದರೆ, ಆಗ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. 2002ರಲ್ಲಿ ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಮಳೆಯಿಂದ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಭಾರತ ಮತ್ತು ಆತಿಥೇಯ ಶ್ರೀಲಂಕಾ ಎರಡು ತಂಡಗಳನ್ನು ಜಂಟಿ ವಿಜೇತರನ್ನಾಗಿ ಘೋಷಣೆ ಮಾಡಲಾಗಿತ್ತು.
ಕೊಲಂಬೊದಲ್ಲಿ ನಡೆದಿದ್ದ ಆ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 5 ವಿಕೆಟ್ಗೆ 244 ರನ್ ಗಳಿಸಿತು. ಭಾರತ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿದ ವೇಳೆ ಜೋರಾಗಿ ಮಳೆ ಸುರಿಯಿತು. ಮಳೆ ಬಿಡುವು ನೀಡದೆ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು. ಇದೀಗ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಕೂಡ ಪೂರ್ಣ ಫಲಿತಾಂಶ ಕಾಣದಿದ್ದರೆ ಇತ್ತಂಡಗಳು ಕೂಡ ಜಂಟಿ ಚಾಂಪಿಯನ್ ಎನಿಸಿಕೊಳ್ಳಲಿದೆ. ಭಾರತ 2ನೇ ಕಪ್ ಗೆದ್ದರೆ, ದಕ್ಷಿಣ ಆಫ್ರಿಕಾ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದಂತಾಗುತ್ತದೆ.