ಗ್ಕೆಬರ್ಹಾ: ಮಳೆ ಪೀಡಿತ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ(IND vs SA) ವಿರುದ್ಧ ಆತಿಥೇಯ ದಕ್ಷಿಣ ಆಫ್ರಿಕಾ ಡಕ್ವರ್ತ್ ಲೂಯಿಸ್ ನಿಯಮದ ಅನುಸಾರ 5 ವಿಕೆಟ್ಗಳ ಗೆಲುವು ಸಾಧಿಸಿದೆ. ಸೋಲಿನಿಂದ ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಬಾರಿಸಿದ ಅರ್ಧಶತಕ ವ್ಯರ್ಥವಾಯಿತು. ಒಂದೊಮ್ಮೆ ಮಳೆ ಬಾರದೇ ಇದ್ದಿದ್ದರೆ ಭಾರತಕ್ಕೆ ಗೆಲ್ಲುವ ಸಾಧ್ಯತೆ ಇರುತ್ತಿತ್ತು.
ಇಲ್ಲಿನ ಗ್ಕೆಬರ್ಹಾ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಾಯಕ ಐಡೆನ್ ಮಾರ್ಕ್ರಮ್ ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದರು. ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಆ ಬಳಿಕ ಚೇತರಿಸಿಕೊಂಡ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿತು. 19.3 ಓವರ್ಗಳಲ್ಲಿ 7 ವಿಕೆಟ್ಗೆ 180 ರನ್ಗಳಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತದ ಬ್ಯಾಟಿಂಗ್ ಇನಿಂಗ್ಸ್ ಇಲ್ಲಿಗೆ ನಿಲ್ಲಿಸಿ ದಕ್ಷಿಣ ಆಫ್ರಿಕಾ ಗೆಲುವಿಗೆ 15 ಓವರ್ಗಳಲ್ಲಿ 152 ರನ್ ಗುರಿ ನೀಡಲಾಯಿತು.
152 ರನ್ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ 13.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 154 ರನ್ ಬಾರಿಸಿ ಗೆಲುವು ದಾಖಲಿಸಿತು. ಚೇಸಿಂಗ್ ವೇಳೆ ಆರಂಭಕಾರ ರೀಜಾ ಹೆಂಡ್ರಿಕ್ಸ್ 27 ಎಸೆತಗಳಲ್ಲಿ 49 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದರು. ಆ ಬಳಿಕ ಬಂದ ನಾಯಕ ಮಾರ್ಕ್ರಮ್ ಕೂಡ ಸಿಡಿದು ನಿಂತು 30 ರನ್ ಚಚ್ಚಿದರು. ಇಲ್ಲಿಗೆ ದಕ್ಷಿಣ ಆಫ್ರಿಕಾದ ಗೆಲುವು ಕೂಡ ಖಚಿತವಾಯಿತು. ಅಂತಿಮವಾಗಿ ಟ್ರಿಸ್ಟಾನ್ ಸ್ಟಬ್ಸ್(14) ಮತ್ತು ಆಂಡಿಲೆ ಫೆಹ್ಲುಕ್ವಾಯೊ(10) ಅಜೇಯ ರನ್ ಬಾರಿಸಿ ತಂಡದವನ್ನು ಗೆಲುವಿನ ದಡ ಸೇರಿಸಿದರು. ಭಾರತ ಪರ ಬೌಲಿಂಗ್ನಲ್ಲಿ ಮುಖೇಶ್ ಕುಮಾರ್ 2 ವಿಕೆಟ್ ಕಿತ್ತರು. ಅನುಭವಿ ಸಿರಾಜ್ 27 ರನ್ ಬಿಟ್ಟುಕೊಟ್ಟು ಕೇವಲ 1 ವಿಕೆಟ್ ಉರುಳಿಸಿದರು.
A solid fight from #TeamIndia but it was South Africa who won the 2nd #SAvIND T20I (via DLS Method).
— BCCI (@BCCI) December 12, 2023
We will look to bounce back in the third & final T20I of the series. 👍 👍
Scorecard 👉 https://t.co/4DtSrebAgI pic.twitter.com/wfGWd7AIX4
ಖಾತೆ ತೆರೆಯದ ಗಿಲ್-ಜೈಸ್ವಾಲ್
ಇದಕ್ಕೂ ಮುನ್ನ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಮಾರ್ಕೊ ಜಾನ್ಸೆನ್ ದೊಡ್ಡ ಆಘಾತ ನೀಡಿದರು. ಮೊದಲ ಓವರ್ನ ಮೂರನೇ ಎಸೆತದಲ್ಲೇ ಯಶಸ್ವಿ ಜೈಸ್ವಾಲ್(0) ಅವರ ವಿಕೆಟ್ ಕಿತ್ತರು. ಕವರ್ನಲ್ಲಿ ನಿಂತಿದ್ದ ಡೇವಿಡ್ ಮಿಲ್ಲರ್ ಅವರು ಜಿಂಕೆಯಂತೆ ಜಿಗಿದು ಕ್ಯಾಚ್ ಹಿಡಿಯುವ ಮೂಲಕ ಜೈಸ್ವಾಲ್ಗೆ ಪೆವಿಲಿಯನ್ ದಾರಿ ತೋರಿದರು. ಭಾರತ ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡಿತು.
ಇದೇ ಓವರ್ನ ನಾಲ್ಕನೇ ಎಸೆದಲ್ಲಿ ತಿಲಕ್ ವರ್ಮ ವಿಕೆಟ್ ಕೂಡ ಬೀಳುತ್ತಿತ್ತು. ಜೈಸ್ವಾಲ್ ಅವರಂತೆ ಕ್ಯಾಚ್ ನೀಡಿ ತಿಲಕ್ ಕೂಡ ಬ್ಯಾಕ್ಟು ಬ್ಯಾಕ್ ವಿಕೆಟ್ ಒಪ್ಪಿಸುತ್ತಿದ್ದರು. ಡೇವಿಡ್ ಮಿಲ್ಲರ್ ಅವರಿಗೆ ಈ ಕ್ಯಾಚ್ ಬಂದಿತ್ತು. ಆದರೆ ಡೈವಿಂಗ್ನಲ್ಲಿ ಕ್ಯಾಚ್ ಪಡೆದ ಬಳಿಕ ಮೈದಾನಕ್ಕೆ ಬೀಳುವ ವೇಳೆ ಚೆಂಡು ಕೈಯಿಂದ ಜಾರಿತು. ಜೀವದಾನ ಪಡೆದ ತಿಲಕ್ 4 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ 29 ರನ್ ಗಳಿಸಿದರು. ವಿಶ್ವಕಪ್ ಬಳಿಕ ವಿಶ್ರಾಂತಿ ಪಡೆದು ಈ ಸರಣಿಯಲ್ಲಿ ಆಡಲಿಳಿದ ಭರವಸೆಯ ಆಟಗಾರ ಶುಭಮನ್ ಗಿಲ್ 2 ಎಸೆತ ಎದುರಿಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ವಿಲಿಯಮ್ಸ್ ಎಸೆತಕ್ಕೆ ಎಲ್ಬಿಡಬ್ಲ್ಯು ಆದರು.
ಇದನ್ನೂ ಓದಿ ಕೊಹ್ಲಿಯ ದಾಖಲೆ ಸರಿಗಟ್ಟಿ, ರಾಹುಲ್ ದಾಖಲೆ ಮುರಿದ ಸೂರ್ಯಕುಮಾರ್
ರಿಂಕು-ಸೂರ್ಯ ಅರ್ಧಶತಕ ವ್ಯರ್ಥ
ಆರಂಭಿಕ ಆಘಾತ ಎದುರಿಸಿದ ಭಾರತ ತಂಡಕ್ಕೆ ಆಸರೆಯಾದದ್ದು ರಿಂಕು ಸಿಂಗ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್. ಉಭಯ ಆಟಗಾರರು ಭಯ ಮುಕ್ತವಾಗಿ ಬ್ಯಾಟಿಂಗ್ ನಡೆಸಿದರು. ಸೂರ್ಯಕುಮಾರ್ ತಮ್ಮ ಎಂದಿನ ಶೈಲಿಯಲ್ಲೇ ಹೊಡಿ ಬಡಿ ಆಟವಾಡಿ ಅರ್ಧಶತಕ ಬಾರಿಸಿದರು. ಅರ್ಧಶತಕ ಬಾರಿಸಿದ ಬಳಿಕ ತಬ್ರೆಜ್ ಶಂಸಿ ಅವರ ಓವರ್ನಲ್ಲಿ ಸಿಕ್ಸರ್ ಬಾರಿಸಲು ಹೋದ ಸೂರ್ಯಕುಮಾರ್ ಲಾಂಗ್ ಆನ್ನಲ್ಲಿ ಜಾನ್ಸೆನ್ಗೆ ಕ್ಯಾಚ್ ನೀಡಿದರು. ಒಟ್ಟು 36 ಎಸೆತ ಎದುರಿಸಿದ ಅವರು ಸೊಗಸಾದ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 56 ರನ್ ಬಾರಿಸಿದರು. ರಿಂಕು ಜತೆಗೂಡಿ 4ನೇ ವಿಕೆಟ್ಗೆ 70 ರನ್ ಒಟ್ಟುಗೂಡಿಸಿದರು.
ಚೊಚ್ಚಲ ಅರ್ಧಶತಕ
ಸೂರ್ಯಕುಮಾರ್ ಅವರೊಂದಿಗೆ ಉತ್ತಮ ಇನಿಂಗ್ಸ್ ಕಟ್ಟಿದ ರಿಂಕು ಅವರು ಸೂರ್ಯ ವಿಕೆಟ್ ಪತನದ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿ ಅವರು ಕೂಡ ಅರ್ಧಶತಕ ಬಾರಿಸಿದರು. ಇದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಅರ್ಧಶತಕ. ಇಶಾನ್ ಕಿಶನ್ ಸ್ಥಾನದಲ್ಲಿ ಆಡಲಿಳಿದ ವಿಕೆಟ್ ಕೀಪರ್ ಜಿತೇಶ್ ಶರ್ಮ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಆರಂಭದಲ್ಲಿ ಬೌಂಡರಿ ಮಾತ್ರ ಗಳಿಸಿದ್ದ ರಿಂಕು ಪಂದ್ಯದ ಕೊನೆಯ 2 ಓವರ್ ಇರುವಾಗ 2 ಸಿಕ್ಸರ್ ಚಚ್ಚಿದರು. ಒಟ್ಟಾರೆ 39 ಎಸೆತ ಎದುರಿಸಿದ ರಿಂಕು 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ ಅಜೇಯ 68 ರನ್ ಬಾರಿಸಿದರು. ರವೀಂದ್ರ ಜಡೇಜಾ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿ 19 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೋಟ್ಜಿ 3 ವಿಕೆಟ್ ಕಿತ್ತರು. ಪಂದ್ಯ ಸೋತ ಕಾರಣ ಸೂರ್ಯಕುಮಾರ್ ಮತ್ತು ರಿಂಕು ಸಿಂಗ್ ಬಾರಿಸಿದ ಅರ್ಧಶತಕ ವ್ಯರ್ಥವಾಯಿತು.