ಬಾರ್ಬಡೋಸ್: ಚುಟುಕು ಮಾದರಿಯ ಫೈನಲ್(South Africa vs India Final) ಕಾದಾಟಕ್ಕೆ ವೇದಿಕೆ ಸಿದ್ದಗೊಂಡಿದೆ. ನಾಳೆ ನಡೆಯುವ ಫೈನಲ್(T20 World Cup 2024) ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಕೂಟದ ಅಜೇಯ ತಂಡಗಳ ನಡುವಣ ಈ ಪ್ರಶಸ್ತಿ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.
ಭಯಮುಕ್ತರಾಗಿ ಆಡಬೇಕು
ಭಾರತ ತಂಡದ ದೊಡ್ಡ ಸಮಸ್ಯೆ ಎಂದರೆ ಲೀಗ್, ಸೆಮಿಫೈನಲ್ನಲ್ಲಿ ಎಷ್ಟೇ ಉತ್ತಮ ಪ್ರದರ್ಶನ ತೋರಿದರೂ ಕೂಡ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಂಪೂರ್ಣ ನರ್ವಸ್ ಆಗಿ ಆಡುವುದು. ಒಂದು ವಿಕೆಟ್ ಬಿದ್ದರೆ ಸಾಕು ಬಳಿಕ ಕ್ರೀಸ್ಗಿಳಿವ ಬ್ಯಾಟರ್ಗಳು ಭಯದಿಂದಲೇ ಆಡಲು ಮುಂದಾಗಿ ಸತತವಾಗಿ ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುತ್ತಾರೆ. ಕಳೆದ ಏಕದಿನ ವಿಶ್ವಕಪ್ ಫೈನಲ್, ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಇದಕ್ಕೆ ಉತ್ತಮ ನಿದರ್ಶನ. ಹೀಗಾಗಿ ನಾಳೆ ನಡೆಯುವ ಫೈನಲ್ ಪಂದ್ಯದಲ್ಲಿ ಬ್ಯಾಟರ್ಗಳು ಮತ್ತು ಬೌಲರ್ಗಳು ವಿಚಲಿತರಾಗದೆ ಆಡಬೇಕು.
ವಿರಾಟ್ ಕೊಹ್ಲಿ ಅವರು ಸತತವಾಗಿ ಬ್ಯಾಟಿಂಗ್ ವೈಫಲ್ಯ ಕಂಡರೂ ಕೂಡ ಫೈನಲ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಾರೆ ಎಂದು ನಾಯಕ ರೋಹಿತ್ ಶರ್ಮ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ ಕೋಚ್ ದ್ರಾವಿಡ್ ಕೂಡ ಕೊಹ್ಲಿಗೆ ವಿಶೇಷ ಸ್ಫೂರ್ತಿ ತುಂಬುವ ಮೂಲಕ ಫೈನಲ್ ಪಂದ್ಯಕ್ಕೆ ಸಿದ್ದಪಡಿಸಿದ್ದಾರೆ. ಶಿವಂ ದುಬೆ ಮಾತ್ರ ಬ್ಯಾಟಿಂಗ್ ಸುಧಾರಣೆ ಕಾಣುವಂತೆ ತೋರುತ್ತಿಲ್ಲ. ಹೀಗಾಗಿ ಅವರನ್ನು ಕೈ ಬಿಟ್ಟು ಯಶಸ್ವಿ ಜೈಸ್ವಾಲ್ ಅವರನ್ನು ಆಡಿಸಿದರೆ ಉತ್ತಮ.
ಒಂದು ಬದಲಾವಣೆ ಸಾಧ್ಯತೆ
ಆರಂಭಿಕ ಆಟಗಾರನಾಗಿರುವ ಜೈಸ್ವಾಲ್ ಅವರು ರೋಹಿತ್ ಜತೆ ಇನಿಂಗ್ಸ್ ಆರಂಭಿಸಿದರೆ ಕೊಹ್ಲಿ ತಮ್ಮ ಎಂದಿನ ವನ್ಡೌನ್ ಕ್ರಮಾಂಕದಲ್ಲಿ ಆಡಬಹುದು. ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸುವ ಸಾಧ್ಯತೆ ಇಲ್ಲ. ಮೂರು ಸ್ಪಿನ್ನರ್ ಮತ್ತು 2 ವೇಗಿಗಳ ಕಾಂಬಿನೇಷನ್ನಲ್ಲಿಯೇ ಆಡಬಹುದು. ಪಂತ್ ಪ್ರಯೋಗಾತ್ಮಕ ಶೈಲಿಯ ಬ್ಯಾಟಿಂಗ್ ನಡೆಸುವ ಬದಲು ತಮ್ಮ ಮೂಲ ಸ್ವರೂಪದ ಶೈಲಿಯಲ್ಲೇ ಆಡಿದರೆ ಉತ್ತಮ. ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗುತ್ತಿದ್ದರೆ. ಫೈನಲ್ನಲ್ಲಿಯೂ ಈ ಪ್ರದರ್ಶನ ಕಂಡುಬಂದರೆ ಉತ್ತಮ. ಅಕ್ಷರ್ ಪಟೇಲ್ ತಮ್ಮ ಆಲ್ರೌಂಡರ್ ಸ್ಥಾನಕ್ಕೆ ತಕ್ಕ ಪ್ರದರ್ಶನ ತೋರುತ್ತಿದ್ದಾರೆ. ಫೀಲ್ಡಿಂಗ್, ಬ್ಯಾಟಿಂಗ್ ಮತ್ತು ಬೌಲಿಂಗ್ ಎಲ್ಲ ವಿಭಾಗದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುತ್ತಿದ್ದಾರೆ.
ಇದನ್ನೂ ಓದಿ IND Vs SA T20 WC Final: ಫೈನಲ್ ಪಂದ್ಯಕ್ಕೂ ಮಳೆ ಭೀತಿ; ಪಂದ್ಯ ರದ್ದಾದರೆ ವಿಜೇತರ ನಿರ್ಧಾರ ಹೇಗೆ?
ದಕ್ಷಿಣ ಆಫ್ರಿಕಾ ಕೂಡ ಬಲಿಷ್ಠ
ದಕ್ಷಿಣ ಆಫ್ರಿಕಾ ಕೂಡ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ವೈವಿಧ್ಯಮಯವಾಗಿದೆ. ಆದರೆ, ಲಕ್ ಕೈ ಹಿಡಿಯುತ್ತಾ ಎನ್ನುವುದು ಇಲ್ಲಿ ಮುಖ್ಯ. ಡಿ ಕಾಕ್, ಮಾರ್ಕ್ರಮ್, ಕ್ಲಾಸೆನ್, ಮಿಲ್ಲರ್ ಸಿಡಿದು ನಿಂತರೆ ಕಷ್ಟ. ಬೌಲಿಂಗ್ನಲ್ಲಿ ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಶಮ್ಸಿ ಉತ್ತಮ ಬೌಲಿಂಗ್ ಲಯದಲ್ಲಿದ್ದಾರೆ.
ಸಂಭಾವ್ಯ ತಂಡ
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೀ), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಜೆ, ತಬ್ರೈಜ್ ಶಮ್ಸಿ
ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೀ), ಸೂರ್ಯಕುಮಾರ್ ಯಾದವ್, ಶಿವಂ ದುಬೆ/ ಯಶಸ್ವಿ ಜೈಸ್ವಾಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.