Site icon Vistara News

IND vs SA: ದಕ್ಷಿಣ ಆಫ್ರಿಕಾದಲ್ಲಿ ಕನ್ನಡದ ಕಂಪು ಸಾರಿದ ಕೆಎಲ್​ ರಾಹುಲ್​-ಪ್ರಸಿದ್ಧ್​ ಕೃಷ್ಣ

kl rahul and prasidh krishna

ಜೊಹಾನ್ಸ್​ಬರ್ಗ್​: ಕರ್ನಾಟಕದ ಕ್ರಿಕೆಟಿಗರಾದ ಕೆ.ಎಲ್​ ರಾಹುಲ್(KL Rahul)​ ಮತ್ತು ಪ್ರಸಿದ್ಧ್​ ಕೃಷ್ಣ(Prasidh Krishna) ಅವರು ಸೆಂಚುರಿಯನ್​ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕನ್ನಡದಲ್ಲೇ ಮಾತನಾಡಿದ್ದಾರೆ. ಈ ವಿಡಿಯೊ ಎಲ್ಲಡೆ ವೈರಲ್​ ಆಗಿದ್ದು ಉಭಯ ಆಟಗಾರರು ಕನ್ನಡಿಗರ ಮನ ಗೆದ್ದಿದ್ದಾರೆ. ಎಲ್ಲೇ ಹೋದರೂ ನಮ್ಮ ಭಾಷೆ ಕನ್ನಡವನ್ನು ಮರೆಯದ ನಿಮಗೆ ಸಲಾಂ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್​ ಸಿರಾಜ್​ ಅವರ ಎಸೆತದಲ್ಲಿ ಡೀನ್​ ಎಲ್ಗರ್​ ಲಾಂಗ್​ ಆನ್​ ಕಡೆ ಬ್ಯಾಟ್​ ಬೀಸಿದರು. ಈ ವೇಳೆ ಫೀಲ್ಡಿಂಗ್​ ನಡೆಸುತ್ತಿದ್ದ ಪ್ರಸಿದ್ಧ್​ ಕೃಷ್ಣ ಓಡಿ ಬಂದು ಚೆಂಡನ್ನು ಹಿಡಿದು ವಿಕೆಟ್​ ಕೀಪರ್​ ಬಳಿ ಎಸೆದರು. ಕೀಪಿಂಗ್​ ನಡೆಸುತ್ತಿದ್ದ ರಾಹುಲ್​ ‘ಕೈಗ್ ಹಾಕೋಲೋ’ ಎಂದು ಹೇಳಿದ್ದಾರೆ. ಇದು ಸ್ಟಂಪ್​ ಮೈಕ್​ನಲ್ಲಿ ರೆಕಾರ್ಡ್​ ಆಗಿದೆ. ಈ ದೃಶ್ಯವನ್ನು ಸ್ಟಾರ್​ ಸ್ಪೋರ್ಟ್ಸ್​ ಕನ್ನಡ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ. ರಾಹುಲ್​ ಮತ್ತು ಪ್ರಸಿದ್ಧ್​ ಕೃಷ್ಣ ಇಬ್ಬರು ಕರ್ನಾಟಕದವರಾಗಿದ್ದು ದೇಶೀಯ ಕ್ರಿಕೆಟ್​ನಲ್ಲಿ ಕನ್ನಡದಲ್ಲೇ ಮಾತನಾಡುತ್ತಾರೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿಯೂ ಕೂಡ ತಮ್ಮ ಭಾಷಾಭಿಮಾನ ತೋರಿದ್ದು ಕನ್ನಡಿಗರ ಮನ ಗೆಲ್ಲುವಂತೆ ಮಾಡಿದೆ.

ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​ ಪರ ಆಡುವ ವೇಳೆ ಮಯಾಂಕ್​ ಅಗರ್ವಾಲ್​ ಮತ್ತು ರಾಹುಲ್​ ಮೈದಾನದಲ್ಲಿ ಕನ್ನಡದಲ್ಲೇ ಮಾತನಾಡಿದ್ದ ವಿಡಿಯೊ ಕೂಡ ವೈರಲ್​ ಆಗಿತ್ತು. ರಾಹುಲ್​ ಅವರು ತಂಡದಲ್ಲಿ ಕರ್ನಾಟಕದ ಆಟಗಾರನಿದ್ದರೆ ಆತನ ಬಳಿಕ ಇಂಗ್ಲೀಷ್​ ಬದಲು ಕನ್ನಡದಲ್ಲೇ ಸಂಭಾಷಣೆ ಮಾಡುತ್ತಾರೆ.

ಇದನ್ನೂ ಓದಿ Viral Video: ಲಿಫ್ಟ್​ನಲ್ಲಿ ಸಿಲುಕಿಕೊಂಡ ಅಂಪೈರ್​, ತಡವಾಗಿ ಆರಂಭಗೊಂಡ ಪಂದ್ಯ

ಹಲವು ದಾಖಲೆ ಬರೆದ ರಾಹುಲ್​

ಈ ಪಂದ್ಯದಲ್ಲಿ ರಾಹುಲ್​ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ. ಸೆಂಚುರಿಯನ್​ ಮೈದಾನದಲ್ಲಿ ಸತತ 2 ಶತಕ ಬಾರಿಸಿದ ಮೊದಲ ವಿದೇಶಿ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ರಾಹುಲ್ ಹೊರತುಪಡಿಸಿ ಸೆಂಚುರಿಯನ್​ನಲ್ಲಿ ಉಳಿದ ಯಾವುದೇ ವಿದೇಶಿ ಬ್ಯಾಟರ್‌ ಟೆಸ್ಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿಲ್ಲ. 2021ರಲ್ಲಿ ರಾಹುಲ್​ ಇಲ್ಲಿ ಆರಂಭಿಕನಾಗಿ ಕಣಕ್ಕಿಳಿದು 123 ರನ್​ ಬಾರಿಸಿದ್ದರು.

ವಿಕೆಟ್​ ಕೀಪರ್​ ಆಗಿಯೂ ದಾಖಲೆ

ರಾಹುಲ್​ ಅವರು ಈ ಶತಕದೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ ಭಾರತದ ಎರಡನೇ ವಿಕೆಟ್‌ ಕೀಪರ್‌ ಎಂಬ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ರಿಷಭ್‌ ಪಂತ್‌ ಅವರು ಈ ಸಾಧನೆ ಮಾಡಿದ್ದರು. 

ಸಚಿನ್​ ದಾಖಲೆ ಸರಿಗಟ್ಟಿದ ರಾಹುಲ್

ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ್ದ ಸಚಿನ್ ತೆಂಡುಲ್ಕರ್ ಹಾಗೂ ಅಜಿಂಕ್ಯ ರಹಾನೆ ಅವರ ದಾಖಲೆಯನ್ನು ರಾಹುಲ್​ ಈ ಶತಕದ ಮೂಲಕ ಸರಿಗಟ್ಟಿದ್ದಾರೆ. ಸಚಿನ್​ ಮತ್ತು ರಹಾನೆ ತಲಾ ಎರಡು ಬಾಕ್ಸಿಂಗ್ ಡೇ ಟೆಸ್ಟ್​ ಶತಕ ಬಾರಿಸಿದ್ದರು. ಇದೀಗ ರಾಹುಲ್​ ಕೂಡ 2 ಶತಕ ಬಾರಿಸಿ ಜಂಟಿ ದಾಖಲೆ ಹೊಂದಿದ್ದಾರೆ. ಒಂದೊಮ್ಮೆ ದ್ವಿತೀಯ ಇನಿಂಗ್ಸ್​ನಲ್ಲಿ ರಾಹುಲ್​ ಶತಕ ಬಾರಿಸಿದರೆ ಸಚಿನ್​ ಮತ್ತು ರಹಾನೆ ದಾಖಲೆ ಪತನಗೊಳ್ಳಲಿದೆ.

Exit mobile version